ಪ್ರಾಂತ ಅಭ್ಯಾಸ ವರ್ಗದ ವರದಿ

ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿಯಲ್ಲಿ 23-11-2024 ಶನಿವಾರ 10 ಘಂಟೆಗೆ ಎರಡು ದಿನದ ಪ್ರಾಂತ ಅಭ್ಯಾಸ ವರ್ಗದ ಉದ್ಘಾಟನಾ ಸಮಾರಂಭ ನಡೆಯಿತು. ಶ್ರೀಮತಿ ಮಾಯಾಪ್ರಭು ಇವರು ಸುಶ್ರಾವ್ಯವಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು. ಶ್ರೀ ಅನಿಲ್‌ಕುಮಾರ್ ಬಿರಾದಾರ್, ಸಹ ಕಾರ್ಯದರ್ಶಿ, ಇವರು ವೇದಿಕೆಯಲ್ಲಿರುವ ಗಣ್ಯರನ್ನು ಪರಿಚಯದೊಂದಿಗೆ ಸ್ವಾಗತಿಸಿದರು. ಗಣ್ಯರು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು.

ಕೆ.ಆರ್.ಎಂ.ಎಸ್.ಎಸ್ ರಾಜ್ಯ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಎರಡು ದಿನದ ಪ್ರಾಂತ ಅಭ್ಯಾಸವರ್ಗದ ಉದ್ದೇಶ ಹಾಗೂ ಮಹತ್ವವನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು. ಈ ಎರಡು ದಿನದ ಅಭ್ಯಾಸ ವರ್ಗದಿಂದ ನಾವು ಪ್ರೇರಣೆ ಹಾಗೂ ಸ್ಫೂರ್ತಿ ಪಡೆದು ನಮ್ಮ ನಮ್ಮ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗಲಿದ್ದೇವೆ ಎಂಬುದಾಗಿ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ಎಬಿಆರ್‌ಎಸ್‌ಎಂ ನ ಸಹ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಲಕ್ಷ್ಮಣಜಿ ಎಬಿಆರ್‌ಎಸ್‌ಎಂ ಸಂಘಟನೆಯ ಕಾರ್ಯ ವಿಸ್ತಾರವನ್ನು ವಿವರಿಸಿದರು. ೩೦ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಈ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು ೧೨ ಲಕ್ಷ ಸದಸ್ಯರನ್ನು ಹೊಂದಿದ ಅತ್ಯಂತ ಬೃಹತ್ ಸಂಘಟನೆಯಾಗಿದೆ. ಇದೇ ರೀತಿ ಕೆಆರ್‌ಎಂಎಸ್‌ಎಸ್ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶ್ರೀ ಕೃ ನರಹರಿ, ಶ್ರೀ ಬಾಲಕೃಷ್ಣಭಟ್, ಶ್ರೀ ಅರುಣ್ ಶಹಾಪೂರ್ ಮುಂತಾದ ಮಹನೀಯರು ಎಂಎಲ್‌ಸಿ ಆಗಿ ಆಯ್ಕೆ ಹೊಂದಿ ನಮ್ಮ ಶಿಕ್ಷಕ ಸಂಘಕ್ಕೆ ಶಕ್ತಿ ತುಂಬಿದ್ದಾರೆ.

ಎನ್‌ಇಪಿ-೨೦೨೦ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಪ್ರತಿಕ್ಷಣವೂ ಎಬಿಆರ್‌ಎಸ್‌ಎಂ ಮತ್ತು ಕೆ.ಆರ್.ಎಂ.ಎಸ್.ಎಸ್ ಸೂಕ್ತ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದೆ. ದೇಶ ಮೊದಲು ಆಮೇಲೆ ನಾವು ಎಂಬ ಶ್ರೇಷ್ಠ ತತ್ವದಡಿಯಲ್ಲಿ ಈ ಸಂಘಟನೆ ಮುನ್ನಡೆದಿದೆ ಎಂಬುದಾಗಿ ವಿವರಿಸಿದ ಶ್ರೀಯುತರು ಕೊನೆಯಲ್ಲಿ ಭಾರತ ಜ್ಞಾನ ಪರಂಪರೆಯ ಆಳ ಅಗಲ – ವಿಸ್ತಾರದ ಬಗ್ಗೆ ಉದಾಹರಣೆ ಸಹಿತ ಮಾಹಿತಿ ನೀಡಿದರು.

