ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಹಿಳಾ ವಿಭಾಗದಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಮಹಿಳಾ ಅಭ್ಯಾಸ ವರ್ಗವು ಪಿರಮಿಡ್ ವ್ಯಾಲಿ, ಕೆಬ್ಬೆದೊಡ್ಡಿ, ಹಾರೋಹಳ್ಳಿ ಹೋಬಳಿ, ಕನಕಪುರ ತಾಲ್ಲೂಕಿನಲ್ಲಿ ದಿನಾಂಕ 30-10-2021 ಹಾಗೂ 31-10-2021 ರಂದು ನಡೆಯಿತು.
ಅಭ್ಯಾಸ ವರ್ಗದ ಮೊದಲ ದಿನವಾದ 30-10-2021 ರಂದು ಹತ್ತು ಗಂಟೆಗೆ ಅಭ್ಯಾಸವರ್ಗಕ್ಕೆ ನೋಂದಣಿ ಕಾರ್ಯ ಆರಂಭವಾಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಶಿಕ್ಷಕಿಯರು ನೋಂದಾವಣೆ ಮಾಡಿಕೊಂಡು ಅಭ್ಯಾಸವರ್ಗಕ್ಕೆ ಹಾಜರಾದುದು ಶುಭಾರಂಭ ಎನಿಸಿತು.
ಮಾಜಿ ವಿಧಾನಪರಿಷತ್ ಸದಸ್ಯರು, ಎಬಿಆರ್‌ಎಸ್‌ಎಮ್‌ನ ದಕ್ಷಿಣ ಮಧ್ಯ ಕ್ಷೇತ್ರಿಯ ಪ್ರಮುಖರಾದ ಹಾಗೂ ಸಂಘದ ಹಿರಿಯರಾದ ಬಾಲಕೃಷ್ಣಭಟ್‌ರವರು, ವಿಧಾನಪರಿಷತ್ ಸದಸ್ಯರಾದ ಶ್ರೀ ಶಶೀಲ್ ನಮೋಶಿಯವರು, ಕನಕಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜಯಲಕ್ಷ್ಮಿಯವರು, ಅಕ್ಷರದಾಸೋಹದ ಮುಖ್ಯಸ್ಥರಾದ ಸವಿತಾರವರು, ಕ.ರಾ.ಮಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಚಿದಾನಂದ ಪಾಟೀಲ್‌ರು, ಎಬಿಆರ್‌ಎಸ್‌ಎಮ್‌ನ ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಡಿ.ಕೆಯವರು, ರಾಜ್ಯ ಮಹಿಳಾ ಪ್ರಮುಖರಾದ ಶ್ರೀಮತಿ ವಾಸುಕಿಯವರ ನೇತೃತ್ವದಲ್ಲಿ ಉದ್ಘಾಟನಾ ಸಮಾರಂಭ ಸುಸೂತ್ರವಾಗಿ ನೆರವೇರಿತು. ಶ್ರೀಮತಿ ರೋಹಿಣಿಯವರ ಪ್ರಾರ್ಥನೆ, ಶ್ರೀಮತಿ ಶರಣಮ್ಮನವರ ಸ್ವಾಗತ ಎಲ್ಲವೂ ಅಚ್ಚುಕಟ್ಟಾಗಿತ್ತು.
