ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಇಬ್ಬರು ಹಿರಿಯ ಕಾರ್ಯಕರ್ತರುಗಳಾದ ಶ್ರೀ ಜೆ.ಎಂ ಜೋಶಿ, ವಿಜ್ಞಾನ ಶಿಕ್ಷಕರು, ಗಾಂಧಿ ಸ್ಮಾರಕ ಪ್ರೌಢಶಾಲೆ, ಬೆಂಗಳೂರು, ಇವರು ಸುಮಾರು 35 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾಗಿದ್ದಾರೆ ಹಾಗೂ ಶ್ರೀ ಗಂಗಪ್ಪ, ಕನ್ನಡ ಶಿಕ್ಷಕ, ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆ ಬೆಂಗಳೂರು, ಇಲ್ಲಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಶಿಕ್ಷಕ ಸೇವೆಯಿಂದ ವಯೋನಿವೃತ್ತರಾಗಿದ್ದಾರೆ.
ಸದರಿ ಶಿಕ್ಷಕರು ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರಾಗಿ ಸುದೀರ್ಘ ಕಾಲ ಸಂಘದ ಕಾರ್ಯ ನಿರ್ವಹಿಸಿದ್ದಾರೆ. ಇವರುಗಳ ಕಾರ್ಯ ವೈಖರಿಯನ್ನು ಈ ಸುಸಂದರ್ಭದಲ್ಲಿ ಶಿಕ್ಷಕ ಸಂಘ ಸ್ಮರಿಸುತ್ತದೆ. ಸಂಘದ ಧ್ಯೇಯೋದ್ದೇಶಗಳಿಗೆ, ಸಂಘದ ಹಿರಿಯರ ಮಾದರಿ ವ್ಯಕ್ತಿತ್ವಕ್ಕೆ ಮನಸೆಳೆದು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ವಿಚಲಿತವಾಗದೆ ಸಂಘ, ಸಂಘ ಕಾರ್ಯ ನಿರ್ವಹಿಸಿದ ಇವರು ಇತರರಿಗೆ ಮಾದರಿಯಾಗಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಯಾವುದೇ ಕೆಲಸ ಕಾರ್ಯ ಮಾಡುವಾಗ ಅಪೇಕ್ಷೆ ಸಹಿತ ಕೆಲಸ ಮಾಡುವುದು ಸಹಜ. ಆದರೆ ಸಂಘದ ಕಾರ್ಯ ಸಮಾಜದ ಕಾರ್ಯವಾದ್ದರಿಂದ ಈ ಸೇವಾ ಕಾರ್ಯ ಮಾಡುವಾಗ ಸ್ವ ಅಪೇಕ್ಷೆಯಿಂದ ಮಾಡಿದರೆ ಸೇವೆಯ ಹೆಸರಲ್ಲಿ ಸ್ವ ಹಿತಕ್ಕಾಗಿ ಸಮಾಜವನ್ನು ದುರ್ಬಳಕೆ ಮಾಡಿಕೊಂಡಂತಾಗುತ್ತದೆ. ಆಗ ವೈಯಕ್ತಿಕ ಅಪೇಕ್ಷೆ ಈಡೇರಿಸಿಕೊಳ್ಳಬಹುದೇ ವಿನಃ ಸಮಾಜದ ಅಪೇಕ್ಷೆ ಈಡೇರಲಾರದು. ಆದ್ದರಿಂದ ಸಮಾಜ ಸೇವೆ ನಿರಾಪೇಕ್ಷೆಯಿಂದ ಕಾರ್ಯ ಮಾಡಿದಾಗ ಮಾತ್ರ ಸಮಾಜದ ಅಪೇಕ್ಷೆ ಈಡೇರುತ್ತದೆ.
ಅದರಂತೆ ಸಂಘದ ಕಾರ್ಯವು ಸಹ ಯಾವುದೇ ಕಾರ್ಯಕರ್ತ ನಿರಾಪೇಕ್ಷೆಯಿಂದ ಕಾರ್ಯ ಮಾಡಿದಾಗ ಮಾತ್ರ ಸಂಘದ ಧ್ಯೇಯ ಈಡೇರಿಕೆಗೆ ಪೂರಕವಾಗುತ್ತದೆ ಹಾಗೂ ಸಂಘ ಕಾರ್ಯ ಬೆಳವಣಿಗೆಗೆ ಸಹಕಾರವಾಗುತ್ತದೆ. ಅಂತಹ ಕಾರ್ಯಕರ್ತರು ಮುಂದಿನ ಪೀಳಿಗೆಗೆ ಮಾದರಿಯಾಗುತ್ತಾರೆ.