ಇನ್ನೋರ್ವ ವಿಶೇಷ ಅಭ್ಯಾಗತರಾಗಿ ಆಗಮಿಸಿದ ಡಾ|| ಜೋಸೆಫ್. ವಿ.ಜಿ ಇವರ ಒಡಗೂಡಿ ವೇದಿಕೆ ಮೇಲಿರುವ ಗಣ್ಯರು ಸಂಘದ ಪೋಷಕರಾದ ಶ್ರೀ ಹೆಚ್ ನಾಗಭೂಷಣರಾವ್‌ರವರು ಬರೆದ ಕಾರ್ಯಕರ್ತ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದರು ಶ್ರೀ ಜೋಸೆಫ್‌ರವರು ತಮ್ಮ ಆಶಯ ನುಡಿಯಲ್ಲಿ ಶಿಕ್ಷಕ ಗುರು ಆಗಿ ಅತ್ಯಂತ ಪ್ರೀತಿಯಿಂದ ಮಕ್ಕಳಿಗೆ ಬೋಧಿಸುವ ಕೌಶಲ್ಯವನ್ನು ಹೊಂದಿರಬೇಕು. ಬೋಧಿಸುವ ವಿಷಯವನ್ನು ಅಗಾಧವಾಗಿ ಪ್ರೀತಿಸಬೇಕು. ವಿದ್ಯೆ ಬಲ್ಲವನಿಗೆ ಭಯವಿಲ್ಲ. ನಾವೆಲ್ಲರೂ ಸೇರಿ ಶ್ರೇಷ್ಠ ಭಾರತವನ್ನು ಕಟ್ಟೋಣ ಎಂಬುದಾಗಿ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು. ಶ್ರೀಯುತರು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಾಧಿಪತಿಗಳು, ನಮ್ಮ ಕೆ.ಆರ್.ಎಂ.ಎಸ್.ಎಸ್ ನ ಹಿತೈಷಿಗಳೂ ಆಗಿದ್ದಾರೆ.

ಎರಡನೇ ಅವಧಿಯಲ್ಲಿ ಮಾಜಿ ಎಂಎಲ್‌ಸಿಗಳು, ಕೆ.ಆರ್.ಎಂ.ಎಸ್.ಎಸ್‌ನ ಭೂತಪೂರ್ವ ಅಧ್ಯಕ್ಷರು, ಶಿಕ್ಷಣ ಪ್ರೇಮಿಗಳೂ, ಸದಾ ಉತ್ಸಾಹಿಗಳೂ ಆದ ಪ್ರೊ|| ಶ್ರೀ ಬಾಲಕೃಷ್ಣಭಟ್‌ರವರು ಕಾರ್ಯಕರ್ತ ಎಂಬ ವಿಷಯವನ್ನು ಈ ಅರ್ಥಪೂರ್ಣವಾಗಿ ನಡೆಸಿಕೊಟ್ಟರು.

ಆರಂಭದಲ್ಲಿ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ. ಜೋಶಿ ಇವರು ಶ್ರೀಯುತರನ್ನು ಸ್ವಾಗತಿಸಿ, ಸಭೆಗೆ ಪರಿಚಯಿಸಿದರು.

ಕಳೆದ ಜನವರಿ ೨೨-೨೦೨೪ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆ ಯಾದ ಭವ್ಯ ಬಾಲರಾಮನ ಶ್ರೇಷ್ಠ ಮೂರ್ತಿಯ ಪ್ರತಿಷ್ಠಾಪನೆಯ ಕ್ಷಣಗಳನ್ನು ಆರಂಭದಲ್ಲಿ ಉಲ್ಲೇಖಿಸಿದರು. ಶ್ರೀಯುತರು ಸಭೆಯಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತ ಪದಾಧಿಕಾರಿಗಳು ಮತ್ರಮುಗ್ಧರಾಗುವಂತೆ ಉದಾಹರಣೆ ಸಹಿತ ತಮ್ಮ ಅನುಭವದ ಪಾಠವನ್ನು ಎಲ್ಲರೂ ಸವಿಯುವಂತೆ ಮಾಡಿದ್ದು ನಿಜಕ್ಕೂ ಸದಾ ಸ್ಮರಣೀಯವಾದ ಸಂಗತಿ.

