ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂಬ ಮಾತಿದೆ. ಯಾವ ವ್ಯಕ್ತಿಗೆ ರಕ್ತದ ಅವಶ್ಯವಿದೆಯೋ ಅವರಿಗೆ ರಕ್ತವನ್ನು ನೀಡುವುದು ಪುಣ್ಯದ ಕಾರ್ಯ. ಅಂತೆಯೇ ಕೊರೋನಾ ಸಂಕಷ್ಟ ಕಾಲದಲ್ಲಿ ರಕ್ತದ ಅವಶ್ಯಕತೆ ಬಹಳ ಜನರಿಗಿದ್ದು ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಬಹುದೆಂದು ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ್ ಅಭಿಪ್ರಾಯ ಪಟ್ಟರು.
ಕನಕಪುರ ತಾಲೂಕಿನ ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಹಾರೋಹಳ್ಳಿ ವಿದ್ಯಾಸಂಸ್ಥೆ, ವರ್ತಕರ ಸಂಘ, ಹಿತ ರಕ್ಷಣಾ ಸಮಿತಿ, ಮಾಧ್ಯಮಿಕ ಶಿಕ್ಷಕ ಸಂಘ ಸಂಯುಕ್ತಾಶ್ರಯದಲ್ಲಿ ಮತ್ತು ರಾಷ್ಟ್ರೋತ್ಥಾನ ರಕ್ತ ನಿಧಿ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ದಿನಾಂಕ 12-7-2021 ರ ಸೋಮವಾರದಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತಕ್ಕೆ ಬದಲಿ ಸಂಯೋಜನೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಅಂತೆಯೇ ಕೃತಕ ರಕ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇನ್ನು ರಕ್ತದಾನ ಮಾಡುವುದರಿಂದ ಸಮಸ್ಯೆಗಳು ಬರುತ್ತವೆ ಎಂಬ ಮೂಢ ನಂಬಿಕೆಗಳು ಇಂದಿನ ಕಾಲದಲ್ಲೂ ಇದ್ದು, ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಕೆಡುವುದಿಲ್ಲ, ಮೊದಲು ಈ ರೀತಿಯ ಮೂಢನಂಬಿಕೆಗಳನ್ನು ಜನರಲ್ಲಿ ಹೋಗಲಾಡಿಸಬೇಕು ಎಂದರು.
ಇದೇ ವೇಳೆ ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದ ಸಂಯೋಜಕ ಸಿದ್ದು ನ್ಯಾಮಗೌಡ ಮಾತನಾಡಿ, ಆರೋಗ್ಯವಂತ ಮನಷ್ಯನ ದೇಹದಲ್ಲಿ ಸುಮಾರು ೬ ಲೀಟರ್‌ನಷ್ಟು ರಕ್ತವಿದ್ದು, ರಕ್ತದಾನದಲ್ಲಿ ಕೇವಲ 350 ಮಿ.ಲೀ ರಕ್ತವನ್ನು ಸ್ವೀಕರಿಸಲಾಗುತ್ತದೆ. ಇದರಿಂದ ದಾನಿಗಳಿಗೆ ಯಾವುದೇ ಅಪಾಯವಿಲ್ಲ. ರಕ್ತಕ್ಕೆ ವರ್ಷವಿಡೀ ನಿರಂತರ ಬೇಡಿಕೆ ಇರುತ್ತದೆ. ಏಕೆಂದರೆ ಅಪಘಾತಗಳು, ತುರ್ತು ಮುಂತಾದ ರೋಗಿಗಳು ರಕ್ತದಾನವನ್ನು ಅವಲಂಬಿಸಿದ್ದಾರೆ. ಒಂದು ಬಾರಿ ದಾನಿಗಳಿಂದ ಶೇಖರಿಸಲ್ಪಟ್ಟ ರಕ್ತ ಕೇವಲ ೩೫ ದಿನಗಳವರೆಗೆ ಉಳಿಯುತ್ತದೆ. 35 ದಿನಗಳ ಆನಂತರ ರಕ್ತ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ನಿರಂತರ ರಕ್ತದಾನ ಮಾಡಿದ್ದಲ್ಲಿ ಮಾತ್ರ ಜೀವ ಉಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರುಳೀಧರ್, ಮೊಹಮ್ಮದ್ ಏಜಸ್, ನಾಗರಿಕ ಹಿತರಕ್ಷಣ ವೇದಿಕೆ ಶ್ರೀನಿವಾಸ್, ವೈಸ್ ಪ್ರಿನ್ಸಿಪಾಲ್ ಚಂದ್ರಪ್ಪ ಇನ್ನಿತರರು ಹಾಜರಿದ್ದರು.