ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 2023-24 ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಾಲಾ ಪ್ರಥಮಿಗರನ್ನು, ಶಿಕ್ಷಕರ ಮಕ್ಕಳನ್ನು ಹಾಗೂ ದಿವ್ಯಾಂಗರನ್ನು ಪುರಸ್ಕರಿಸುವ 37 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದಿನಾಂಕ 1-8-2024 ರಂದು ಗ್ಲೋಬಲ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಪದವಿ ಪೂರ್ವ ವಿದ್ಯಾಲಯ ಮಲ್ಲೇಶ್ ಪಾಳ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ವೈಭವೋಪೇತ ಸಭಾಭವನದಲ್ಲಿ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು.
ಸಂಘದ ಹಿರಿಯ ಕಾರ್ಯಕರ್ತರಾದ ಶ್ರೀಮತಿ ಮಾಯಾ ಪ್ರಭುರವರು ವಿದ್ಯಾಧಿದೇವತೆ ಸರಸ್ವತಿ ಮತ್ತು ಜನ್ಮಭೂಮಿ ಭಾರತಮಾತೆಯ ಪ್ರಾರ್ಥನೆಯನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭವನ್ನು ಕೋರಿದರು.
ಶ್ರೀ ಬಿ.ಎ, ಸುರೇಂದ್ರ, ರಾಜ್ಯ ಖಜಾಂಚಿಗಳು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಇವರು ಮುಖ್ಯ ಅತಿಥಿಗನ್ನು ಪರಿಚಯಿಸಿ ಸ್ವಾಗತ ಕೋರಿದರು. ಗಣ್ಯರು ದೀಪಪ್ರಜ್ವಲನೆಯ ಮೂಲಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ಮಾಡಿ ಚಾಲನೆ ನೀಡಿದರು.
ಶ್ರೀಗಂಗಾಧರಾಚಾರಿ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರವರಿಂದ ಪ್ರಾಸ್ತಾವಿಕ ಮಾತನಾಡಿ ಸಂಘಟನೆಯ ಆವಶ್ಯಕತೆ, 1965 ರಲ್ಲಿ ಪ್ರಾರಂಭವಾದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಸಾಧನೆಯ ಹೆಜ್ಜೆಯ ಗುರುತುಗಳನ್ನು ಪಕ್ಷಿನೋಟದಲ್ಲಿ ವಿವರಿಸಿದರು. ಈ ಸಂಘವು ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಸಮಾಜದ ಮಧ್ಯೆ ಕೊಂಡಿಯಾಗಿ ಹೇಗೆ ತನ್ನನ್ನು ಸಮರ್ಪಿಸಿಕೊಂಡಿದೆ ಎಂಬುದನ್ನು ತಿಳಿಸಿದರು. ಶ್ರೀ ಚನ್ನಕೃಷ್ಣಪ್ಪ ಖಜಾಂಚಿಗಳು, ಕೆ.ಆರ್.ಎಂ.ಎಸ್.ಎಸ್ ಬೆಂಗಳೂರು ದಕ್ಷಿಣ ಜಿಲ್ಲೆ ರವರಿಂದ ಪುರಸ್ಕಾರ ಸ್ವೀಕರಿಸಲಿರುವ ವಿದ್ಯಾರ್ಥಿಗಳಿಗೆ ಸಂಕಲ್ಪ ಬೋಧನೆ ಮಾಡಲ್ಪಟ್ಟಿತು.
ಮುಖ್ಯ ಅತಿಥಿಗಳಾದ ಡಾ|| ಕರುಣಾಕರ ರೈ ಬಿ. ಸದಸ್ಯರು ಕಾರ್ಯಕಾರಿ ಪರಿಷತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ರವರು ದಿವ್ಯಾಂಗರನ್ನು ಮತ್ತು ಶಿಕ್ಷಕರ ಮಕ್ಕಳನ್ನು ಪುರಸ್ಕರಿಸಿ ಸಂಘ ನಡೆಸುತ್ತಿರುವ ಈ ಉತ್ತಮ ಕಾರ್ಯವನ್ನು ಪ್ರಶಂಸಿಸಿದರು. ಸಮಾಜದಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸುವ, ಆ ಪ್ರತಿಭೆಗೆ ನೀರೆರೆಯುವ, ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ. ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಎಷ್ಟೋ ಅಂಗವಿಕಲರು, ದುರ್ಬಲರು, ಅವಕಾಶವಂಚಿತರು ಸತತ ಕಠಿಣ ಸಾಧನೆಯಿಂದ ಪ್ರಪಂಚವನ್ನು ತಮ್ಮತ್ತ ಆಕರ್ಷಿಸಿ ಇಂದು ಜಗದ್ವಿಖ್ಯಾತರಾಗಿದ್ದಾರೆ. ಹಾಗೆಯೇ ನಮ್ಮ ವಿದ್ಯಾರ್ಥಿಗಳೂ ಸಹ ಶ್ರೇಷ್ಠ ಸಾಧನೆ ಮಾಡಬೇಕೆಂದು ಹಲವಾರು ದೃಷ್ಟಾಂತಗಳ ಮೂಲಕ ಮಾರ್ಗದರ್ಶನ ಮಾಡಿದರು.