ಕಾರ್ಯಕರ್ತ- ದೇಶ ಕಾಯುವ ಯೋಧ, ಹೋರಾಟದ ಮನೋಭಾವವನ್ನು ಹೊಂದಿರಬೇಕು. ಸಂವಹನ ಕೌಶಲ್ಯ, ಹೃದಯವಂತಿಕೆ ಅಧ್ಯಯನಶೀಲತೆ, ವಿಚಾರಕ್ಕೆ ಬದ್ಧತೆ, ಪೂರ್ವ ತಯಾರಿ, ಪೂರ್ಣ ತಯಾರಿ, ಸಮಯ ಪ್ರಜ್ಞೆ, ಸಮಯ ಪಾಲನೆ ಮುಂತಾದ ಗುಣ ಸ್ವಭಾವವನ್ನು ಕಾರ್ಯಕರ್ತ ಹೊಂದಿರಬೇಕು ಎಂಬುದಾಗಿ ಸೂಕ್ತ ಮಾರ್ಗದರ್ಶನದೊಂದಿಗೆ ವೀರಸಾವರ್ಕರ್ ಸಂದೇಶವನ್ನು ಉಲ್ಲೇಖಿಸಿ ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹಾನ್ನೋಪಕರಣೇ ಎಂಬ ಉಕ್ತಿಯೊಂದಿಗೆ ಶ್ರೀಯುತರು ದ್ವಿತೀಯಗೋಷ್ಠಿಯನ್ನು ನಡೆಸಿಕೊಟ್ಟರು.

ಮಧ್ಯಾಹ್ನದ ಅವಧಿಯಲ್ಲಿ ಶ್ರೀ ಚಿದಾನಂದ ಪಾಟೀಲ್ ಕೆ.ಆರ್.ಎಂ.ಎಸ್.ಎಸ್ ನ ಉಪಾಧ್ಯಕ್ಷರು. ಇವರು ಶ್ರೀ ಎಸ್.ವಿ ಸಂಕನೂರು ಇವರನ್ನು ಸಭೆಗೆ ಪರಿಚಯಿಸಿದರು. ಎಸ್.ವಿ ಸಂಕನೂರು ಮೂಲತಃ ಪ್ರಾಚಾರ್ಯರು, ಧಾರವಾಡ ವಿಶ್ವವಿದ್ಯಾಲಯದ ನಾಲ್ಕು ಬಾರಿ ಸೆನೆಟ್ ಸದಸ್ಯರಾಗಿ ಹಾಗೂ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ.

ಶೈಕ್ಷಣಿಕ ವಲಯದಲ್ಲಿ ಇರುವ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿಷಯದ ಕುರಿತು ಶ್ರೀಯುತರು ಪ್ರಸ್ತುತ ನಮ್ಮ ರಾಜ್ಯದಲ್ಲಿ ಶಿಕ್ಷಣಕ್ಷೇತ್ರ ಯಾವ ಸ್ಥಿತಿಯಲ್ಲಿದೆ, ಸರ್ಕಾರದ ದೂರದೃಷ್ಟಿ ಹಾಗೂ ಇಚ್ಛಾಶಕ್ತಿಯ ಅಭಾವದಿಂದಾಗಿ ಶಿಕ್ಷಣಕ್ಷೇತ್ರ ಅಲಕ್ಷ್ಯಕ್ಕೆ ಒಳಗಾಗಿದೆ ಎಂಬ ಸುದೀರ್ಘವಾದ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದದ್ದು ವಿಶೇಷವಾಗಿತ್ತು.