ಮೊದಲ ಅವಧಿಗೆ ವೇದಿಕೆ ವೈಚಾರಿಕ ಅಧಿಷ್ಠಾನ ಎಂಬ ವಿಷಯಕ್ಕೆ ಸಾಕ್ಷಿಯಾಯಿತು. ಶ್ರೀ ಕೆ ಬಾಲಕೃಷ್ಣಭಟ್, ಎಬಿಆರ್‌ಎಸ್‌ಎಮ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಮುಖರು ಸಂಘಟನೆಗೆ ಬೇಕಾದ ವೈಚಾರಿಕ ಹಿನ್ನೆಲೆ ವಿವರಿಸುತ್ತಾ, ಸಮಾಜ, ಕುಟುಂಬ, ಆರ್ಥಿಕ ಸ್ಥಿತಿಗತಿ, ಬ್ರಿಟಿಷ್ ಶಿಕ್ಷಣದ ಬಗ್ಗೆ ಬೆಳಕು ಚೆಲ್ಲುತ್ತಾ ಶಿಕ್ಷಣ ಎಂಬುದು ಮಾಹಿತಿ ಭರಿತ ಸಂಸ್ಕಾರ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ನಂತರ ಊಟ ಮತ್ತು ವಿಶ್ರಾಂತಿ ಪಡೆಯಲಾಯಿತು. ಅಭ್ಯಾಸವರ್ಗದ ಪ್ರಾರ್ಥನಾಗೀತೆ ಧರೆಗವತರಿಸಿದ ಸ್ವರ್ಗದ… ಎಂಬ ಗೀತೆ 2ನೇ ಅವಧಿಗೆ ನಮ್ಮನ್ನು ಅಣಿಗೊಳಿಸಿತು. ವಿಜ್ಞಾನ ವೇದಗುರುಕುಲದ ಸಂಸ್ಥಾಪಕರು ಮತ್ತು ಸಂಸ್ಕೃತಿ ಚಿಂತಕರಾದ ಶ್ರೀಯುತ ರಾಮಚಂದ್ರ ಭಟ್ ಕೋಟೆಮನೆಯವರು ತಮ್ಮ ಅಗಾಧ ಪಾಂಡಿತ್ಯವನ್ನು ಶಿಕ್ಷಕರೆದುರು ತೆರೆದಿಟ್ಟರು. ಕವಿ ಬೇಂದ್ರೆಯವರ ರೂಪು ಹೋಲುತ್ತಿದ್ದ ಅವರು ಸೂಜಿಗಲ್ಲಿನಂತೆ ಜ್ಞಾನಪರಂಪರೆಯಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ ಹಾಗೂ ಮಹಿಳಾಪರ ನಿಲುವುಗಳಿಗೆ ನೀಡಿದ ತಾರ್ಕಿಕ ಉತ್ತರ ಎಲ್ಲರನ್ನು ತಬ್ಬಬ್ಬಾಗಿಸಿದವು. ತಿರುಚಿಹಾಕಲಾದ ಅದೆಷ್ಟೋ ಇತಿಹಾಸದ ಸಾಲುಗಳನ್ನು ನೆನಪು ಮಾಡುವುದೇ ಅಲ್ಲದೇ ವೇದ, ಉಪನಿಷತ್‌ಗಳಲ್ಲಿನ ಮಹಿಳೆಯರ ಬಗೆಗಿನ ಉಲ್ಲೇಖಗಳು, ಶ್ಲೋಕ, ಸಿದ್ಧಾಂತಗಳನ್ನು ಪರಿಚಯಿಸುವುದೇ ಅಲ್ಲದೇ, ಸಂವಾದದಲ್ಲಿಯೂ ಸರಿಯಾದ ಅರ್ಥಗರ್ಭಿತ ಉತ್ತರ ನೀಡಿ ಪ್ರಮುಖ ಸತ್ಯಾಂಶಗಳನ್ನು ಬಿಚ್ಚಿಟ್ಟರು. ಈ ಉಪನ್ಯಾಸದಲ್ಲಿ ನಾರೀಶಕ್ತಿಯ ವಿವಿಧ ಮುಖಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಉಪನ್ಯಾಸಕರ ಜೊತೆಗೆ ಶ್ರೀಮತಿ ಮಮತಾ ಡಿ.ಕೆಯವರು ಅಧ್ಯಕ್ಷರಾಗಿ ವೇದಿಕೆಯನ್ನು ಹಂಚಿಕೊಂಡರು. ಶ್ರೀಮತಿ ಸುಮಂಗಳಾರವರು ವಂದಿಸಿದರು.