ನೆನಪಿನ ಕಾಣಿಕೆ ಮತ್ತು ಸ್ಮರಣಿಕೆಗಳ ದಾನಿಗಳಾದ ಶ್ರೀ ಚಂದ್ರಕಾಂತ ಕೋನಿಡೆಲ, ವ್ಯವಸ್ಥಾಪಕ ನಿರ್ದೇಶಕರು ನವಜ್ಯೋತಿ ಶೆಲ್ಟರ್‍ಸ್ ಪ್ರೈ ಲಿಮಿಟೆಡ್ ರವರು ಪ್ರತಿಭಾಪುರಸ್ಕಾರವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಹೇಳುತ್ತ – ದೊಡ್ಡ ಗುರಿಯನ್ನಿಟ್ಟುಕೊಂಡು ಅದರ ಸಾಧನೆಗಾಗಿ ಅಷ್ಟೇ ಪರಿಶ್ರಮವನ್ನೂ ಸಹ ಪಡಬೇಕೆಂದರು. ಒಮ್ಮೆಲೇ ಫಲಸಿಗದಿದ್ದರೂ ಮತ್ತೆ ಮತ್ತೆ ಪ್ರಯತ್ನಪಟ್ಟರೆ ಉತ್ತಮ ಫಲ ಸಿಕ್ಕೇ ಸಿಗುತ್ತದೆ ಎಂಬುದನ್ನು ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವಾಗ ವಿದ್ಯಾರ್ಥಿಜೀವನದ ತಮ್ಮ ಯಶಸ್ಸಿನ ಗುಟ್ಟನ್ನು ನಿದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ಕೊಟ್ಟರು. ಮತ್ತು ದೇಶಭಕ್ತಿಯನ್ನು ಹೆಚ್ಚಿಸಿಕೊಂಡು ಈ ದೇಶದ ರಕ್ಷಣೆಗಾಗಿ ಹಾಗೂ ಅಭಿವೃದ್ಧಿಗಾಗಿ ನಮ್ಮ ಕೊಡುಗೆಯನ್ನು ಸಮರ್ಪಿಸಬೇಕೆಂದು ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಸಂದೀಪ ಬೂದಿಹಾಳ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರವರು ಮಾತನಾಡಿ – ಪ್ರತಿಭಾ ಪುರಸ್ಕಾರದ ಮಹತ್ವ, ಸಂಘ 37 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಭಾಪುರಸ್ಕಾರದ ವೈಶಿಷ್ಟ್ಯವನ್ನು ವಿವರಿಸಿದರು. ಮತ್ತು ವಿದ್ಯಾರ್ಥಿಯ ಜೀವನದಲ್ಲಿ ಪ್ರತಿ ಹಂತದಲ್ಲೂ ಸವಾಲುಗಳು ಬರುತ್ತಿರುತ್ತವೆ. ಧೈರ್ಯದಿಂದ ಅವುಗಳನ್ನು ಎದುರಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಉದಾಹರಣೆಗಳನ್ನು ನೀಡಿ ವಿದ್ಯಾರ್ಥಿಗಳನ್ನು ಹರಿದುಂಬಿಸಿದರು.
ಸಂಘದ ಸಕ್ರಿಯ ಕಾರ್ಯಕರ್ತರಾದ ಶ್ರೀಮತಿ ಇಂದ್ರಾಣಿ ಸಹಶಿಕ್ಷಕರು ಜೂನಿಯರ್ ಕಾಲೇಜು ಕಾಡುಗುಡಿ ರವರು ವಂದನಾರ್ಪಣೆ ಮಾಡಿದರು. ಶ್ರೀಮತಿ ಮಾಯಾ ಪ್ರಭುರವರು ಸುಮಧುರವಾಗಿ ಹಾಡಿದ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.