ಉದಾಹರಣೆಗೆ ಎನ್‌ಇಪಿ- ೨೦೨೦ಯನ್ನು ಎಸ್‌ಇಪಿ ಎಂಬುದಾಗಿ ಬದಲಾವಣೆ ಮಾಡಿದ ಸಂದರ್ಭ, ಶಿಕ್ಷಕರ ಖಾಯಂ ನೇಮಕಾತಿ ಮಾಡದೇ ಅತಿಥಿ ಶಿಕ್ಷಕರ ಸಂಖ್ಯೆ ಹೆಚ್ಚಾಗುತ್ತಿರುವುದು. ಜ್ಯೋತಿ ಸಂಜೀವನಿ ಯೋಜನೆ ಮುಂತಾದ ಹತ್ತು ಹಲವು ಪ್ರಮುಖ ಸಮಸ್ಯೆಗಳತ್ತ ಬೆಳಕು ಚಲ್ಲಿದರು. ಅಷ್ಟು ಮಾತ್ರವಲ್ಲ ಪರಿಹಾರವನ್ನು ಸಹ ತಮ್ಮ ಅಪಾರವಾದ ಅನುಭವದ ಹಿನ್ನೆಲೆಯಲ್ಲಿ ಸಭೆಯ ಗಮನಕ್ಕೆ ತಂದರು. ಶಿಕ್ಷಕರು ತಮಗಿರುವ ವಿವಿಧ ಸಮಸ್ಯೆಗಳನ್ನು ಶ್ರೀಯುತರೊಂದಿಗೆ ಹಂಚಿಕೊಂಡರು. ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವಿ ಸಂಕನೂರು ಅವರು ಶಾಂತಚಿತ್ತದಿಂದ ಅತ್ಯಂತ ಚುರುಕಾಗಿ ಪರಿಹಾರ ಹೇಳಿದ್ದು, ಶ್ರೀಯುತರ ಕಾರ್ಯಕ್ಷಮತೆ ಬಗ್ಗೆ ಇನ್ನು ಹೆಚ್ಚಿನ ವಿಶ್ವಾಸ ಮೂಡುವಂತಾಯಿತು.

ಸಂಜೆಯ ಅವಧಿಯಲ್ಲಿ ಕಾರ್ಯಕರ್ತರ ಕಾರ್ಯವಿಸ್ತಾರ ಎಂಬ ವಿಷಯದ ಕುರಿತು ಎಬಿಆರ್‌ಎಸ್‌ಎಂನ ಸಹ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಲಕ್ಷ್ಮಣ್‌ರವರು ಕಾರ್ಯಕರ್ತ ಪದಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿ ನವೋತ್ಸಾಹ ಬರುವಂತೆ ಮಾಡಿದ್ದು ಈ ಅವಧಿಯ ವಿಶೇಷತೆ. ಆರಂಭದಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಕೆ.ಆರ್.ಎಂ.ಎಸ್.ಎಸ್‌ನ ಸಂಘಟನೆಯ ವಾಸ್ತವ ಸ್ಥಿತಿಯನ್ನು ಮನಗಂಡು ಸಂಘಟನೆಯ ವಿಸ್ತಾರದ ಬಗ್ಗೆ ಹತ್ತು ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಒಂದು ಜಿಲ್ಲೆಯಲ್ಲಿ ೫ ತಾಲ್ಲೂಕು ಇದ್ದಲ್ಲಿ ೨೦ ಕ್ಲಸ್ಟರ್ ರಚನೆ, ಹೀಗೆ ಜಿಲ್ಲಾ ಸಮಿತಿಯಲ್ಲಿ ೪೦ ಆದರ್ಶ ಸಂಖ್ಯೆ ಇರಬೇಕು. ಪ್ರಾಂತ ಬೈಠಕ್‌ನಲ್ಲಿ ಇವರು ಭಾಗವಹಿಸುವಂತಾಗಬೇಕು. ಸರ್ಕಾರಿ/ ಅನುದಾನಿತ/ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಶಿಕ್ಷಕರೂ ಸಹ ನಮ್ಮ ಸಂಘದ ಬೆಳವಣಿಗೆಗೆ ಸಹಕಾರ ನೀಡುವಂತಾಗಬೇಕು ಕಾರ್ಯಕರ್ತರಿಗೆ ಸಂಘಟನೆಯ ವಿಸ್ತಾರದ ಬಗ್ಗೆ ವಿವರಿಸಿದರು. ಕಾರ್ಯಕರ್ತರಿಗೆ ಇದರಿಂದ ತಮ್ಮ ಜವಾಬ್ದಾರಿ ಬಗ್ಗೆ ಪುನಃ ಮೆಲುಕು ಹಾಕುವಂತೆ ಈ ಅವಧಿ ಇತ್ತು.

