38 ನೆಯ ಪ್ರತಿಭಾ ಪುರಸ್ಕಾರ – ಬೆಂಗಳೂರು ಉತ್ತರ ಜಿಲ್ಲೆ

ದಿನಾಂಕ: 27-7-25 ರ ಭಾನುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಆಯೋಜಿಸಿದ್ದ ೨೦೨೪-೨೫ರ ೨೫ನೇ ಶೈಕ್ಷಣಿಕ ಸಾಲಿನ ಬೆಂಗಳೂರು ಉತ್ತರ ಜಿಲ್ಲೆಯ ಸರ್ಕಾರಿ, ಅನುದಾನಿತ, ಬಿ.ಬಿಎಂ.ಪಿ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಾಲಾ ಪ್ರಥಮಿಗ ವಿದ್ಯಾರ್ಥಿಗಳು ಹಾಗೂ ಶೇಕಡಾ ೮೫ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳಿಗೆ ೩೮ನೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರು ಮಲ್ಲೇಶ್ವರಂನ ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರೊಂದಿಗೆ ವಿಶಿಷ್ಠ ರೀತಿಯಲ್ಲಿ ಯಶಸ್ವಿಯಾಗಿ ನೆರವೇರಿತು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಬಿ.ಆರ್ ಹರಿದಾಸ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಗೌರವಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ.ಜಿ.ಕೂಡಗಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಪರಿಚಯಿಸಿ ಹಾಜರಿದ್ದ ಎಲ್ಲರನ್ನೂ ಹಾರ್ದಿಕವಾಗಿ ಸ್ವಾಗತಿಸಿದರು. ನಂತರ ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯರು ದೀಪ ಪ್ರಜ್ವಲನವನ್ನು ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರಾದ ಶ್ರೀ ಜೆ.ಎಂ ಜೋಶಿರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಬೆಳೆದು ಬಂದ ಹಾದಿ ಮತ್ತು ಸಂಘದ ಮೂಲಕ ಪ್ರತಿ ಶೈಕ್ಷಣಿಕ ವರ್ಷದಲ್ಲಿ ನಡೆಸುವ ಎಲ್ಲ ಕಾರ್ಯಕ್ರಮಗಳ ಮಾಹಿತಿಯನ್ನು ವಿವರವಾಗಿ ನೀಡಿದರು. ಬೆಂಗಳೂರು ಉತ್ತರ ಹಾಗೂ ಗ್ರಾಮಾಂತರ ಜಿಲ್ಲೆಯ ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪರವರು ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆಯನ್ನು ನೆರವೇರಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆಯ ಮಾಜಿ ಕಾರ್ಯದರ್ಶಿಗಳು, ಹಿರಿಯ ಪೋಷಕರು ಆಗಿದ್ದ ದಿವಂಗತ ಶ್ರೀ ಎಂ.ಎಸ್ ಜನಾರ್ಧನ್‌ರವರಿಗೆ ಸಭೆಯಲ್ಲಿದ್ದ ಎಲ್ಲರೂ ಗೌರವ ಪೂರ್ವಕವಾಗಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸೂಚಿಸಿ ೩೮ನೆಯ ಪ್ರತಿಭಾ ಪುರಸ್ಕಾರವನ್ನು ಅವರಿಗೆ ಅರ್ಪಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಉತ್ತರವಲಯ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ ಎಂ.ವಿರವರು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟರು. ೨೦೨೪-೨೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಪ್ರಥಮಿಗರಲ್ಲಿ ಪ್ರಥಮಿಗ ವಿದ್ಯಾರ್ಥಿಗಳನ್ನು ಹೊಸದಿಗಂತದ ದೈನಿಕ ಸಂಪಾದಕರಾಗಿದ್ದ, ಹಿರಿಯ ಪತ್ರಕರ್ತರು ಆದ ಶ್ರೀ ದು.