ಅದರಂತೆ ಶ್ರೀ ಜೆ.ಎಂ ಜೋಶಿ, ಕಾರ್ಯಾಲಯ ಪ್ರಮುಖರು ಇವರು ನಿರಾಪೇಕ್ಷೆಯಿಂದ ಸಂಘದ ವಿಚಾರಕ್ಕೆ ಮತ್ತು ಕೃ ನರಹರಿಜಿ ರವರ ವ್ಯಕ್ತಿತ್ವದ ಸೆಳೆತಕ್ಕೆ ಮನಸೋತು ೧೯೯೨ನೇ ಇಸವಿಯಿಂದ ಸಂಘದ ಕಾರ್ಯಕ್ಕೆ ಜೋಡಿಸಿಕೊಂಡು ಸುಮಾರು ೩೨ ವರ್ಷಗಳ ಕಾಲ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆ ವಿವಿಧ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿಭಾಯಿಸಿ ಆ ಸ್ಥಾನಗಳಿಗೆ ನ್ಯಾಯ ಒದಗಿಸಿದವರು, ಶಿಕ್ಷಕ ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಸುದೀರ್ಘವಾಗಿ ಅವರ ಒಡನಾಡಿಯಾಗಿ, ಹೆಗಲಿಗೆ ಹೆಗಲಾಗಿ ಸಂಘ ಬೆಳವಣಿಗೆಗೆ ಕಾರಣೀಕರ್ತರಾಗಿದ್ದಾರೆ. ಯಾವುದೇ ಸಂಘ- ಸಂಸ್ಥೆ ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆ ಇದ್ದಾಗ ಮಾತ್ರ ಸಂಘದ ಸುದೀರ್ಘ ಆಯಸ್ಸು ಮತ್ತು ಬೆಳವಣಿಗೆ ಅದರಂತೆ ಸಂಘ ಪ್ರಾರಂಭವಾಗಿ ಐದು ದಶಕಗಳ ಕಾಲ ವಿಶೇಷವಾಗಿ ಶ್ರೀ ಜೋಶಿಯವರು ಸಂಘದ ಕೋಶಾಧ್ಯಕ್ಷ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕತೆಯಿಂದ ಶಿಸ್ತಿನ ಸಿಪಾಯಿಯಾಗಿ ಕಾರ್ಯನಿರ್ವಹಿಸಿ ನಮ್ಮೆಲ್ಲರಿಗೆ ಮಾದರಿಯಾಗಿರುವರು. ಸಂಘದ ಪಯಣದಲ್ಲಿ ಹಲವು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿ ಪ್ರೇರಣಾದಾಯಿಯಾಗಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲೂ ಸಹ ಸಂಘದ ಪ್ರಸ್ತುತ ಕಾರ್ಯಕರ್ತರಿಗೆ ಶ್ರೀಯುತರ ಅನುಭವ ಮತ್ತು ಮಾರ್ಗದರ್ಶನ ನೀಡಲೆಂದು ಸಂಘ ಅವರನ್ನು ಅಪೇಕ್ಷಿಸುತ್ತದೆ ಹಾಗೂ ಒಂದು ವಿಚಾರಕ್ಕಾಗಿ ಒಂದು ಸಿದ್ಧಾಂತಕ್ಕಾಗಿ ಸುದೀರ್ಘ ವರ್ಷಗಳ ಕಾಲ ಸಲ್ಲಿಸಿದ ಅವರ ಸೇವಾ ಕಾರ್ಯವನ್ನು ಸಂಘಸ್ಮರಿಸುತ್ತದೆ. ಶ್ರೀ ಜೆ.ಎಂ ಜೋಶಿಯವರು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಶ್ರೀ ಕೃ. ನರಹರಿ, ಶ್ರೀ ನಾಗಭೂಷಣ್ ರಾವ್, ಶ್ರೀ ಜಿ.ಎಸ್ ಕೃಷ್ಣಮೂರ್ತಿ ಇವರುಗಳು ಸಲಹೆಗಳನ್ನು ನೀಡುತ್ತಿದ್ದರು.
