ಗುಣಾತ್ಮಕ ಶಿಕ್ಷಣಕ್ಕಾಗಿ ಇಲಾಖೆಯ ಉನ್ನತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಬಹುದು ಆದರೆ ಅವುಗಳನ್ನು ಕಾರ್ಯರೂಪಕ್ಕೆ ತಂದು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಅನುಭವಿ ಶಿಕ್ಷಕರ ಪಾತ್ರ ಮುಖ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಗರಿಮಾ ಪಂವಾರ್ ಹೇಳಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಇಲ್ಲಿಯ ಆರ್.ಜೆ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳ ಅಭಿನಂದನಾ ಹಾಗೂ ಸಮಾರೋಪ ಸಮಾರಂಭವನ್ನು ಉದ್ಛಾಟಿಸಿ ಅವರು ಮಾತನಾಡಿದರು.
ಇಲ್ಲಿರುವ ಸಂಪನ್ಮೂಲ ಶಿಕ್ಷಕರು ಅನುಭವದಲ್ಲಿ ನನಗಿಂತ ಹಿರಿಯರು ಅನುಭವಸ್ಥರು. ತಾವು ಶಾಲಾ ಅವಧಿಯ ನಂತರ ತಮ್ಮ ವೈಯ್ಯಕ್ತಿಕ ಜೀವನಕ್ಕೆ ನೀಡುವ ಸಮಯವನ್ನು ಎಸ್‌ಎಸ್‌ಎಲ್‌ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಸದ್ಬಳಕೆ ಮಾಡಿ, ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಪಂವಾರ್ ನುಡಿದರು.
ಕೆಆರ್‌ಎಂಎಸ್‌ಎಸ್‌ನ ವಿಭಾಗ ಪ್ರಮುಖ ಮಹೇಶ ಬಸರಕೋಡ್ ಮಾತನಾಡಿ, ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕರ ಹಿತಕ್ಕಾಗಿ ಸಮಾಜ ಎಂಬ ಧ್ಯೇಯವನ್ನು ಇಟ್ಟುಕೊಂಡು ಶಿಕ್ಷಕ ಸಂಘಟನೆ ಕೆಲಸ ಮಾಡುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸತತ ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕಾಗಿ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎನ್‌ಇಪಿ 2020 ಅನುಷ್ಠಾನ ಸಮಿತಿ ಸದಸ್ಯರಾದ ಚಿದಾನಂದ ಪಾಟೀಲ್ ಮಾತನಾಡಿದರು.
ವೇದಿಕೆ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಶೋಕ್ ಭಜಂತ್ರಿ, ಡಯಟ್ ಪ್ರಾಂಶುಪಾಲರಾದ ಅಂದಾನಪ್ಪ ವಡಗೇರಿ, ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಚೆನ್ನಬಸಪ್ಪ ಮುಧೋಳ, ಡಿವೈಪಿಸಿಸಿ ಬಿ ಪಾಟೀಲ್, ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ರಮೇಶ ಜಾನಕರ್, ಕೆ ಬಸವರಾಜ, ಸದಾನಂದ ಜೋಶಿ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಆರ್.ಜೆ ಪಿಯು ಕಾಲೇಜಿನ ಪ್ರಾಂಶುಪಾಲ ಡಾ|| ಪ್ರಹ್ಲಾದ ಭುರ್ಲಿ, ಚಂದ್ರಕಾಂತಬಿರಾದಾರ್, ರವಿ ಹೂಗಾರ, ಅಣ್ಣಾರಾಯ ಬಿರಾದಾರ, ಚಂದ್ರಶೇಖರ ಗೋಸಾಲ್ ಇದ್ದರು. ಚಂದ್ರಶೇಖರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ದೇವಿಂದ್ರಪ್ಪ ಗುಂಡಾಪುರ ಸ್ವಾಗತಿಸಿದರು. ಸಂಜೀವಕುಮಾರ ಪಾಟೀಲ್ ನಿರೂಪಿಸಿದರು. ಮಹೇಶ್ ದೇವಣಿ ವಂದಿಸಿದರು.