ಸಂಜೆ ಪರಿಚಯ ಬೈಠಕ್ ನಡೆಯಿತು. ಜಿಲ್ಲಾಶಃ ಎಲ್ಲಾ ಕಾರ್ಯಕರ್ತರು ಸ್ವಯಂ ಪರಿಚಯ ಮಾಡಿಕೊಟ್ಟರು. ರಾತ್ರಿಯ ಊಟದ ನಂತರ ಅವಧಿಯನ್ನು ಸಂಘದ ಪ್ರಚಾರಕರಾದ ಶ್ರೀ ರವೀಂದ್ರಜಿ, ಪ್ರಸ್ತುತ ಸಹ ಬೌದ್ಧಿಕ ಪ್ರಮುಖರು ಶ್ರೀಮತಿ ಅಹಲ್ಯಾಬಾಯಿ ಹೋಳ್ಕರ್ ಬಗ್ಗೆ ಗೋಷ್ಠಿಯನ್ನು ತೆಗೆದುಕೊಂಡಿದ್ದರು. ಗೋಷ್ಠಿಯ ಆರಂಭದಲ್ಲಿ ಶ್ರೀ ಗಂಗಾಧರಾಚಾರಿಯವರು ಸ್ವಾಗತಿಸಿ, ಪರಿಚಯಿಸಿದರು.

೧೭೨೫ ಮೇ ೩೧ರಂದು ಶ್ರೀಮತಿ ಅಹಲ್ಯ ಬಾಯಿ ಹೋಳ್ಕರ್‌ರವರು ಜನಿಸಿ ತಮ್ಮ ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಿದ ವೀರ ಮಹಿಳೆ ಪ್ರಸ್ತುತ ವರ್ಷ ೩೦೦ನೇ ಜಯಂತಿಯ ಹಿನ್ನೆಲೆಯಲ್ಲಿ ಈ ವೀರಮಹಿಳೆಯ ಯಶೋಗಾಥೆಯನ್ನು ಸಭಿಕರಿಗೆ ಮನಮುಟ್ಟುವಂತೆ ವಿವರಿಸಿದರು. ಪೇಶ್ವೆಗಳ, ಬಾಲಾಜಿ ಬಾಜಿರಾಯ ಸುಬೇದಾರ್ ಪವಾರ್ ಈ ಮುಂತಾದ ಆಡಳಿತದ ಸಂಗತಿಗಳನ್ನು ಇಸವಿ ಸಹಿತ ನಿರರ್ಗಳವಾಗಿ ವಿವರಿಸುವ ಪರಿ ಶ್ರೀಯುತರ ಮಾತುಗಾರಿಕೆಗೆ ಸಾಕ್ಷಿಯಾಯಿತು. ಅಸಾಧಾರಣವಾದ ಸ್ಮರಣಾಶಕ್ತಿ, ಇತಿಹಾಸವನ್ನು ನಿರೂಪಿಸಿದ ಶೈಲಿ ಎಲ್ಲರ ಕಣ್ಣಿಗೆ ಕಟ್ಟುವಂತಾಯಿತು, ಪ್ರತ್ಯಕ್ಷ ಚಿತ್ರಗಳು ಕಣ್ಣ ಮುಂದೆ ಬಂದಂತಾಯಿತು. ನಿಜಕ್ಕೂ ಶ್ರೀಯುತರ ನುಡಿ ಕೇಳಿ ಸಂಪೂರ್ಣ ಸಭೆ ಸ್ತಬ್ಧವಾಗಿತ್ತು. ರಾತ್ರಿ೧೦-೧೫ರ ಸಮಯವಾದರೂ ಎಲ್ಲರೂ ವೀರನಾರಿಯ ಜನ್ಮಚರಿತ್ರೆ ಕೇಳುವಲ್ಲಿ ಸಂಪೂರ್ಣ ತಲ್ಲೀನರಾಗಿದ್ದರು.

