ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳ ಪ್ರವಾಸ

೦೩-೦೨-೨೦೨೪ರ ಶನಿವಾರ ಮಧ್ಯಾಹ್ನ ೧೨-೩೦ ಗಂಟೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಷಿರವರ ಮಾರ್ಗದರ್ಶನದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಜಿ ಕೂಡಗಿರವರ ನೇತೃತ್ವದಲ್ಲಿ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಗೆ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಾಲಯ ಯಾದವಸ್ಮೃತಿಯಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳು ಸೇರಿ ಅಲ್ಲಿಂದ ಮಡಿಕೇರಿ, ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರವಲಯ -೩ ರ ಅಧ್ಯಕ್ಷರಾದ ಶ್ರೀ ಗಂಗಾಧರ.ಎಂ.ವಿರವರು ಪ್ರವಾಸದ ಉದ್ದೇಶ ಎಲ್ಲಾ ಕಾರ್ಯಕರ್ತರು ಒಂದೆಡೆ ಸೇರಿ, ಕಲೆತು, ಬೆರೆತು ಒಟ್ಟಿಗೆ ಪ್ರಯಾಣಿಸಿ ತಮ್ಮ ಬಾಂಧವ್ಯವನ್ನು ವೃದ್ಧಿಸಿಕೊಂಡು ಮುಂದಿನ ದಿನಗಳಲ್ಲಿ ಶಿಕ್ಷಕ ಸಂಘದ ಉನ್ನತಿಗೆ ಶ್ರಮಿಸಬೇಕೆಂದು ತಿಳಿಸಿ ಪ್ರವಾಸದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಎರಡೂ ದಿನಗಳ ಮಾಹಿತಿ ಹಾಗೂ ರೂಪುರೇಷೆಯನ್ನು ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪರವರು ತಿಳಿಸಿದರು. ಸಹಲ್ ಕಾರ್ಯಕ್ರಮದ ಮುಖ್ಯ ಉದ್ದೇಶ ಮತ್ತು ಕಾರ್ಯಕರ್ತರು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಮತ್ತು ಪದಾಧಿಕಾರಿಗಳ ಜವಾಬ್ದಾರಿಗಳನ್ನು ಕಾರ್ಯಾಲಯ ಪ್ರಮುಖರಾದ ಶ್ರೀ ಜೆಎಂ ಜೋಷಿರವರು ನೀಡಿದರು. ಸಂಜೆ ೫-೩೦ ನಿಮಿಷಕ್ಕೆ ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಸೇರಿದೆವು. ಟಿಬೆಟಿಯನ್ನರ ಧರ್ಮ ಗುರುಗಳಾದ ಶ್ರೀಯುತ ದಲೈಲಾಮರವರ ಮಾರ್ಗದರ್ಶನದಲ್ಲಿ ನಿರ್ಮಿತವಾದ ಮಂದಿರವು ಭವ್ಯವಾಗಿದೆ, ರಮಣೀಯವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಈ ಸುಂದರವಾದ ಸ್ಥಳದ ಸೊಬಗನ್ನು ಸವಿದು ಎಲ್ಲಾ ಪದಾಧಿಕಾರಿಗಳು ಅಲ್ಲಿಂದ ಕುಶಾಲನಗರದಲ್ಲಿ ಚಹಾ ಸೇವಿಸಿ ಮಡಿಕೇರಿಯತ್ತ ಪ್ರಯಾಣ ಬೆಳೆಸಿದೆವು. ಪ್ರಯಾಣದ ಅವಧಿಯಲ್ಲಿ ಪದಾಧಿಕಾರಿಗಳು ತಮ್ಮದೇ ಆದ ಹಾಸ್ಯಭರಿತ ಮಾತುಗಳಿಂದ ಯಾರಿಗೂ ಪ್ರಯಾಣದ ಆಯಾಸವಿಲ್ಲದೆ ರಾತ್ರಿ ೮-೦೦ ಗಂಟೆಗೆ ಮಡಿಕೇರಿ ತಲುಪಿದೆವು.

ಮಡಿಕೇರಿಯ ಹೃದಯ ಭಾಗದಲ್ಲಿರುವ ಪಾಕಶಾಲಾ ಹೋಟೆಲ್‌ನಲ್ಲಿ ರಾತ್ರಿಯ ಊಟದ ಸವಿಯನ್ನು ಉಂಡು ವಸತಿಗೃಹಕ್ಕೆ ತೆರಳಿದೆವು. ವಸತಿಗೃಹದ ವ್ಯವಸ್ಥೆಯನ್ನು ಮಾಡಿದ ನಮ್ಮ ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪನವರ ಸಹೋದರಿಯ ಮನೆಗೆ ಭೇಟಿ ನೀಡಿ ಅವರ ಆತಿಥ್ಯವನ್ನು ಸ್ವೀಕರಿಸಿ ಅವರಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ಧನ್ಯವಾದಗಳನ್ನು ಅರ್ಪಿಸಲಾಯಿತು.

