ದಿನಾಂಕ: 15-7-2023 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಗುರುವಂದನಾ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಲಯ-3ರ, ಡೇವಿಸ್ ರಸ್ತೆಯಲ್ಲಿರುವ ಸೆಂಟ್ ಅಲ್ಫೋನ್ಸಸ್ ಪ್ರೌಢಶಾಲೆಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಅನೇಕ ಶಿಕ್ಷಕರು, ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಗುರುವಂದನಾ ಪುರಸ್ಕೃತ ಶಿಕ್ಷಕರೊಂದಿಗೆ ವಿಶೇಷವಾದ ರೀತಿಯಲ್ಲಿ ಸುಂದರವಾಗಿ ಆಚರಿಸಲಾಯಿತು.
ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯ ವೃತ್ತಿ ಶಿಕ್ಷಕರಾದ ಶ್ರೀಮತಿ ವಿಶಾಲಾಕ್ಷಿ ಆರ್. ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀಮಲ್ಲಿಕಾರ್ಜುನ ಕೂಡಗಿರವರು ವೇದಿಕೆಯ ಮೇಲೆ ಆಸೀನರಾದ ಗಣ್ಯರನ್ನು ಸಭೆಗೆ ಪರಿಚಯಿಸಿ ಹಾರ್ದಿಕವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗುರುವಂದನಾ ಪುರಸ್ಕೃತ ಶಿಕ್ಷಕರು ಹಾಗೂ ಇತರೇ ಶಿಕ್ಷಕರನ್ನು ಆದರದಿಂದ ಸ್ವಾಗತಿಸಿದರು. ವೇದಿಕೆಯ ಮೇಲಿರುವ ಗಣ್ಯರು ದೀಪ ಪ್ರಜ್ವಲನ ಮಾಡಿ, ವೇದವ್ಯಾಸರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ ಎಂ.ವಿರವರು ಉತ್ತಮ ರೀತಿಯಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು. ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ ಜೋಷಿರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಘ ಬೆಳೆದು ಬಂದ ರೀತಿಯ ಬಗ್ಗೆ ತಿಳಿಸುತ್ತಾ ಇಡೀ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮೂಲಕ ನಡೆಸುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಗುರುವಂದನಾ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಶೈಕ್ಷಣಿಕ ಪ್ರಕೋಷ್ಠದ ಪ್ರಮುಖರಾದ ಶ್ರೀ ಪಿ.ಆರ್ ಬಸವರಾಜುರವರು ಗುರುಪರಂಪರೆಯ ಬಗ್ಗೆ ತಿಳಿಸುತ್ತಾ ಹಿಂದಿನ ಕಾಲದಲ್ಲಿ ಗುರುಕುಲ ಮತ್ತು ಶಿಷ್ಯರ ಸಂಬಂಧಗಳನ್ನು ಇಂದಿನ ಪೀಳಿಗೆಯೂ ಮುಂದುವರೆಸಿ ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದರು. ಇಂದಿನ ಗುರುಗಳು ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಬೆಳೆಸಿ ನವ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು.
ಈ ಶೈಕ್ಷಣಿಕ ಸಾಲಿನಲ್ಲಿ ಗುರುವಂದನಾ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಸಲುವಾಗಿ ಬೆಂಗಳೂರು ಉತ್ತರ ಜಿಲ್ಲೆಯ ೪ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ವಿವಿಧ ವಿಷಯಗಳಲ್ಲಿ ಸಂಪನ್ಮೂಲ ಹೊಂದಿರುವ ಒಂಬತ್ತು ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ ಅವರಿಗೆ ಗುರುವಂದನಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ ಎನ್‌ಕೆ ಎಸ್ ಆಂಗ್ಲಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ನಾಗೇಶ್.ಎಸ್‌ರವರು ಈ ರೀತಿಯ ಕಾರ್ಯಕ್ರಮಗಳು ಶಿಕ್ಷಕರ ಮೇಲಿರುವ ಜವಾಬ್ದಾರಿಯನ್ನು ಹೆಚ್ಚಿಸಿ ಇನ್ನಷ್ಟು ಪ್ರೇರಣೆಯಿಂದ ಕೆಲಸ ಮಾಡಲು ಚೈತನ್ಯವನ್ನು ನೀಡಿದೆ ಎಂದು ತಿಳಿಸಿದರು. ಸೆಂಟ್ ಅಲ್ಫೋನ್ಸಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಗುರುವಂದನಾ ಪುರಸ್ಕೃತರೂ ಆದ ಸಿಸ್ಟರ್- ಅರುಳ್ ಅಮುದಾ.ಜೆ ರವರು ತಮ್ಮ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದು ತುಂಬಾ ಸಂತಸದಾಯಕ ವಿಷಯ ಎಂದು ತಿಳಿಸಿ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲರು ಗುರುಪರಂಪರೆಯ ವೈಶಿಷ್ಟ್ಯವನ್ನು ವಿವರಿಸುತ್ತಾ ಗುರುವಂದನಾ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಪಠ್ಯಕ್ರಮದ ಪರಿಷ್ಕರಣೆಯ ವಿಶ್ಲೇಷಣೆಯನ್ನು ನೆರೆದಿರುವ ಎಲ್ಲಾ ಶಿಕ್ಷಕರ ಜೊತೆ ಸಂವಾದ ಮಾಡುತ್ತಾ ಶಿಕ್ಷಕರ ಗೊಂದಲಗಳನ್ನು ಪರಿಹರಿಸಿದರು. ಬೆಂಗಳೂರು ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪನವರು ವಂದನಾರ್ಪಣೆ ನಡೆಸಿಕೊಟ್ಟರು. ಉತ್ತರ ವಲಯ-3ರ ಕಾರ್ಯದರ್ಶಿ ಶ್ರೀ ಕಿರಣ್ ಕುಮಾರ್‌ರವರ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.