ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕೇಂದ್ರ ಕಾರ್ಯಾಲಯ ಯಾದವಸ್ಮೃತಿ, ಶೇಷಾದ್ರಿಪುರಂ, ಬೆಂಗಳೂರು ಇಲ್ಲಿ ರಾಜ್ಯ ಕಾರ್ಯಕಾರಣಿ ಮತ್ತು ಸಾಮಾನ್ಯ ಸಭೆಯು ದಿನಾಂಕ 9-7-2023 ರಂದು ಭಾನುವಾರ ನಡೆಯಿತು. ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಂದೀಪ ಬೂದಿಹಾಳ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸರಸ್ವತಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭವಾಯಿತು.
ಸರಸ್ವತಿಯ ಪ್ರಾರ್ಥನೆಯನ್ನು ರಾಜ್ಯದ ಉಪಾಧ್ಯಕ್ಷರಾದ ಶ್ರೀಮತಿ ರೋಹಿಣಿ ನಾಯಕ್ ಇವರು ಮಾಡಿದರು. ಸಭೆಯಲ್ಲಿರುವ ಎಲ್ಲರನ್ನು ರಾಜ್ಯ ಸಹ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಂಗಾಧರಾಚಾರಿ ಅವರು ಸ್ವಾಗತಿಸಿ, ಪರಿಚಯಿಸಿದರು. ನಂತರ ಜಿಲ್ಲೆಗಳಿಂದ ಬಂದಿರುವ ಪ್ರತಿನಿಧಿಗಳ ಪರಿಚಯವನ್ನು ಜಿಲ್ಲಾಶಃ ಮಾಡಲಾಯಿತು. ಹಿಂದಿನ ಸಭೆಯ ನಡಾವಳಿಯನ್ನು ಸಭೆಯ ಗಮನಕ್ಕೆ ತಂದು ಅನುಮೋದನೆಯನ್ನು ಪಡೆಯಲಾಯಿತು. ರಾಜ್ಯ ಖಜಾಂಚಿಗಳಾದ ಜೆ.ಎಂ ಜೋಷಿಯವರು ಕಳೆದ ಸಾಲಿನ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದರು.
ಸಭೆಯಲ್ಲಿ ಜಿಲ್ಲೆಯ ಪ್ರಮುಖರು ಕಳೆದ ಕಾರ್ಯಕಾರಿಣಿಯಿಂದ ಇಲ್ಲಿಯವರೆಗೆ ನಡೆದ ಕಾರ್ಯಕ್ರಮಗಳ ವರದಿಯನ್ನು ಸಭೆಯ ಗಮನಕ್ಕೆ ತಂದರು. ಇದರಲ್ಲಿ ವಿಶೇಷವಾಗಿ ಫೋನ್‌ಇನ್ ಕಾರ್ಯಕ್ರಮ, ರಜಾ ಕಾಲದ ಚಟುವಟಿಕೆಗಳು, ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳಿಗೆ ಸ್ಫಂದನೆ, ಯೋಗ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದ ವರದಿಗಳನ್ನು ಮಂಡಿಸಿದರು. ನಂತರ ನೂತನ ರಾಜ್ಯ ಕಾರ್ಯಕಾರಣಿ ರಚನೆಯನ್ನು ಮುಂದಿನ ಸಾಮಾನ್ಯ ಸಭೆಯವರೆಗೆ ಮುಂದೂಡಲು ಅಧ್ಯಕ್ಷರು ಸಭೆಯ ಮುಂದಿಟ್ಟು, ಅನುಮೋದನೆ ಪಡೆಯಲಾಯಿತು. ಅಲ್ಲಿಯವರೆಗೂ ಈಗಿರುವ ಕಾರ್ಯಕಾರಣಿ ಸದಸ್ಯರನ್ನು ಮುಂದುವರೆಸಲು ಸಭೆಯು ತೀರ್ಮಾನಿಸಿತು.
2023-24 ನೇ ಸಾಲಿನಲ್ಲಿ ಸಂಘಟನಾತ್ಮಕ ಮತ್ತು ವಿಸ್ತಾರದ ದೃಷ್ಟಿಯಿಂದ ವಾರ್ಷಿಕ ಯೋಜನೆಯನ್ನು ಪ್ರಧಾನ ಕಾರ್ಯದರ್ಶಿಗಳಾದ ಚಿದಾನಂದ ಪಾಟೀಲ್ ಸಭೆಯಲ್ಲಿ ಮಂಡಿಸಿ, ಸಭೆಯ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವಾರ್ಷಿಕ ಯೋಜನೆಗೆ ಸಭೆಯ ಅನುಮೋದನೆ ಪಡೆದರು.