ವರ್ಗದ ೨ನೇ ದಿನ ದಿನಾಂಕ: ೨೪-೧೧-೨೦೨೪, ಭಾನುವಾರ ಬೆಳಗಿನ ಅವಧಿಯಲ್ಲಿ ಕಾರ್ಯಪದ್ಧತಿ ವಿಷಯದ ಕುರಿತು ಶ್ರೀ ರಘು ಅಕಮಂಚಿ, ಮಹಾವಿದ್ಯಾಲಯ ಶಿಕ್ಷಕ ಸಂಘದ ಪ್ರಮುಖರು, ಸೇವಾ ಭಾರತಿ ಅಧ್ಯಕ್ಷರಾದ ಇವರು ಮಾತನಾಡಿದರು. ಇವರನ್ನು ಆರಂಭದಲ್ಲಿ ಶ್ರೀ ಶ್ರೀಧರ್ ಪಾಟೀಲ್ ಕುಲಕರ್ಣಿಯವರು ಸ್ವಾಗತಿಸಿ, ಪರಿಚಯಸಿದರು. ಶ್ರೀ ರಘು ಅಕಮಂಚಿಯವರು ರಾಷ್ಟ್ರ ಪುನರ್ ನಿರ್ಮಾಣ ನಮ್ಮ ಗುರಿ, ಶಿಕ್ಷಣ, ಸಮಾಜ, ದೇಶ, ಕಾರ್ಯಪದ್ಧತಿ ಎನ್ನುವುದು ನಮ್ಮ ಸಂಘದ ಸಂಸ್ಕೃತಿ, ವ್ಯಕ್ತಿಯಲ್ಲಿ ವ್ಯಕ್ತಿತ್ವ ನಿರ್ಮಾಣ ತನ್ಮೂಲಕ ರಾಷ್ಟ್ರನಿರ್ಮಾಣ, ದೇವರ ಪ್ರಸಾದ ಎಂಬ ಭಾವನೆಯ ಅಡಿಯಲ್ಲಿ ಸಂಘಟನೆಯ ತತ್ವ ಸಿದ್ಧಾಂತಕ್ಕೆ ನಾವು ಬದ್ಧರು ಎಂಬುದಾಗಿ ಕಾರ್ಯಪದ್ಧತಿಯ ಸಮಗ್ರ ರೂಪು ರೇಷೆಗಳನ್ನು ಮನದಟ್ಟು ಮಾಡಿಕೊಟ್ಟರು.

ಹೊಸ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಎಂಬ ಎರಡು ಗುಂಪುಗಳನ್ನಾಗಿ ಮಾಡಿ ಒಂದು ಗುಂಪಿಗೆ ಶ್ರೀ ರಘು ಅಕಮಂಚಿ ಮತ್ತು ಇನ್ನೊಂದು ಗುಂಪಿಗೆ ಶ್ರೀ ಲಕ್ಷ್ಮಣ್‌ರವರು ಕಾರ್ಯಪದ್ಧತಿಯ ವಿಷಯದ ಕುರಿತು ಮಾರ್ಗದರ್ಶನ ಮಾಡಿದರು. ಇವರನ್ನು ಆರಂಭದಲ್ಲಿ ಶ್ರೀ ಗುಂಡಾಚಾರ್‌ರವರು ಸ್ವಾಗತಿಸಿ, ಪರಿಚಯಿಸಿದರು.

ಶ್ರೀ ಲಕ್ಷ್ಮಣ್ ಜೀಯವರು ಸಂಘದ ವಿಚಾರಧಾರೆಯಿಂದ ನಾವೆಲ್ಲ ಪ್ರೇರಿತರಾಗಿದ್ದೇವೆ. ಇಂದು ನಮ್ಮ ದೇಶ-ರಕ್ಷಣೆ, ಶಿಕ್ಷಣ, ಆರೋಗ್ಯ, ಆರ್ಥಿಕತೆ ಡಿಜಿಟಲ್ ತಂತ್ರಜ್ಞಾನ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ನಮ್ಮ ಸಂಘಟನೆಯ ಕಾರ್ಯಪದ್ಧತಿಯ

೬ ಅಂಶಗಳು
೧. ಸಾಮೂಹಿಕತಾ ೨. ಅನೌಪಚಾರಿಕತಾ ೩. ಪಾರಸ್ಪರಿಕತಾ ೪. ಅನಾಮಿಕತಾ೫. ಸಂವಾದ ೬. ಪೂರ್ವಯೋಜನಾ- ಪೂರ್ಣಯೋಜನಾ ಕಾರ್ಯಕ್ಕೆ ಬದ್ಧತೆಯೇ ಕಾರಣ ಎಂದು ವಿವರಿಸಿದರು.