ಇನ್ನೋರ್ವ ಕಾರ್ಯಕರ್ತರಾದ ಶ್ರೀ ಗಂಗಪ್ಪ, ಬೆಂಗಳೂರು ವಿಭಾಗ ಪ್ರಮುಖರು,ಇವರು ೧೯೯೪ನೇ ಇಸವಿಯಿಂದ ಸುಮಾರು ೩೦ ವರ್ಷಗಳಿಂದ ಸಂಘದ ಕಾರ್ಯದಲ್ಲಿ ತೊಡಗಿಸಿಕೊಂಡವರು. ಸಂಘದ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ ಸಂಘ ಬೆಳವಣಿಗೆಯಲ್ಲಿ ಇವರ ಪಾತ್ರವೂ ಸಹ ಮಹತ್ತರವಾಗಿದೆ. ಸಂಘ ಧೋರಣೆ ಹಿರಿಯರ ವ್ಯಕ್ತಿತ್ವ ಮತ್ತು ಅವರ ನಡೆ ಇವರಿಗೆ ಮಾದರಿಯಾಗಿ ನಿರಾಪೇಕ್ಷೆಯಿಂದ ಹಿರಿಯರ ಅಣತಿಯಂತೆ ಹೆಜ್ಜೆಗೆ ಹೆಜ್ಜೆ ಹಾಕಿ ಶಿಕ್ಷಕ ಸಂಘದ ಕಾರ್ಯನಿರ್ವಹಿಸಿದವರು, ಇವರೂ ಸಹ ಸುಮಾರು ೨೯ ವರ್ಷಗಳ ಕಾಲ ಬೆಂಗಳೂರಿನಲ್ಲಿ ಸ್ಥಳೀಯ ಕಾರ್ಯಕರ್ತರಾಗಿದ್ದುಕೊಂಡು ಸಂಘ ಕರೆ ನೀಡಿದಾಗ ಕೂಡಲೇ ಹಾಜರಿರುವ ನಿಷ್ಠಾವಂತ, ಕ್ರಿಯಾಶೀಲ ಕಾರ್ಯಕರ್ತರು. ವಿಶೇಷವಾಗಿ ನಮ್ಮೆಲ್ಲರ ಹಿರಿಯರು, ಕಾರ್ಯಾಲಯ ಪ್ರಮುಖರಾಗಿದ್ದ ದಿವಂಗತ ಕೃಷ್ಣಮೂರ್ತಿ ಜಿರವರ ಹೆಚ್ಚಿನ ಒಡನಾಡಿಯಾಗಿದ್ದು ಅವರಿಂದ ಮಾರ್ಗದರ್ಶನ ಪಡೆದವರು. ಸಂಘದ ವಿವಿಧ ಪ್ರಮುಖ ಕಾರ್ಯಕ್ರಮಗಳಾದ ಪ್ರತಿಭಾ ಪುರಸ್ಕಾರ, ಸಂಕಲ್ಪ ದಿನಾಚರಣೆ, ಇತರೆ ಕಾರ್ಯಕ್ರಮಗಳನ್ನು ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ನಿರಂತರವಾಗಿ ಮತ್ತು ಯಶಸ್ವಿಯಾಗಿ ಇವರ ಜವಾಬ್ದಾರಿಯನ್ನು ಜೆ.ಎಂ ಜೋಶಿಯವರ ಒಡಗೂಡಿ ನಿರ್ವಹಿಸಿಕೊಂಡು ಬಂದವರು. ಅದರಂತೆ ರಾಷ್ಟ್ರೀಯ ಅಧಿವೇಶನಗಳಲ್ಲಿ ಇವರ ಕಾರ್ಯ ಶ್ಲಾಘನೀಯ. ಇವರ ಸುದೀರ್ಘ ಕಾರ್ಯವೂ ಸಹ ಇತರ ಕಾರ್ಯಕರ್ತರಿಗೆ ಮಾದರಿಯಾಗಿದೆ. ಆದ್ದರಿಂದ ಇವರ ಸೇವೆಯನ್ನು ಸಹ ಸಂಘ ಸ್ಮರಿಸುತ್ತದೆ ಹಾಗೂ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಪ್ರಸ್ತುತ ಕಾರ್ಯಕರ್ತರಿಗೆ ನಿಮ್ಮ ಅನುಭವ, ಮಾರ್ಗದರ್ಶನ ಹೀಗೆ ಮುಂದುವರಿಸಲೆಂದು ನಿಮ್ಮನ್ನು ಸಹ ಶಿಕ್ಷಕ ಸಂಘ ಅಪೇಕ್ಷಿಸುತ್ತದೆ.
ಇವರುಗಳು ಸಲ್ಲಿಸಿದ ಶಿಕ್ಷಕ ಸೇವೆಗೆ ಮಾಧ್ಯಮಿಕ ಶಿಕ್ಷಕ ಸಂಘವು ಅಭಿನಂದನೆ ಸಲ್ಲಿಸುತ್ತದೆ ಹಾಗೂ ನಿವೃತ್ತ ಜೀವನ ಸುಖ ಸಂತೋಷ ಆರೋಗ್ಯಕರವಾಗಿರಲೆಂದು ಕೋರುತ್ತದೆ.
– ಎ. ಗಂಗಾಧರಾಚಾರಿ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