೦೪-೦೨-೨೦೨೪ರ ಭಾನುವಾರ ಬೆಳಿಗ್ಗೆ ೬-೦೦ ಗಂಟೆಗೆ ಪ್ರಯಾಣ ಆರಂಭಿಸಿ ಓಂಕಾರೇಶ್ವರ ದೇವಾಲಯವನ್ನು ಸಂದರ್ಶಿಸಿ ಸ್ವಾಮಿ ಆಶೀರ್ವಾದ ಪಡೆಯಲಾಯಿತು. ಅಲ್ಲಿಂದ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ ನೋಡಲಾಯಿತು. ಅಲ್ಲಿನ ಪ್ರಕೃತಿ ರಮಣೀಯವಾದ ನಿಸರ್ಗದ ಸೌಂದರ್ಯವನ್ನು ಎಲ್ಲರೂ ಆಸ್ವಾದಿಸಿದೆವು. ಮಡಿಕೇರಿಯ ಉಡುಪಿ ಹೋಟೆಲ್‌ನಲ್ಲಿ ಉಪಹಾರವನ್ನು ಸೇವಿಸಿ ಎಲ್ಲರೂ ತಲಕಾವೇರಿಗೆ ಪ್ರಯಾಣ ಬೆಳೆಸಿದೆವು. ಪ್ರಕೃತಿಯ ಮಡಿಲಲ್ಲಿ ಇರುವ ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಉಗಮ ಸ್ಥಳವನ್ನು ವೀಕ್ಷಿಸಿ ಎಲ್ಲಾ ಪದಾಧಿಕಾರಿಗಳು ಪುನೀತರಾದೆವು. ಕರ್ನಾಟಕದ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯ ಮನೋಹರವಾದ ಸೌಂದರ್ಯವನ್ನು ಸವಿದು ಭಾಗಮಂಡಲದ ಭಗಂಡೇಶ್ವರ ದೇವಾಲಯವನ್ನು ನೋಡಲಾಯಿತು. ದೇವಾಲಯದ ಪ್ರಾಂಗಣದಲ್ಲಿರುವ ಕೆತ್ತನೆಗಳನ್ನು ನೋಡಿ ಮೂಕವಿಸ್ಮಿತರಾದೆವು. ಭಾಗಮಂಡಲದಿಂದ ಮಡಿಕೇರಿಗೆ ಹಿಂದಿರುಗಿ ಅಲ್ಲಿನ ವಸ್ತು ಸಂಗ್ರಹಾಲಯ ಮತ್ತು ಕೋಟೆಯನ್ನು ಸಂದರ್ಶಿಸಿದೆವು. ಮಧ್ಯಾಹ್ನದ ಊಟವನ್ನು ಉಡುಪಿ ದರ್ಶಿನಿಯಲ್ಲಿ ಸವಿದು ಸಂಜೆಯ ವೇಳೆಗೆ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯಕ್ಕೆ ಭೇಟಿಯನ್ನು ಕೊಟ್ಟೆವು. ಎಲ್ಲರೂ ಶುಚಿಯಾಗಿ ದೇವಿಯ ದರ್ಶನ ಪಡೆದೆವು. ಅಲ್ಲಿಯೇ ನದಿ ತೀರದಲ್ಲಿ ಬೈಠಕ್ ಮಾಡಿ ನಮ್ಮ ಪ್ರವಾಸದ ಸವಿ ಕ್ಷಣಗಳ ಅನಿಸಿಕೆಗಳನ್ನು ಶ್ರೀ ಜೆ.ಎಂ ಜೋಷಿರವರ ನೇತೃತ್ವದಲ್ಲಿ ಹಂಚಿಕೊಂಡೆವು. ಎಲ್ಲಾ ಪದಾಧಿಕಾರಿಗಳ ಈ ರೀತಿಯ ಪ್ರವಾಸವು ನಮಗೆ ಸ್ಫೂರ್ತಿಯನ್ನು ಕೊಟ್ಟು ಹೊಸ ಚೈತನ್ಯವನ್ನು ತುಂಬುತ್ತವೆ ಎಂದು ತಿಳಿಸಿದರು. ಅಲ್ಲಿಂದ ಪ್ರಯಾಣ ಬೆಳೆಸಿ ರಾತ್ರಿ ೯-೦೦ ಗಂಟೆಗೆ ನಮ್ಮ ಕಾರ್ಯಾಲಯವನ್ನು ತಲುಪಿ ಸುಖಕರವಾದ ಪ್ರವಾಸವನ್ನು ಮುಗಿಸಿ, ಕಾರ್ಯಕರ್ತರನ್ನು ಅವರವರ ಮನೆಗೆ ಬೀಳ್ಕೊಡಲಾಯಿತು.

– ಶ್ರೀ ಗಂಗಾಧರ.ಎಂ.ವಿ., ಅಧ್ಯಕ್ಷರು, ಕ.ರಾ.ಮಾ.ಶಿ.ಸಂ., ಬೆಂಗಳೂರು ಉತ್ತರವಲಯ-೩

Highslide for Wordpress Plugin