ಮುಂದಿನ ಅವಧಿಯಲ್ಲಿ ವಾರ್ಷಿಕವಾಗಿ ಆಚರಿಸುವ ಸಂಘದ ವಿವಿಧ ಕಾರ್ಯಕ್ರಮಗಳು ಈ ವಿಷಯದ ಬಗ್ಗೆ ಡಾ|| ವಿಷ್ಣುವರ್ಧನ ರೆಡ್ಡಿ ಹಾಗೂ ಪ್ರೊ|| ಗುರುನಾಥ ಬಡಿಗೇರರವರು ಮಾತನಾಡಿದರು. ಇವರನ್ನು ಆರಂಭದಲ್ಲಿ ಸಭೆಗೆ ಶ್ರೀ ಸುರೇಂದ್ರರವರು ಪರಿಚಯಿಸಿದರು. ಇಬ್ಬರೂ ಸಹ ಕಾರ್ಯಕರ್ತರ ಸ್ಪಷ್ಟಗುರಿ ಏನು? ಸಂಘದ ಕಾರ್ಯಕ್ರಮದ ಸಂಯೋಜನೆ ಹೇಗಿರಬೇಕು? ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸುವ ಬಗೆ ಹೇಗೆ? ಸಾಮೂಹಿಕ ನಿರ್ಣಯಕ್ಕೆ ಆಧ್ಯತೆ. ಹಕ್ಕು ಮತ್ತು ಕರ್ತವ್ಯ ಮೊದಲಾದ ಅನೇಕ ಮಹತ್ವದ ಸಂಗತಿಗಳನ್ನು ಉಲ್ಲೇಖಿಸಿ ಸಂಘಟನೆಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು.

ಮಧ್ಯಾಹ್ನದ ಅವಧಿಯಲ್ಲಿ ಕರ್ನಾಟಕ ಇತಿಹಾಸ ಈ ವಿಷಯದ ಕುರಿತು ಡಾ|| ಚೂಡಾಮಣಿ ನಂದಗೋಪಾಲ್ ರವರು ಮಾತನಾಡಿದರು. ಇವರನ್ನು ಸಭೆಗೆ ಶ್ರೀಮತಿ ಮನೋರಮರವರು ಸ್ವಾಗತಿಸಿ, ಪರಿಚಯಿಸಿದರು ಇತಿಹಾಸವನ್ನು ಚೆನ್ನಾಗಿ ಅರಿತವ ಮಾತ್ರ ನೂತನ ಇತಿಹಾಸವನ್ನು ನಿರ್ಮಿಸುವಲ್ಲಿ ಭಾರತೀಯ ಪರಂಪರೆ, ಇತಿಹಾಸ, ಸಂಸ್ಕೃತಿ, ಕಲೆ, ನೃತ್ಯ ಶಿಲ್ಪಕಲೆ ಮುಂತಾದವುಗಳನ್ನು ನಾವು ಶಿಕ್ಷಕರು ತರಗತಿಯಲ್ಲಿ ಬೋಧಿಸಬೇಕೆಂದು ಹೇಳಿದರು. ಪಿಪಿಟಿ ಮೂಲಕ ಶ್ರೀಮತಿಯವರ ಪ್ರಸ್ತುತಿ ಎಲ್ಲರ ಮನದಾಳವನ್ನು ತಲುಪಿತು. ದೇಶದಲ್ಲಿಯೇ ೬ನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯವು ಇತಿಹಾಸ, ಕಲೆ, ಸಂಸ್ಕೃತಿ, ಜ್ಞಾನಪರಂಪರೆಗೆ ನಮ್ಮ ರಾಜ್ಯದ ಕೊಡುಗೆ ಅಪಾರ ಎಂಬುದಾಗಿ ತುಂಬಾ ಲವಲವಿಕೆಯಿಂದ ಉತ್ಸಾಹದಿಂದ ಅವಧಿಯನ್ನು ಸ್ವೀಕರಿಸಿ ಎಲ್ಲರಿಗೂ ಮಾದರಿಯಾದರು.