ಅಲ್ಪ ಉಪಾಹಾರ ಹಾಗೂ ಚಹ ನಂತರ ಮತ್ತೊಂದು ಅವಧಿ 75 ನೇ ಸ್ವಾತಂತ್ರ ಅಮೃತ ಮಹೋತ್ಸವದ ಆಚರಣೆಯ ಹಿಂದಿನ ಹೋರಾಟ ಸಾಗಿ ಬಂದ ಹೆಜ್ಜೆ ಗುರುತುಗಳ ಬಗ್ಗೆ ತಿಳಿಸಿಕೊಡಲು ಬಂದ ಶ್ರೀಯುತ ದತ್ತಾತ್ರೇಯ ವಜ್ರಳ್ಳಿಯವರನ್ನು ಹುಬ್ಬಳ್ಳಿಯ ಶ್ರೀಮತಿ ಯಶೋಧಾರವರು ಕಬೀರರ ದೋಹೆಯ ಉದಾಹರಣೆಯೊಂದಿಗೆ ಸ್ವಾಗತಿಸಿದರು. ಭಾರತದ ಅಖಂಡತೆ, ರಾಷ್ಟ್ರೀಯತೆ, ನಮ್ಮ ನಡುವಿನ ವೈಫಲ್ಯಗಳು, ಸ್ವಾತಂತ್ರ ಪೂರ್ವದ ದೀರ್ಘವಾದ ಸಂಘರ್ಷಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟು, ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು. ಅವರ ಆ ಭಾಷಣ ಯಾವುದೇ ಕೃತಿಯನ್ನು ಸರಿಗಟ್ಟಬಲ್ಲದಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು. ವಿವಿಧ ದಂಗೆಗಳು ಹೇಗೆ ನಮ್ಮವರಿಂದಲೇ ವೈಫಲ್ಯ ಕಂಡವು. ವಿವಿಧ ನಾಗರೀಕತೆಯಲ್ಲಿನ ಒಳ ವಿಷಯಗಳು, ತಿರುಚಿ ಹಾಕಲಾದ ವಿಷಯಗಳು, ವೀರವನಿತೆಯರ ಜೀವನ, ಇತಿಹಾಸ ಹೀಗೆ ವಿಷಯದ ಆಳವಿತ್ತು.
15 ನಿಮಿಷ ಬಿಡುವಿನ ನಂತರ 4ನೇ ಅವಧಿಯಲ್ಲಿ ಶ್ರೀಮತಿ ಪಾರ್ವತಿಯವರು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಸಾಧಕ-ಬಾಧಕಗಳು, ನಿಯಮಗಳು, ವಿದ್ಯಾರ್ಥಿ ಕಲಿಕಾ-ಬೋಧನೆಯ ವಿವಿಧ ಹಂತಗಳ ಬಗ್ಗೆ ಶಿಕ್ಷಣ ನೀತಿ ಹೇಳುವುದೇನು? ಎಂಬುದನ್ನು ಪಿಪಿಟಿ ಮೂಲಕ ವಿವರಣೆ ನೀಡಿದರು. ಸಂಜೆ 7.15 ಸಮೀಪಿಸಿದ ಪರಿಣಾಮ ರಾತ್ರಿ ಊಟಕ್ಕೆ ಹೋಗಲು ಶಿಬಿರಾರ್ಥಿಗಳಿಗೆ ಸೂಚಿಸಲಾಯಿತು. ಊಟದ ನಂತರ ರಾತ್ರಿ 8.30 ರಿಂದ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾದವು. ಶಿಕ್ಷಕಿಯರು ಉತ್ಸಾಹದಿಂದ ತಮ್ಮ ಮಾನಸಿಕ ಆಯಾಸದಿಂದ ಹೊರಬಂದು ಬೇಯಿಸಿದ ಕಡಲೆಕಾಯಿಯನ್ನು ಸವಿಯುತ್ತಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
