02-07-2022 ರ ಶನಿವಾರ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ನಡೆಸಿದ ಸದಸ್ಯತ್ವ ನೊಂದಣಿ ಅಭಿಯಾನದಲ್ಲಿ ಹೊಸದಾಗಿ ಸದಸ್ಯತ್ವವನ್ನು ಪಡೆದ ಹಾಗೂ ಪೂರ್ವದಿಂದಲೂ ಸದಸ್ಯರಾಗಿದ್ದ ಶಿಕ್ಷಕರನ್ನು ಸೇರಿಸಿ ನಡೆಸಿಕೊಟ್ಟ ಶಿಕ್ಷಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಖಜಾಂಚಿಗಳಾದ ಶ್ರೀ ಹರಿದಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸರಸ್ವತಿ ವಂದನೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್ಟರವರು ಎಲ್ಲಾ ಹೊಸ ಸದಸ್ಯರು ಮತ್ತು ನೆರೆದವರೆಲ್ಲರಿಗೂ ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಹಾಗೂ ಎಲ್ಲಾ ಸದಸ್ಯರನ್ನು ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಗಂಗಪ್ಪರವರು ಹಾರ್ದಿಕವಾಗಿ ಸ್ವಾಗತಿಸಿದರು. ನಂತರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಕ್ಷಕರು ತಮ್ಮ ಪರಿಚಯವನ್ನು ಮಾಡಿಕೊಟ್ಟರು. ಮೊದಲನೆಯ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ ಜೋಷಿಯವರು ಸಂಘದ ಸೈದ್ಧಾಂತಿಕ ಹಿನ್ನೆಲೆಯನ್ನು ವಿವರವಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಳೆದು ಬಂದ ಹಾದಿ, ಸಂಘವನ್ನು ಕಟ್ಟಿ ಬೆಳೆಸಿದ ಎಲ್ಲಾ ಮಹನೀಯರನ್ನು ನೆನೆಯುತ್ತಾ ಸಂಘದ ಮುಖಾಂತರ ಶೈಕ್ಷಣಿಕ ವರ್ಷದಲ್ಲಿ ನಡೆಸುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ವಲಯ-೩ರ ಕಾರ್ಯದರ್ಶಿ ಶ್ರೀ ಎಂ.ವಿ ಗಂಗಾಧರರವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಎರಡನೆಯ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲರು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಶಿಕ್ಷಣ ಇಲ್ಲಾಖೆ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಿಳಿಸುತ್ತಾ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿರುವ ಪ್ರಥಮ ರಾಜ್ಯ ಕರ್ನಾಟಕ ಎಂದು ತಿಳಿಸುತ್ತಾ ಹಂತ ಹಂತವಾಗಿ ಯಾವ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ತಿಳಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಇದ್ದಂತಹ ಅನೇಕ ಗೊಂದಲಗಳನ್ನು ಪ್ರಶ್ನೋತ್ತರದ ಮೂಲಕ ನಿವಾರಿಸಿದರು.
ಬೆಂಗಳೂರು ವಿಭಾಗ ಪ್ರಮುಖರು, ಉತ್ತರವಲಯ-3ರ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಗಿರವರು ಭಾಗವಹಿಸಿದ್ದ ಎಲ್ಲಾ ಶಿಕ್ಷಕರಿಗೂ ಸ್ವಲ್ಪ ಸಮಯ ಆಟೋಟಗಳನ್ನು ಆಡಿಸಿ ಮನರಂಜನೆ ನೀಡಿದರು. ಆಟದಲ್ಲಿ ಭಾಗವಹಿಸಿ ಶಿಕ್ಷಕರಾದ ಶ್ರೀ ಅಶ್ವಥ್ಥನಾರಾಯಣ್‌ರವರು ಪ್ರಥಮ ಬಹುಮಾನ, ಶ್ರೀ ಶಂಷುದ್ದೀನ್‌ರವರು ದ್ವಿತೀಯ ಬಹುಮಾನ, ಉತ್ತರವಲಯ-೪ರ ಕಾರ್ಯದರ್ಶಿಯಾದ ಶ್ರೀ ಟಿ.ಆರ್. ಮಂಜುನಾಥ್‌ರವರು ತೃತೀಯ ಬಹುಮಾನ ಪಡೆದರು. ಶಿಕ್ಷಕ ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ನಾರಾಯಣ ಭಟ್ಟರು ವಂದಿಸಿ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ವರದಿ : ಶ್ರೀ ಎಂ.ವಿ. ಗಂಗಾಧರ, ಕಾರ್ಯದರ್ಶಿ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-3