ಗು ಲಕ್ಷ್ಮಣರವರು ತಮ್ಮ ಭಾಷಣದಲ್ಲಿ ತಮ್ಮ ಹಿಂದಿನ ಬಾಲ್ಯದ ಶಿಕ್ಷಣದ ನೆನಪುಗಳನ್ನು ಮೆಲುಕು ಹಾಕುತ್ತಾ ಶಿಕ್ಷಣ ಅಂದರೆ ಸಂಸ್ಕಾರವಾಗಿತ್ತು ಆ ದಿನಗಳಲ್ಲಿ ಎಂದು ತಿಳಿಸುತ್ತಾ ಶ್ರೀಯುತ ಅಬ್ದುಲ್ ಕಲಾಂರವರ ಬಾಲ್ಯದ ದಿನಗಳನ್ನು ನೆನಪಿಸಿ ಮುಂದೆ ಅವರು ಯಾವ ರೀತಿ ಸಾಧನೆ ಮಾಡಿದರು ಎಂದು ತಿಳಿಸಿದರು. ನಮ್ಮ ಭಾರತ ದೇಶವು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರರನ್ನು ಪ್ರಪಂಚದ ಅನೇಕ ದೇಶಗಳಿಗೆ ಹೇಗೆ ರಫ್ತು ಮಾಡುತ್ತಿದೆ ಎಂದು ತಿಳಿಸುತ್ತಾ ಎಲ್ಲಾ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ಹಿಮಾಂಶು ಜ್ಯೋತಿ ಕಲಾಪೀಠದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮಮೋಹನ್.ಬಿ.ಎಸ್‌ರವರು ಶೇಕಡಾ ೮೫ಕ್ಕಿಂತ ಹೆಚ್ಚು ಅಂಕ ಗಳಿಸಿದ ಶಿಕ್ಷಕರ ಮಕ್ಕಳಿಗೆ ಸ್ಮರಣಿಕೆ, ಪುಸ್ತಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅಭಿನಂದಿಸಿ ಮಾತನಾಡುತ್ತಾ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ಕೋರುತ್ತಾ ದೇಶವನ್ನು ಸದೃಢವಾಗಿ ಕಟ್ಟುವ ಕಾರ್ಯಕ್ಕೆ ಎಲ್ಲರೂ ಒಗ್ಗೂಡಬೇಕೆಂಬ ಕರೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳ ವಿವಿರಗಳನ್ನು ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳಾದ ಶ್ರೀಮತಿ ದಾಕ್ಷಾಯಿಣಿ. ಶ್ರೀ ಮಂಜುನಾಥ್.ಟಿ.ಆರ್, ಶ್ರೀ ಪಾಂಡುರಂಗಯ್ಯ ಶ್ರೀ ಮಲ್ಲಪ್ಪ, ಶ್ರೀ ಜಯರಾಮ್.ಟಿರವರುಗಳು ನೀಡಿದರು. ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಯ ಅನಿಸಿಕೆಯಲ್ಲಿ ಲಗ್ಗೆರೆಯ ಅಶ್ವಿನಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಚಿನ್ಮಯ.ಎಂರವರು ತನ್ನ ಯಶಸ್ಸಿಗೆ ಕಾರಣರಾದ ಪೋಷಕರು, ಶಿಕ್ಷಕರು, ಶಾಲಾ ಆಡಳಿತ ಮಂಡಳಿಯನ್ನು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾಯಣ ಭಟ್‌ರವರು ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳನ್ನು ಗೌರವಿಸಿ, ಅಭಿನಂದಿಸಿ ಮಾತನಾಡುತ್ತಾ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯ, ೩೮ ವರ್ಷಗಳಿಂದ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹ ನೀಡುತ್ತಿರುವುದು ಸಮಾಜಕ್ಕೆ ಮೇಲ್ಪಂಕ್ತಿಯಾಗಿದೆ ಎಂದು ತಿಳಿಸಿದರು. ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ಸೇವೆಯನ್ನು ದೇಶಕ್ಕಾಗಿ ನೀಡಿ ಜವಾಬ್ದಾರಿಯುತ ನಾಗರೀಕರಾಗಲು ಕರೆ ನೀಡಿದರು.

೩೮ನೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ನೆರವನ್ನು ನೀಡಿದ ದಾನಿಗಳ ವಿವರಗಳನ್ನು ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ ಕಿರಣ್ ಕುಮಾರ್.ಎಸ್‌ರವರು ನೀಡಿದರು. ಬೆಂಗಳೂರು ಉತ್ತರ ವಲಯ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ.ಎಂವಿರವರು ವಂದನಾರ್ಪಣೆ ನಡೆಸಿಕೊಟ್ಟರು. ಕುಮಾರಿ ವೇದಶ್ರೀಭಟ್‌ರವರು ಸುಶ್ರಾವ್ಯವಾಗಿ ವಂದೇಮಾತರಂ ಹಾಡುವುದರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.

– ಶ್ರೀ ಗಂಗಾಧರ.ಎಂ.ವಿ. ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ವಲಯ=೩

Highslide for Wordpress Plugin