ಜೀವನದಲ್ಲಿ ಜನ್ಮ ನೀಡಿದ ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಗುರುವನ್ನು ಎಂದೂ ಮರೆಯಬಾರದು ಎಂದು ಬಾರತೀಯ ಶಿಕ್ಷಣ ಮಂಡಲದ ಉತ್ತರ ಪ್ರಾಂತದ ಮಹಿಳಾ ಪ್ರಕಲ್ಪ ಪ್ರಮುಖ ಪ್ರತಿಭಾ ಚಾಮಾ ಹೇಳಿದರು. ನಗರದ ಅರುಣೋದಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗುರು ಕರುಣೆ ಇಲ್ಲದೆ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಗುರುವಿನ ಮಾರ್ಗದರ್ಶನ ಬಹಳ ಅವಶ್ಯಕ ಎಂದು ತಿಳಿಸಿದರು.
ಮಂಡಳದ ಶಿಕ್ಷಕ ಪ್ರಕೋಷ್ಠದ ಸಂಚಾಲಕ ಬಸವರಾಜ ಸ್ವಾಮಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಉನ್ನತ ಸ್ಥಾನವಿದೆ ಎಂದರು.
ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ ಬಿರಾದಾರ್ ಮಾತನಾಡಿ, ಹರ ಮುನಿದರೆ ಗುರು ಕಾಯುವನು ಎಂಬ ಗಾದೆ ಗುರುವಿನ ಮಹತ್ವವನ್ನು ಬಿಂಬಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮಾತನಾಡಿ, ಮಕ್ಕಳು ನಿತ್ಯ ಪಾಲಕರ ಪಾದಕ್ಕೆ ನಮಸ್ಕರಿಸಬೇಕು. ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಜಯಕುಮಾರ ಪಾಟೀಲ್ ಯರನಳ್ಳಿ ಮಾತನಾಡಿದರು. ಎಫ್‌ಪಿಎಐ ಸುವರ್ಣ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳು ಪಾಲಕರ ಪಾದಪೂಜೆ ಮಾಡಿದರು. ಗುರುಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ನೀಲಮ್ಮ ಗಜಲೆ ಸ್ವಾಗತಿಸಿದರು. ಲಕ್ಷ್ಮಣ ಪೂಜಾರಿ, ಅಲ್ಕಾವತಿ ಹೊಸದೊಡ್ಡೆ ನಿರೂಪಣೆ ಮಾಡಿದರು. ಭಾರತೀಯ ಶಿಕ್ಷಣ ಮಂಡಲದ ಉತ್ತರ ಪ್ರಾಂತ, ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.