ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 2022-23 ನೇ ಶೈಕ್ಷಣಿಕ ವರ್ಷದಲ್ಲಿ SSಐಅ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಶಾಲಾ ಪ್ರಥಮಿಗರನ್ನು, ದಿವ್ಯಾಂಗರನ್ನು, 90% ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳನ್ನು ಗೌರವಿಸುವ ೩೬ ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವು ದಿನಾಂಕ: 6-8-2023ರಂದು ಭಾನುವಾರ ಲೋಟಸ್ ಕನ್ವೆನ್ಷನ್ ಸೆಂಟರ್ ರಾಮಮೂರ್ತಿ ನಗರದಲ್ಲಿ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು.
ಶ್ರೀಮತಿ ಮಾಯಾ ಪುಭುರವರ ಸರಸ್ವತಿಯ ಪ್ರಾರ್ಥನೆಯೊಂದಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು 10.30 ಕ್ಕೆ ಸರಿಯಾಗಿ ಶುಭಾರಂಭಗೊಂಡಿತು.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಹಿಳಾ ಪ್ರಮುಖರಾದ ಶ್ರೀಮತಿ ಧನಲಕ್ಷಿ ರವರು ಗಣ್ಯರ ಪರಿಚಯ ಮಾಡಿ ಸ್ವಾಗತ ಕೋರಿದರು. ಅನಂತರ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೌರವಾನ್ವಿತ ಅಭ್ಯಾಗತರು ದೀಪಪ್ರಜ್ವಲನೆ ಮತ್ತು ಸರಸ್ವತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಶುಭಕೋರಿದರು.
ಬೆಂಗಳೂರು ದಕ್ಷಿಣ ವಿಭಾಗದ ಪ್ರಮುಖರಾದ ಶ್ರೀ ಬಿ.ಎ. ಸುರೇಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ಬೆಳೆದು ಬಂದ ಹಾದಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಸಂಘದ ವಿವಿಧ ಕಾರ್ಯಕ್ರಮಗಳು, ಪ್ರತಿಭಾಪುರಸ್ಕಾರದ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಿಕೊಟ್ಟರು. ರಾಜ್ಯ ಸಹಕಾರ್ಯದರ್ಶಿ ಯವರಾದ ಶ್ರೀ ಗಂಗಾಧರಾಚಾರಿ ರವರು ಪುರಸ್ಕಾರ ಸ್ವೀಕರಿಸಲಿರುವ ವಿದ್ಯಾರ್ಥಿಗಳಿಗೆ ಸಂಕಲ್ಪ ಬೋಧನೆ ಮಾಡಿದರು.
ಮುಖ್ಯ ಅತಿಥಿಗಳಾದ ಮಾನ್ಯ ಶಾಸಕರು ಮತ್ತು ಮಾಜಿ ನಗರಾಭಿವೃದ್ಧಿ ಸಚಿವರು ಶ್ರೀ ಬೈರತಿ ಬಸವರಾಜು ರವರು ದಿವ್ಯಾಂಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮತ್ತು ಅವರ ಮಕ್ಕಳಿಗೆ ಸ್ಮರಣಿಕೆ, ಪುಸ್ತಕಗಳು, ಪ್ರಶಸ್ತಿಪತ್ರವನ್ನು ನೀಡಿ ಸತ್ಕರಿಸಿ ಸಂಘದ ಕಾರ್ಯವನ್ನು ಪ್ರಶಂಸಿಸಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಡಾ. ಜೋಸೆಪ್ ವಿ.ಜಿ., ಕುಲಪತಿಗಳು ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ರವರು ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡುತ್ತ ಈ ದೇಶದ ಪರಂಪರೆಯನ್ನು ಸ್ಮರಿಸುತ್ತ ಇಂದಿನ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳಿದ್ದು ಶ್ರದ್ಧೆಯಿಂದ ಓದಿ ಗುರಿ ಮುಟ್ಟಲು ಪ್ರಯತ್ನಿಸುವಂತೆ ಕರೆನೀಡಿದರು. ಶ್ರೀ ಚಂದ್ರಕಾಂತ ಕೋನಿಡೆಲ, ವ್ಯವಸ್ಥಾಪಕ ನಿರ್ದೇಶಕರು ನವಜ್ಯೋತಿ ಶೆಲ್ಟರ್ಸ ಪ್ರೈವೇಟ್ ಲಿಮಿಟೆಡ್‌ರವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತಾಡುತ್ತ ಜೀವನದಲ್ಲಿ ಸಾಧನೆ ಮಾಡಲು ಶಿಕ್ಷಣವು ಪ್ರಮುಖ ಸ್ಥಾನವನ್ನು ಪಡೆದಿದೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಅಧ್ಯಯನ ಮಾಡಬೇಕು, ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡು ಸಮಾಜ ಸೇವೆ ಮಾಡ ಬೇಕೆಂದು ತಿಳಿಸಿದರು. ಡಾ. ಜ್ಯೋತಿ ವೆಂಕಟೇಶ್ ಡೀನ್ ಕಲಾವಿಭಾಗ, ಬೆಂಗಳೂರು ನಗರ ವಿಶ್ವವಿದ್ಯಾಲಯರವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡುತ್ತ ಶಿಕ್ಷಣದ ಮಹತ್ವವನ್ನು ವಿವರಿಸಿ ಪ್ರಪಂಚಕ್ಕೆ ನಮ್ಮ ಭಾರತ ದೇಶದ ಜ್ಞಾನ-ವಿಜ್ಞಾನದ ಕೊಡುಗೆಯನ್ನು ಸ್ಮರಿಸಿ, ಸಂಘದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಜಿ. ಲಕ್ಷ್ಮಣ್, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎ.ಬಿ.ಆರ್.ಎಸ್. ಎಂ. ದೆಹಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಈ ದೇಶದ ಸನಾತನ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು, ಪ್ರಪಂಚಕ್ಕೆ ಜ್ಞಾನದ ಮಾರ್ಗದರ್ಶನ ಮಾಡಿದ ವಿಶ್ವಗುರು ಈ ನಮ್ಮ ದೇಶ. ಅನೇಕ ಮಹಾಪುರುಷರು ಈ ದೇಶದಲ್ಲಿ ಉತ್ತಮ ಸಂಸ್ಕೃತಿ-ಸಂಸ್ಕಾರವನ್ನು ಕಟ್ಟಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮ ಆಂದೋಲನದಲ್ಲಿ ದೇಶಕ್ಕಾಗಿ ಲಕ್ಷಾಂತರ ಜನ ರಕ್ತಹರಿಸಿ ಪ್ರಾಣ ಕಳೆದು ಕೊಂಡಿದ್ದಾರೆ. ಅವರೆಲ್ಲರ ತ್ಯಾಗ ಬಲಿದಾನಗಳ ಋಣ ನಮ್ಮ ಮೇಲೆ ಇದೆ. ಈ ದೇಶದ ಸಮಗ್ರ ಅಭಿವೃದ್ಧಿಗಾಗಿ ಯುವ ಜನತೆ ಶ್ರಮಿಸಬೇಕಿದೆ, ದೇಶಭಕ್ತ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ವಿವರಿಸಿ, ಶ್ರೇಷ್ಠ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸಲು ಸಮಯವನ್ನು ಕೊಟ್ಟು ಶ್ರಮಿಸಬೇಕಿದೆ ಎಂದು ಪ್ರೇರಣಾದಾಯಕ ನುಡಿಗಳ ಮೂಲಕ ತಿಳಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದ ಎಲ್ಲ ದಾನಿಗಳಿಗೆ ಶ್ರೀ ವಿಜಯ ಕುಮಾರ್‌ರವರು ಕೃತಜ್ಞತೆ ಸಲ್ಲಿಸಿದರು. ದಕ್ಷಿಣ ಜಿಲ್ಲೆಯ ಅಧ್ಯಕ್ಷರಾದ ವಿದ್ವಾನ್ ನಾರಾಯಣ ಭಟ್ಟರವರು ವಂದನಾರ್ಪಣೆ ಸಲ್ಲಿಸಿದರು. ಕು. ವೇದಶ್ರೀರವರ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಪೂರ್ಣಗೊಂಡಿತು. ದಕ್ಷಿಣ ಜಿಲ್ಲೆಯ ಕಾರ್ಯದರ್ಶಿಗಳಾದ ಡಾ. ವೆಂಕಟರಮಣ ದೇವರು ಭಟ್ಟರವರು ಸಮಗ್ರ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಸಂಘದ ಪೋಷಕರಾದ ಶ್ರೀ ಹೆಚ್. ನಾಗಭೂಷಣರಾವ್ರವರು ಬೆಂಗಳೂರು ದಕ್ಷಿಣ ವಿಭಾಗದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಎಲ್ಲ ಹಿರಿಯರ, ಸಂಘದ ಪದಾಧಿಕಾರಿಗಳ, ಶಿಕ್ಷಕಮಿತ್ರರ, ಹಿತೈಷಿಗಳ ಸಹಾಯ ಸಹಕಾರದಿಂದ ಪ್ರತಿಭಾ ಪುರಸ್ಕಾರ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ವರದಿ : ವಿದ್ವಾನ್ ಡಾ|| ವೆಂಕಟರಮಣ ದೇವರು ಭಟ್ಟ
ಪ್ರಧಾನಕಾರ್ಯದರ್ಶಿ, ಕ.ರಾ.ಮಾ.ಶಿ.ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