ಖಾಲಿ ಹುದ್ದೆ ಭರ್ತಿಗೆ ಬೇಗ ಅನುಮತಿ ನೀಡಿ
ಹುಬ್ಬಳ್ಳಿ: ರಾಜ್ಯದ ಅನುದಾನಿತ ಶಾಲಾ, ಕಾಲೇಜುಗಳಲ್ಲಿ 2015 ರ ನಂತರ ಖಾಲಿ ಆಗಿರುವ ಹುದ್ದೆಗಳ ಭರ್ತಿ ಮಾಡಲು ಆಡಳಿತ ಮಂಡಳಿಗೆ ಅನುಮತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ (ಕೆಆರ್‌ಎಂಎಸ್‌ಎಸ್) ನಿಯೋಗದ ಸದಸ್ಯರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಧಾರವಾಡದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು.
ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ, ಇತ್ಯಾದಿ ಕಾರಣಗಳಿಂದ ತೆರವಾದ ಹುದ್ದೆಗಳ ಭರ್ತಿಗೆ ಅನಮತಿ ನೀಡಬೇಕು. ೧೯೯೫ರ ನಂತರ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಬೇಕು. ಅನುದಾನಿತ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ವಿಮಾ ಸೌಲಭ್ಯ ಒದಗಿಸಬೇಕು. ಕಾಲ್ಪನಿಕ ವೇತನ ಜಾರಿ ಮಾಡಬೇಕು. ೨೦೦೬ರ ನಂತರ ಅನುದಾನಕ್ಕೊಳಪಟ್ಟ ಶಿಕ್ಷಕರಿಗೆ ಹಳೆಯ ಪಿಂಚಣಿ ಅನುಷ್ಠಾನ ಮಾಡಬೇಕು. ಏಳನೇ ವೇತನ ಆಯೋಗ ಜಾರಿಗೊಳಿಸಬೇಕು. ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆ ಭರ್ತಿಗೆ ಈ ಹಿಂದಿನ ಆದೇಶದಂತೆ ವಿದ್ಯಾರ್ಥಿಗಳ ಮಿತಿಯನ್ನು ೧೨೦ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಿಯೋಗದ ಮನವಿ ಸ್ವೀಕರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಹಮತ ವ್ಯಕ್ತಪಡಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ. ನಿಯೋಗದಲ್ಲಿ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ರಾಜ್ಯ ಕಾರ್ಯದರ್ಶಿ ಶ್ರೀಧರ ಪಾಟೀಲ ಕುಲಕರ್ಣಿ, ಪ್ರಾಚಾರ್ಯ ವಿಠ್ಠಲ ವಾಗ್ಮೋಡೆ, ಡಿ. ಹನುಮಂತಪ್ಪ, ಲಿಂಗರಾಜ ಬೆಲ್ಲದ ಇತರರಿದ್ದರು.
ರಾಜ್ಯದ ಅನುದಾನಿತ ಶಾಲಾ, ಕಾಲೇಜುಗಳಲ್ಲಿ ೨೦೧೫ರ ನಂತರ ಖಾಲಿ ಆಗಿರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನಿಯೋಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಧಾರವಾಡದಲ್ಲಿ ಮಂಗಳವಾರ ಮನವಿ ಸಲ್ಲಿಸಿತು. ಕೆಆರ್‌ಎಂಎಸ್‌ಎಸ್ ಅಧ್ಯಕ್ಷ ಸಂದೀಪ ಬೂದಿಹಾಳ, ಶ್ರೀಧರ ಪಾಟೀಲ ಕುಲಕರ್ಣಿ, ವಿಠ್ಠಲ ವಾಗ್ಮೋಡೆ, ಡಿ. ಹನುಮಂತಪ್ಪ, ಲಿಂಗರಾಜ ಬೆಲ್ಲದ ಇತರರಿದ್ದರು.