ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020 ಕ್ಕೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಎನ್‌ಇಪಿ ಯನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯಾದಂತ ಕೋಟಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಿದೆ. ದೇಶದ ಪರಂಪರೆ, ಅಗತ್ಯತೆ ಮತ್ತು ಆಸಕ್ತಿಗಳ ಹಿನ್ನಲೆಯೊಂದಿಗೆ ಮುಂದಿನ 20 ವರ್ಷಗಳ ಶಿಕ್ಷಣ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆ ಹಾಗೂ ಸುಧಾರಣೆಗಳನ್ನು ಗಮನದಲ್ಲಿರಿಸಿಕೊಂಡು ಎನ್‌ಇಪಿಯನ್ನು ಜಾರಿಗೊಳಿಸಲಾಗಿದೆ. ಇದು ದೇಶದ ಶಿಕ್ಷಣಕ್ಕೊಂದು ದೃಷ್ಟಿ ಮತ್ತು ದಿಕ್ಕನ್ನು ನೀಡಬೇಕೆಂಬ ರಾಷ್ಟ್ರೀಯ ಕಾಳಜಿಯೊಂದಿಗೆ ಸರ್ವ ಸಮನ್ವಯಾತ್ಮಕ ಹಾಗೂ ಸಮಗ್ರ ಶಿಕ್ಷಣ ನೀತಿಯಾಗಿದೆ. ಆದರೆ ಈ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮಾತ್ರ ಕರ್ನಾಟಕದಲ್ಲಿ ಅದನ್ನು ತಿರಸ್ಕರಿಸಿ ಹೊಸದಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿದೆ. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಎನ್‌ಇಪಿಯನ್ನು ರದ್ದುಪಡಿಸದಂತೆ ಆಗ್ರಹಿಸಿ ರಾಜ್ಯಾದಂತ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ.
ರಾಜ್ಯದ ನೂರಾರು ಶಿಕ್ಷಣ ತಜ್ಞರು, ಮಾಜಿ ಕುಲಪತಿಗಳು, ಆಡಳಿತ ಮಂಡಳಿ ಸದಸ್ಯರು ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ. ಶಾಲೆ, ಕಾಲೇಜ್, ವಿಶ್ವವಿದ್ಯಾಲಯಗಳ ಕ್ಯಾಂಪಸ್ ಸಹಿತ ಜನರು ಸೇರುವಂತಹ ಸ್ಥಳಗಳಲ್ಲಿ ಕ್ಲಾಸ್ ಹಾಗೂ ಮಾಸ್ ಮಾದರಿಯಲ್ಲಿ ಸಹಿ ಸಂಗ್ರಹ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಎನ್‌ಇಪಿಗೆ ಬೆಂಬಲವಾಗಿ ನಿರ್ದಿಷ್ಟ ನಮೂನೆಯಲ್ಲಿ ಸಹಿ ಪಡೆಯಲಾಗುತ್ತಿದೆ. 10,000 ಕ್ಕೂ ಹೆಚ್ಚು ಶಿಕ್ಷಕರು ಈ ಅಭಿಯಾನದಲ್ಲಿ ತೊಡಗಿದ್ದಾರೆ.
– ಸಂದೀಪ ಬೂದಿಹಾಳ, ರಾಜ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ
ಬೀದರ್ ಜಿಲ್ಲೆಯಲ್ಲಿ ಎನ್‌ಇಪಿ ಸಹಿ ಸಂಗ್ರಹ ಅಭಿಯಾನ
ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಮುಂದುವರಿಸಲು ಒತ್ತಾಯಿಸಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಬೀದರ್‌ನಲ್ಲ್ಲಿ ಶುಕ್ರವಾರ ಸಹಿ ಸಂಗ್ರಹಿಸಲಾಯಿತು. ಸಂಘದ ಪದಾಧಿಕಾರಿಗಳು ನಗರದ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಪಾಲಕರ ಸಹಿ ಸಂಗ್ರಹ ಮಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶದ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ. ವ್ಯಾಪಕ ಚರ್ಚೆ ನಂತರ ರೂಪುಗೊಂಡಿದೆ. ವಿದ್ಯಾರ್ಥಿಗಳ ಹಿತ ಅಡಗಿರುವ ಕಾರಣ ರಾಜ್ಯದಲ್ಲಿ ಇದನ್ನು ಯಾವುದೇ ಕಾರಣಕ್ಕೂ ರದ್ದುಪಡಿಸದೆ, ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಸಂಘದ ಪ್ರಮುಖರಾದ ಬಸವರಾಜ ಸ್ವಾಮಿ, ರಾಜಶೇಖರ ಮಂಗಲಗಿ, ಪರಮೇಶ್ವರ ಬಿರಾದಾರ, ಸಂತೋಷಕುಮಾರ ಮಂಗಳೂರೆ, ಬಸವರಾಜ ಮುಗುಟಾಪುರೆ, ಈಶ್ವರಿ ಬೇಲೂರೆ, ಪಲ್ಲವಿ ಜೋಶಿ ಮತ್ತಿತರರು ಇದ್ದರು.