24-7-2024 ರ ಬುಧವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ವ್ಯಾಸ ಮುನಿಗಳು, ವಾಲ್ಮೀಕಿ ಮಹರ್ಷಿಗಳ ನೆನಪಿನಲ್ಲಿ ಗುರುಗಳ ಸೇವೆಗಳನ್ನು ಸ್ಮರಣೆ ಮಾಡುತ್ತಾ ಗುರುಗಳಿಗೆ ಮಹತ್ತರ ಸ್ಥಾನ ನೀಡಿ ಅವರು ನಡೆದ ಹಾದಿ, ಗುರುಗಳ ಮೌಲ್ಯಗಳು, ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳ ಬಾಳಿಗೆ ನೀಡುವಂತಹ ಗುರುವಂದನಾ ಕಾರ್ಯಕ್ರಮವನ್ನು ಶ್ರೀರಾಮಪುರದಲ್ಲಿರುವ ಪವನ್ ಪ್ರೌಢಶಾಲೆಯಲ್ಲಿ ವಿಭಿನ್ನವಾದ ರೀತಿಯಲ್ಲಿ ಶಾಲೆಯ ಆಡಳಿತ ಮಂಡಳಿ ಶಿಕ್ಷಕರು ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳೊಂದಿಗೆ ಆಚರಿಸಲಾಯಿತು.
ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಬಿ.ಆರ್.ಹರಿದಾಸ್‌ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕರ್ನಾಟಕ ರಾಜ್ಯ ಮಾಧ್ಯಮಿಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಗಿರವರು ವೇದಿಕೆಯ ಮೇಲಿನ ಗಣ್ಯರನ್ನು ಹಾಗೂ ಸಭೆಯಲ್ಲಿ ಹಾಜರಿದ್ದ ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿರುವ ಗಣ್ಯರು ಹಾಗೂ ಪದಾಧಿಕಾರಿಗಳು ವ್ಯಾಸ ಮಹರ್ಷಿಗಳು ಹಾಗೂ ಗುರುಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ.ಎಂ.ವಿರವರು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು. ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಗ್ರಾಮಾಂತರ ಜಿಲ್ಲೆಯ ವಿಭಾಗ ಪ್ರಮುಖರಾದ ಗಂಗಪ್ಪರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ೧೯೬೫ರಲ್ಲಿ ಉದಯವಾಗಿ ಶ್ರೀಯುತ ಕೆ.ನರಹರಿಯನವರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದು ತಿಳಿಸಿದರು. ಪವನ್ ಆಂಗ್ಲ ಶಾಲೆಯ ಹಿರಿಯ ಮುಖ್ಯ ಶಿಕ್ಷಕರಾಗಿದ್ದಂತಹವರು ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡಿದರು.
ಪವನ್ ಆಂಗ್ಲ ಪ್ರೌಢಶಾಲೆಯ ಸಂಸ್ಥಾಪಕರು, ಪ್ರಾಂಶುಪಾಲರು ಹಾಗೂ ಸಂಸ್ಕೃತ ಪಂಡಿತರು ಆದ ಡಾ|| ಪ್ರಭಾ ಶ್ರೀಧರ್‌ರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗುರು ಪರಂಪರೆಯನ್ನು ಸ್ಮರಿಸುತ್ತಾ ಮಹರ್ಷಿ ವಾಲ್ಮೀಕಿ, ವೇದವ್ಯಾಸರ ಕುರಿತು ಅನೇಕ ಮಹತ್ವದ ವಿಷಯಗಳನ್ನು ತಿಳಿಸಿದರು. ಸಂಸ್ಕೃತ ಭಾಷೆಯ ಮಹತ್ವ ಮತ್ತು ಜ್ಞಾನ ವೃದ್ಧಿಯನ್ನು ಮಾಡಿಕೊಂಡು ಶಿಕ್ಷಕರು ಯಾವ ರೀತಿ ಸುಸಂಸ್ಕೃತರಾಗಿರಬೇಕು ಎಂದು ತಿಳಿಸಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಜಯಲಕ್ಷ್ಮಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್‌ರವರು ಶಿಕ್ಷಣ ಹಾಗೂ ಶಿಕ್ಷಕ ಕಾರ್ಯಕ್ರಮಗಳನ್ನು ಮೆಲುಕು ಹಾಕುವ ಕಾರ್ಯಕ್ರಮ ಗುರುವಂದನಾ ಕಾರ್ಯಕ್ರಮ ಎಂದು ತಿಳಿಸುತ್ತಾ ಏಕೋ ದೇವಃ ಸರ್ವಭೂತೇಷು ಗೂಡಃ ಹಾಗೂ ನಹಿ ಜ್ಞಾನೇನ ಸದೃಶಂ ಎಂಬ ಸಂಸ್ಕೃತದ ಮಹತ್ವವನ್ನು ಸಾರುತ್ತಾ ಗುರು ಪೂರ್ಣಿಮೆಯ ಮಹಿಮೆಯನ್ನು ತಿಳಿಸಿದರು. ಬೆಂಗಳೂರು ಉತ್ತರ ವಲಯ-3ರ ಕಾರ್ಯದರ್ಶಿ ಶ್ರೀ ಕಿರಣ್ ಕುಮಾರ್‌ರವರು ವಂದನಾರ್ಪಣೆ ನಡೆಸಿಕೊಟ್ಟರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರು ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ ಗೌರವಾಧ್ಯಕ್ಷರು ಆದ ಶ್ರೀ ಜೆ.ಎಂ ಜೋಷಿಯವರು ಹಾಗೂ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಮೂಹಿಕ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ವರದಿ : ಶ್ರೀ ಗಂಗಾಧರ ಎಂ.ವಿ,