ಬೀದರ್: ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಪರಮೇಶ್ವರ್ ಬಿರಾದಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ಸರಸ್ವತಿ ಶಾಲೆಯ ಗಿರಿಜಾ ಸಭಾ ಮಂಟಪದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಲ್ಲಿ ವಿಜಯಕುಮಾರ ಪಾಟೀಲ ಯರನಳ್ಳಿ (ಗೌರವಾಧ್ಯಕ್ಷ), ರಮೇಶ ಪಾಟೀಲ (ಪ್ರಧಾನ ಕಾರ್ಯದರ್ಶಿ) ಹಾಗೂ ಸಂತೋಷ್ ಮಂಗಳೂರೆ (ಖಜಾಂಚಿ) ಸೇರಿದ್ದಾರೆ.
ಸಂಘದ ಪ್ರಾಂತ ಕಾರ್ಯದರ್ಶಿ ಮಹೇಶ ಬಸರಕೋಡ ಅವರು ಪ್ರಾಸ್ತಾವಿಕವಾಗಿ ಮಾತನಾಡುವುದರೊಂದಿಗೆ ಜಿಲ್ಲಾ ಘಟಕದ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನೂತನ ಪದಾಧಿಕಾರಿಗಳು ಶಿಕ್ಷಕರ ಹಿತರಕ್ಷಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಮಂಗಲಗಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ಹಿರಿಯ ಸದಸ್ಯ ಬಸವರಾಜ ಸ್ವಾಮಿ, ವಿಭಾಗ ಪ್ರಮುಖರಾದ ಚಂದ್ರಶೇಖರ ಪಾಟೀಲ, ಶಾಲಿವಾನ್ ಗಂದಗೆ, ಪ್ರತಿಭಾ ಚಾಮಾ ಮತ್ತಿತರರು ಉಪಸ್ಥಿತರಿದ್ದರು.