ಅಭ್ಯಾಸವರ್ಗದ ಸಮಾರೋಪದಲ್ಲಿ ಶ್ರೀ ಎನ್. ತಿಪ್ಪೇಸ್ವಾಮಿ, ಪ್ರಸ್ತುತ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯವಾಹರು. ಮತ್ತು ಶ್ರೀ ಮಹೇಂದ್ರ ಕಪೂರ್, ಪೂರ್ಣಾವಧಿ ಪ್ರಚಾರಕರು ಇವರನ್ನು ಶ್ರೀ ವೃಷಭೇಂದ್ರ ಸ್ವಾಮಿಯವರು ಪರಿಚಯಿಸಿದರು, ಶ್ರೀ ಮಹೇಂದ್ರ ಕಪೂರ್‌ರವರು ಮಾತನಾಡುತ್ತಾ ಶ್ರೀ ಅಬ್ದುಲ್ ಕಲಾಂರವರ ಸ್ವಪ್ನ ಸಾಕಾರವಾಗುವಂತೆ ನಾವು ಶ್ರಮಿಸೋಣ, ಶಸ್ತ್ರ- ಶಾಸ್ತ್ರ ಎರಡೂ ಬೇಕು. ಎಲ್ಲಾ ಸ್ತರಗಳಲ್ಲಿ ಶಿಕ್ಷಣ ನೀಡುವಾಗ ನಮ್ಮ ದೇಶದ ಬಗ್ಗೆ ಗೌರವ ಪ್ರೀತಿ ಹುಟ್ಟುವಂತೆ ಸದಾ ನಾವು ಪ್ರಯತ್ನ ಮಾಡೋಣ ಎಂಬುದಾಗಿ ಅಭಿಪ್ರಾಯಪಟ್ಟಿರುವ ಶ್ರೀಯುತರ ನುಡಿ ನೇರವಾಗಿ ಶಿಕ್ಷಕರ ಹೃದಯಬಡಿದು ಎಚ್ಚರಿಸಿತು.

ಶ್ರೀ ಎನ್ ತಿಪ್ಪೇಸ್ವಾಮಿಯವರು ಆರಂಭದಲ್ಲಿ ಜನಸೇವಾ ವಿದ್ಯಾಕೇಂದ್ರದ ಸಮಗ್ರ ಪರಿಚಯ ಮಾಡಿಕೊಟ್ಟರು. ಸಮಾಜದ ಪರಿವರ್ತನೆಯ ರೂವಾರಿಗಳು ಶಿಕ್ಷಕರು. ನಮ್ಮದು ಶಿಕ್ಷಕರ, ಉಪನ್ಯಾಸಕರ ಸಂಘಟನೆ ಅಂದರೆ ವಿದ್ಯಾವಂತರ ಸಂಘಟನೆ ಇತರ ಸಂಘಟನೆಗಳಿಗೆ ನಾವು ಮಾದರಿಯಾಗಬೇಕೆಂದು ತಿಳಿಸಿದರು. ದೇಶಕ್ಕಾಗಿ ಸಮಯ ನೀಡುವ ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಅಭ್ಯಾಸವರ್ಗದ ಸಂಚಲನಾ ಸಮಿತಿಯ ಪ್ರಮುಖರಾದ ಶ್ರೀ ಸಂದೀಪ್ ಬೂದಿಹಾಳ್, ಶ್ರೀ ವೃಷಬೇಂದ್ರಸ್ವಾಮಿ, ಶ್ರೀ ಕೊಟ್ರಪ್ಪ, ಶ್ರೀ ಗಂಗಾಧರಾಚಾರಿ, ಶ್ರೀ ಸುರೇಂದ್ರ, ಶ್ರೀರಾಜು(ಮಂಡ್ಯ), ಶ್ರೀ ಗಂಗಪ್ಪ, ಶ್ರೀ ಮಲ್ಲಿಕಾರ್ಜುನ ಕೂಡಗಿ ಮುಂತಾದ ಅನೇಕ ಹಿರಿಯ ಕಾರ್ಯಕರ್ತರ ಪೂರ್ವ ಯೋಜನೆ, ಪೂರ್ಣಯೋಜನೆಯ ಫಲವೇ ಈ ಎರಡು ದಿನದ ಪ್ರಾಂತ ಅಭ್ಯಾಸ ವರ್ಗದ ಯಶಸ್ಸಿಗೆ ಕಾರಣವಾಯಿತು.

Highslide for Wordpress Plugin