31-10-2021 ರಂದು ಬೆಳಿಗ್ಗೆ 5.30 ಕ್ಕೆ ಎಲ್ಲರೂ ನಿತ್ಯಕರ್ಮ ಮುಗಿಸಿ, ಪಿರಮಿಡ್ ವ್ಯಾಲಿಯ ಧ್ಯಾನಕೇಂದ್ರಕ್ಕೆ ಹಾಜರಾದೆವು. ಒಂದು ಗಂಟೆಯ ಧ್ಯಾನದ ಬಳಿಕ ಡಾ|| ಗಿರಿಸ್ವಾಮಿಯವರಿಂದ ಆರೋಗ್ಯ, ಯೋಗದ ಮಹತ್ವ ಕುರಿತ ಉಪನ್ಯಾಸ ಆಲಿಸಿದೆವು. ನಮ್ಮೆಲ್ಲರಿಗೂ ಉಪಯುಕ್ತ ಮಾಹಿತಿಯನ್ನು ಶ್ರೀಯುತರು ನೀಡಿದರು. ನಂತರ ಬೆಳಗಿನ ಉಪಹಾರವನ್ನು ಸವಿದು, ಅಭ್ಯಾಸವರ್ಗಕ್ಕೆ 9 ಗಂಟೆಯ ದಿನದ ಮೊದಲನೇ ಅವಧಿಗೆ ಹಾಜರಾದೆವು. ಶ್ರೀಮತಿ ರೋಹಿಣಿಯವರ ಸರಸ್ವತಿವಂದನೆಯೊಂದಿಗೆ ಅವಧಿ ಪ್ರಾರಂಭವಾಯಿತು. ಮಹಿಳಾ ಪ್ರಮುಖರಾದ ಶ್ರೀಮತಿ ವಾಸುಕಿಯವರು ಅತಿಥಿ ಮಹೋದಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಎಬಿಆರ್‌ಎಸ್‌ಎಮ್‌ನ ಪ್ರಧಾನ ಕಾರ್ಯದರ್ಶಿಗಳಾ ಶ್ರೀ ಶಿವಾನಂದ ಸಿಂಧನಕೇರಾರವರು ಸಂಘದ ವತಿಯಿಂದ ರಾಜ್ಯಾದಾದ್ಯಂತ ನಡೆಯುವ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನು ನೀಡಿದರು. ಸಂಘವು ವರ್ಷದಲ್ಲಿ ನಡೆಸುವ ಪ್ರಮುಖ 4 ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಸಂಘವು ಕೈಗೆತ್ತಿಕೊಂಡಿರುವ 75 ಶಾಲೆಗಳ ಜೀರ್ಣೋದ್ಧಾರ, ನನ್ನ ಶಾಲೆ-ನನ್ನ ತೀರ್ಥಕ್ಷೇತ್ರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಚಹಾವಿರಾಮದ ನಂತರ 6ನೇ ಅವಧಿ ಆರಂಭವಾಯಿತು. ಮೊದಲನೇ ಅವಧಿಯಿಂದ 5ನೇ ಅವಧಿಯ ಅವಲೋಕನದಲ್ಲಿ ಶ್ರೀಯುತ ಶಿವಾನಂದ ಸಿಂಧನಕೇರಾ, ಶ್ರೀ ಜೆ.ಎಮ್. ಜೋಶಿ, ರಾಜ್ಯ ಖಜಾಂಚಿಗಳು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್ ಹಾಗೂ ಶ್ರೀಮತಿ ಮಮತಾ ಡಿ.ಕೆಯವರು ವೇದಿಕೆ ಅಲಂಕರಿಸಿದ್ದರು. ಚಿದಾನಂದ ಪಾಟೀಲರು ಸಂಘದ ಯೋಜನೆಗಳನ್ನು, ಮಮತಾ ಡಿ.ಕೆಯವರು ಶಿಕ್ಷಕ ಸಮಾಚಾರದ ಕಾರ್ಯವೈಖರಿ, ವ್ಯಾಪ್ತಿ, ಚಂದಾದಾರತ್ವದ ಬಗ್ಗೆ ವಿವರಣೆ ನೀಡಿದರು.