ಶಿಕ್ಷಕರ ಮತ್ತು ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಜಿಲ್ಲೆಯ ಪ್ರತಿನಿಧಿಗಳಿಂದ ಸಮಸ್ಯೆಗಳನ್ನು ಆಲಿಸಿ ಪಟ್ಟಿಮಾಡಿ, ಸಂಘದ ಪ್ರಯತ್ನದ ಬಗ್ಗೆ ಮತ್ತು ಅವುಗಳನ್ನು ಪರಿಹರಿಸುವಲ್ಲಿ ನಮ್ಮ ಪ್ರಯತ್ನದ ಬಗ್ಗೆ ಮಾಜಿ ವಿಧಾನಸಭೆಯ ಪರಿಷತ್ ಸದಸ್ಯರಾದ ಶ್ರೀ ಅರುಣ ಶಹಾಪುರ ಅವರು ಹೇಳಿದರು. ಮಹಿಳಾ ಕಾರ್ಯದ ಬಗ್ಗೆ ಶ್ರೀಮತಿ ಸೀತಾಲಕ್ಷ್ಮೀಜಿ, ಪ್ರತಿಭಾ ಪರುಸ್ಕಾರದ ವಿಶೇಷತೆ ಮತ್ತು ಆಚರಣೆಯ ಬಗ್ಗೆ ಸಂಘದ ಹಿರಿಯ ಪೋಷಕರಾದ ಶ್ರೀ ಹೆಚ್ ನಾಗಭೂಷಣ್ ರಾವ್ ರವರು ಸಭೆಯ ಗಮನಕ್ಕೆ ತಂದರು.
ಕಾರ್ಯಕ್ಷೇತ್ರದಲ್ಲಿ ಉತ್ಸಾಹದಿಂದ ಮತ್ತು ಪ್ರೇರಣಾದಾಯಕವಾಗಿ ಕಾರ್ಯ ಮಾಡುವುದು ಹೇಗೆ ಮತ್ತು ಸಂಘದ ಚಟುವಟಕೆಗಳನ್ನು ವಿಸ್ತರಿಸುವ ದೃಷ್ಟಿಯಿಂದ ನಮ್ಮೆಲ್ಲರ ಕರ್ತವ್ಯಗಳೇನು ಎನ್ನುವುದರ ಬಗ್ಗೆ ಎಬಿಆರ್‌ಎಸ್‌ಎಂನ ರಾಷ್ಟ್ರೀಯ ಸಹ ಸಂಘಟನಾ ಮಂತ್ರಿಗಳಾದ ಶ್ರೀ.ಜಿ.ಲಕ್ಷ್ಮಣಜಿಯವರು ಸಭೆಗೆ ತಿಳಿಸಿದರು. ವಂದನಾರ್ಪಣೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು. ನಂತರ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೊಟ್ರಪ್ಪನವರು ಶಾಂತಿ ಮಂತ್ರವನ್ನು ಹೇಳುವುದರೊಂದಿಗೆ ಸಭೆಯು ಸಂಪನ್ನಗೊಂಡಿತು.
ಈ ಕಾರ್ಯಕ್ರಮದಲ್ಲಿ ಎಬಿಆರ್‌ಎಸ್‌ಎಂ ನ ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಡಿ.ಕೆ, ಕಾರ್ಯದರ್ಶಿ ಗಳಾದ ವೃಷಭೇಂದ್ರಸ್ವಾಮಿ, ಗುಂಡಾಚಾರ್, ರಾಜ್ಯದ ವಿಭಾಗ ಪ್ರಮುಖರು, ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪ್ರಮುಖ ಕಾರ್ಯಕರ್ತರು ಮತ್ತು ಮಹಿಳಾ ಪ್ರಮುಖರು ಭಾಗವಹಿಸುವುದರೊಂದಿಗೆ ಸಭೆಯನ್ನು ಯಶಸ್ವಿಗೊಳಿಸಿದರು.