ಸಂಕಲ್ಪ ದಿನಾಚರಣೆ – ಬೆಂಗಳೂರು ಉತ್ತರ ಜಿಲ್ಲೆ

ದಿನಾಂಕ: 20-01-2024  ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಬೆಂಗಳೂರು ಉತ್ತರ ವಲಯ-೪ರ ಎಂ.ಇ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಮ್ಮ ಈ ಸನಾತನ ರಾಷ್ಟ್ರದ ಇಬ್ಬರು ಮಹಾನ್ ನಾಯಕರಾದ ಸ್ವಾಮಿ ವಿವೇಕಾನಂದರು ಹಾಗು ನೇತಾಜಿ ಸುಭಾಷ್ ಚಂದ್ರಭೋಸ್‌ರವರ ತತ್ವ, ಸಿದ್ಧಾಂತಗಳು ಮತ್ತು ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಕಲ್ಪ ದಿನಾಚರಣೆ ಯನ್ನು ಎಂಇಎಸ್ ಶಿಕ್ಷಣಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ಅನೇಕ ಕಾರ್ಯಕರ್ತರ ಉಪಸ್ಥಿತಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.

ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಶ್ರೀಮತಿ ನೇತ್ರಾರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಬಿ.ಆರ್. ಹರಿದಾಸ್‌ರವರು ವೇದಿಕೆಯ ಮೇಲೆ ಆಸೀನರಾದ ಗಣ್ಯರನ್ನು ಸಭೆಗೆ ಪರಿಚಯಿಸಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸಿದರು. ವೇದಿಕೆಯ ಮೇಲಿನ ಗಣ್ಯರು ದೀಪಪ್ರಜ್ವಲನ ನೆರವೇರಿಸಿ ಸ್ವಾಮಿ ವಿವೇಕಾನಂದರು ಮತ್ತು ನೇತಾಜಿ ಸುಭಾಷ್‌ಚಂದ್ರ ಭೋಸರ ಭಾವ ಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಹಾಗೂ ಗ್ರಾಮಾಂತರ ಜಿಲ್ಲೆಗಳ ವಿಭಾಗ ಪ್ರಮುಖರಾದ ಶ್ರೀಯುತ ಗಂಗಪ್ಪರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಘದ ಪರಿಚಯವನ್ನು ಮಾಡಿಸಿ ಕಳೆದ 58 ವರ್ಷಗಳಿಂದ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮುಖೇನ ನಡೆಸುವ ಎಲ್ಲಾ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಷಿಯವರು ಶಿಕ್ಷಣ-ಶಿಕ್ಷಕ- ವಿದ್ಯಾರ್ಥಿಗಳ ಸಂಯೋಜನೆಯೊಂದಿಗೆ ಸಂಘ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಹಾಗೂ ಶಿಕ್ಷಕರಲ್ಲಿ ತಮ್ಮ ಕರ್ತವ್ಯವನ್ನು ಜಾಗೃತಗೊಳಿಸಲು ಸಂಕಲ್ಪ ದಿನಾಚರಣೆಯನ್ನು ನಿರ್ವಹಿಸುತ್ತಿದ್ದೇವೆ ಎಂಬುದನ್ನು ತಿಳಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಶಿಕ್ಷಕರಿಗೂ ಸಂಕಲ್ಪ ಬೋಧನೆ ಮಾಡಿಸಿದರು.

ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್‌ರವರು ಶುದ್ಧವಾದ, ಪವಿತ್ರವಾದ, ದೂರದೃಷ್ಟಿಯಿಂದ ಶಿಕ್ಷಕರು ಸಂಕಲ್ಪ ಮಾಡಬೇಕು. ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ನೆನೆಸಿಕೊಂಡು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು, ನೇತಾಜಿ ಸುಭಾಷ್ ಚಂದ್ರಭೋಸರ ಆದರ್ಶಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯವರಾದ ವೃಷಭೇಂದ್ರಸ್ವಾಮಿಯವರು ಮಾತನಾಡುತ್ತಾ ಶಿಕ್ಷಕ ವೃತ್ತಿಯನ್ನು ಗೌರವಿಸಿ, ಪ್ರೋತ್ಸಾಹಿಸಲು ಸಂಕಲ್ಪ ದಿನಾಚರಣೆಯನ್ನು ಆಚರಿಸಿಕೊಂಡ ಬರಲಾಗುತ್ತಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತಿಳಿಸಿಕೊಟ್ಟರು.

ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿ ಹಾಗೂ ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಬಿ.ಆರ್ ಹರಿದಾಸ್‌ರವರನ್ನು ಸಂಘದವತಿಯಿಂದ ಸನ್ಮಾನಿಸಲಾಯಿತು. ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ.ಜಿ ಕೂಡಗಿರವರು ವಂದನಾರ್ಪಣೆ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರವಲಯ-3ರ ಅಧ್ಯಕ್ಷರಾದ ಶ್ರೀ ಗಂಗಾಧರ.ಎಂ.ವಿರವರು ಉತ್ತಮವಾಗಿ ನಡೆಸಿಕೊಟ್ಟರು. ಸಾಮೂಹಿಕ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

– ಶ್ರೀ ಗಂಗಾಧರ ಎಂ. ವಿ., ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು, ಉತ್ತರ ವಲಯ-3

Highslide for Wordpress Plugin