ಏಳನೇ ಅವಧಿಯಲ್ಲಿ ಅಭ್ಯಾಸವರ್ಗಕ್ಕೆ ಬಂದಿದ್ದ ಶಿಕ್ಷಕಿಯರ ಅಭಿಪ್ರಾಯ, ಅನಿಸಿಕೆಗಳಿಗೆ ವೇದಿಕೆಯಾಯಿತು. ಈ ಸುಸಮಯದಲ್ಲಿ ಆಶೀರ್ವಚನ ನೀಡಲು ಬಂದ ಪಿರಮಿಡ್ ವ್ಯಾಲಿಯ ಶ್ರೀ ಪತ್ರೀಜಿಯವರು ಕೊಳಲು ನುಡಿಸಿ, ಕರ್ಣಾನಂದಗೊಳಿಸಿದರು. ಊಟ ಹಾಗೂ ವಿಶ್ರಾಂತಿಯ ನಂತರ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ರವರ ಯಶೋಗಾಥೆ, ಸಮಾಜಸೇವೆ, ಶಿಕ್ಷಣ ಸೇವೆಗಳ ಬಗ್ಗೆ ತಿಳಿಸಿದರು. ಯಶಸ್ವಿ ಮಹಿಳೆಯಾಗಿ, ಅಭ್ಯಾಸವರ್ಗಕ್ಕೆ ಮಾದರಿಯಾಗಿ ಆದರ್ಶವಾದದ ಜೊತೆಗೆ ಮಾರ್ಗದರ್ಶನ ನಮಗೆ ಸಿಕ್ಕಂತಾಯಿತು. ವೇದಿಕೆ ಹಂಚಿಕೊಂಡ ಶ್ರೀಯುತ ಗಂಗಾಧರಾಚಾರಿ, ಸಹಕಾರ್ಯದರ್ಶಿಗಳು ಸಂಘ ಬಲಗೊಳ್ಳುವ ಬಗ್ಗೆ ಸದಸ್ಯರ ಸೇರ್ಪಡೆ ಅತೀ ಅಗತ್ಯ ಎಂದರು.
ಸಮಾರೋಪ ಸಮಾರಂಭ ಹಾಗೂ ಎರಡೂ ದಿನಗಳೂ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀಮತಿ ಮನೋರಮಾರವರು ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು. ಶ್ರೀ ಬಾಲಕೃಷ್ಣ ಭಟ್, ಶ್ರೀ ಶಿವಾನಂದ ಸಿಂಧನಕೇರಾ, ಶ್ರೀ ಚಿದಾನಂದ ಪಾಟೀಲ್, ಶ್ರೀಮತಿ ಮಮತಾ ಡಿ.ಕೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘದ ಬಲವರ್ಧನೆ, ಕಾರ್ಯಚಟುವಟಿಕೆಗಳು ಪ್ರತಿ ಜಿಲ್ಲೆಯಲ್ಲೂ ಹೆಚ್ಚು ಹೆಚ್ಚು ನಡೆಯುತ್ತಿರಬೇಕು ಎಂದು ತಿಳಿಸಿದರು. ಅತಿಥಿಗಳಿಗೆ ವಂದನೆ ಸಲ್ಲಿಸುವ ಮೂಲಕ ಎರಡು ದಿನಗಳ ಅಭ್ಯಾಸವರ್ಗಕ್ಕೆ ತೆರೆ ಎಳೆಯಲಾಯಿತು. ಸಂಘದ ಪುರುಷ ಕಾರ್ಯಕರ್ತರಾದ ಶ್ರೀಯುತ ಬಾಲಕೃಷ್ಣಭಟ್‌ಜೀ, ಶ್ರೀಯುತ ಶಿವಾನಂದ ಸಿಂಧನಕೇರಾಜೀ, ಶ್ರೀಯುತ ಸಂದೀಪ್ ಬೂದಿಹಾಳ್‌ಜೀ, ಶ್ರೀಯುತ ಚಿದಾನಂದ ಪಾಟೀಲ್, ಶ್ರೀಯುತ ಗಂಗಾಧರಾಚಾರಿ, ಶ್ರೀಯುತ ಸುರೇಂದ್ರ, ಶ್ರೀಯುತ ಕೊಟ್ರಪ್ಪ, ಶ್ರೀಯುತ ಶ್ರೀನಿವಾಸ್, ಶ್ರೀಯುತ ವೃಷಭೇಂದ್ರರವರು ಹಾಗೂ ಇನ್ನಿತರರು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು.
ಒಟ್ಟಾರೆ 11 ಜಿಲ್ಲೆಗಳಿಂದ 48 ಜನ ಶಿಕ್ಷಕಿಯರು ಅಭ್ಯಾಸವರ್ಗದಲ್ಲಿ ಭಾಗವಹಿಸಿದ್ದರು. ಕೊನೆಗೆ ಶಾಂತಿಮಂತ್ರದೊಂದಿಗೆ ಅಭ್ಯಾಸವರ್ಗ ಕೊನೆಗೊಂಡಿತು.