16-07-2022 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ, ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯವತಿಯಿಂದ ವ್ಯಾಸ ಮಹರ್ಷಿಗಳ ನೆನಪಿನಲ್ಲಿ ಗುರುಗಳ ಸೇವೆಗಳನ್ನು ಸ್ಮರಿಸುತ್ತಾ ಅವರಿಗೆ ಮಹೋನ್ನತ ಸ್ಥಾನ ನೀಡಿ ಅವರ ಮೌಲ್ಯಗಳನ್ನು ಆದರ್ಶಗಳನ್ನು ಇಂದಿನ ಪೀಳಿಗೆಗೆ ನೀಡುವಂತಹ ಗುರುವಂದನಾ ಕಾರ್ಯಕ್ರಮವನ್ನು ಬೆಟ್ಟಹಲಸೂರು, ಕುದುರಗೆರೆ ಮುಖ್ಯರಸ್ತೆಯಲ್ಲಿರುವ ಪಿ.ಎಮ್.ಎಸ್ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.
ಪಿ.ಎಮ್.ಎಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ಶ್ರೀಮತಿ ಸರಸ್ವತಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಸರಸ್ವತಿ ಮಂತ್ರವನ್ನು ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ನಾರಾಯಣಭಟ್ಟರು ನಡೆಸಿಕೊಟ್ಟರು. ಕ. ರಾ. ಮಾ. ಶಿ. ಸಂಘದ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಗಂಗಪ್ಪರವರು ವೇದಿಕೆಯ ಮೇಲಿನ ಗಣ್ಯರನ್ನು ಪರಿಚಯಿಸಿ, ಸಭೆಯಲ್ಲಿ ನೆರೆದ ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿರುವ ಗಣ್ಯರು ದೀಪ ಪ್ರಜ್ವಲನ ಮಾಡಿ ವ್ಯಾಸ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ. ರಾ. ಮಾ. ಶಿ. ಸಂಘದ ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ ಜೋಷಿಯವರು ಪ್ರಾಸ್ತಾವಿಕ ಭಾಷಣ 1965 ರಲ್ಲಿ ಸಂಘ ಉದಯವಾದಾಗಿನಿಂದ ಸಂಘ ಯಾವ ರೀತಿ ಹಿರಿಯರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದೆ, ಸಂಘದ ಮುಖಾಂತರ ನಡೆಸಿಕೊಂಡು ಬರುತ್ತಿರುವ ಎಲ್ಲಾ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ವಲಯ-3 ರ ಕಾರ್ಯದರ್ಶಿ ಶ್ರೀ ಎಂ.ವಿ ಗಂಗಾಧರರವರು ನಡೆಸಿಕೊಟ್ಟರು.
ಕಾರ್ಯಕ್ರಮದ ಮುಖ್ಯ- ಅತಿಥಿಗಳು, ಪ್ರಮುಖ ವಕ್ತಾರರು ಆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು, ಸಮಾಜ ಸೇವಕರಾದ ಶ್ರೀ ಉಮೇಶ್ ಜಿಯವರು ಭಾರತದ ಶ್ರೇಷ್ಠ ಗುರು ಪರಂಪರೆಯನ್ನು ನೆನಪಿಸುತ್ತಾ ಶಿಕ್ಷಕರು ಭವಿಷ್ಯ ಭಾರತದ ನಿರ್ಮಾತೃಗಳು, ದೇಶ ಹಾಗೂ ಸಮಾಜದ ಭವಿಷ್ಯ ರೂಪಿಸುವವರು. ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಬೆಳೆಸಿದಾಗ ಸಂಸ್ಕೃತಿ ಬೆಳೆಯುತ್ತದೆ. ಅದಿಲ್ಲದಿದ್ದರೆ ವಿಕೃತಿಯಾಗುತ್ತದೆ ಎಂಬುದನ್ನು ತಿಳಿಸುತ್ತಾ ಎಲ್ಲಾ ಗುರುಗಳು ಸಹ ಉತ್ತಮ ಮೌಲ್ಯಗಳನ್ನು ಹೊಂದಿ ಶ್ರೇಷ್ಠ ಪರಂಪರೆಗೆ ನಾಂದಿ ಹಾಕೋಣ ಎಂದು ತಿಳಿಸಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಿ ಎಮ್ ಎಸ್ ಪಬ್ಲಿಕ್ ಶಾಲೆಯ ಮುಖ್ಯಸ್ಥರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆಯ ಉಪಾಧ್ಯಕ್ಷರು ಆದ ಶ್ರೀ ಎ.ಸಿ ಪ್ರದೀಪ್‌ರವರು ದೇಶದ ಅಭಿವೃದ್ಧಿಯಲ್ಲಿ ಯಾವ ರೀತಿ ರೈತ, ಸೈನಿಕ ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರವಹಿಸುತ್ತಾರೆ ಎಂದು ತಿಳಿಸಿದರು.
ಬೆಂಗಳೂರು ವಿಭಾಗ ಪ್ರಮುಖರು, ಉತ್ತರ ವಲಯ-3ರ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೊಡಗಿಯವರು ವಂದನಾರ್ಪಣೆ ನಡೆಸಿಕೊಟ್ಟರು. ಶ್ರೀ ನಾರಾಯಣ ಭಟ್ಟರು ಮುಂದಿನ ಆಗಸ್ಟ್‌ನಲ್ಲಿ ಎಲ್ಲಾ ಶಾಲೆಗಳಲ್ಲಿ ಆಚರಿಸುವ ಭಾರತದ 75 ನೇ ಅಮೃತ ಮಹೋತ್ಸವದ ಬಗ್ಗೆ ತಿಳಿಸುತ್ತಾ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ವರದಿ: ಶ್ರೀ ಎಂ.ವಿ ಗಂಗಾಧರ, ಕಾರ್ಯದರ್ಶಿ