ದಿನಾಂಕ: 17-1-26 ರ ಶನಿವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕಸಂಘ, ಬೆಂಗಳೂರು ಉತ್ತರ ಜಿಲ್ಲೆಯ ವತಿಯಿಂದ ಭವ್ಯ ಭಾರತ ದೇಶ ಕಂಡಂತಹ ಶ್ರೇಷ್ಠ ಮಹಾನ್ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷ್ ಚಂದ್ರ ಭೋಸರವರು ಹಾಕಿಕೊಟ್ಟಂತಹ ಆದರ್ಶಗಳು ಮತ್ತು ಮೌಲ್ಯಯುತ ಜೀವನ ಪದ್ಧತಿ, ಇಡೀ ವಿಶ್ವಕ್ಕೆ ನಮ್ಮ ಭವ್ಯ ಸಂಸ್ಕೃತಿಯನ್ನು ಸಾರಿದ ರೀತಿಯಲ್ಲಿ ಒಂದು ಉತ್ತಮವಾದ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಕರ ಮಹತ್ತರ ಪಾತ್ರವನ್ನು ಮಾದರಿಯಾಗಿ ಸಮರ್ಪಣೆ ಮಾಡುವ ನಿಟ್ಟಿನಲ್ಲಿ ಸಂಕಲ್ಪ ದಿನಾಚರಣೆಯನ್ನು ಬೆಂಗಳೂರಿನ ಅಮೃತಹಳ್ಳಿಯ ಗಂಗಮ್ಮ ದೇವಸ್ಥಾನದ ಬಳಿಯಿರುವ ಎಸ್.ಎಲ್.ವಿ ವಿದ್ಯಾನಿಕೇತನ ಶಾಲೆಯಲ್ಲಿ ವೈಶಿಷ್ಟ್ಯವಾಗಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಲಾಯಿತು.


ಎಸ್.ಎಲ್.ವಿ ವಿದ್ಯಾನಿಕೇತನ ಶಾಲೆಯ ಶಿಕ್ಷಕ ವೃಂದವು ವಿಘ್ನ ವಿನಾಶಕ ವಿನಾಯಕನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬೆಂಗಳೂರು ಉತ್ತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕಿರಣ್ ಕುಮಾರ್.ಎಸ್ರವರು ವೇದಿಕೆಯ ಮೇಲಿನ ಗಣ್ಯರನ್ನು ಪರಿಚಯಿಸಿ ಸಭೆಯಲ್ಲಿ ಹಾಜರಿದ್ದ ಕಾರ್ಯಕರ್ತರು ಹಾಗೂ ಶಿಕ್ಷಕ ವೃಂದವನ್ನು ಹಾರ್ದಿಕವಾಗಿ ಸ್ವಾಗತಿಸಿದರು. ನಂತರ ವೇದಿಕೆಯಲ್ಲಿದ್ದ ಗಣ್ಯರು, ಪದಾಧಿಕಾರಿಗಳು ದೀಪ ಪ್ರಜ್ವಲನ ಮಾಡಿ ಸ್ವಾಮಿ ವಿವೇಕಾನಂದರು, ನೇತಾಜಿ ಸುಭಾಷ್ ಚಂದ್ರಭೋಸ್ರವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಖಿಲ ಕರ್ನಾಟಕ ಶಿಕ್ಷಕ ಸಮಾಚಾರ ಮಾಸಪತ್ರಿಕೆಯ ಸಂಪಾದಕರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರಾದ ಶ್ರೀ.ಜೆ.ಎಂ ಜೋಶಿರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಂಘವು ಪ್ರಾರಂಭವಾದಾಗಿನಿಂದ ನಡೆದು ಬಂದ ಹಾದಿ ಮತ್ತು ಮಾಧ್ಯಮಿಕ ಶಿಕ್ಷಕ ಸಂಘದ ಮುಖೇನ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಿದರು.
ಬೆಂಗಳೂರು ಉತ್ತರ ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಕೂಡಗಿರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸಂಕಲ್ಪ ಬೋಧನೆ ನಡೆಸಿಕೊಟ್ಟರು. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ ಸ್ವದೇಶಿ ಜಾಗರಣ ಮಂಚ್ನ ಕರ್ನಾಟಕ ರಾಜ್ಯ ವಿಚಾರ ವಿಭಾಗ ಪ್ರಮುಖರಾದ ಶ್ರೀ ವಿಜಯಕೃಷ್ಣರವರು ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಸುತ್ತಾ ವೀರ ಸನ್ಯಾಸಿಯಾದ ವಿವೇಕಾನಂದರು ಹೇಗೆ ಭಾರತಾಂಬೆಯ ವೀರಪುತ್ರರಾದರು ಹಾಗೂ ಶಿಕ್ಷಕರಿಗೆ ಅವರ ಮೌಲ್ಯಗಳು, ಸಂದೇಶಗಳನ್ನು ತಿಳಿಸಿದರು. ಚಾರಿತ್ರ್ಯವಿಲ್ಲದ ಶಿಕ್ಷಣ ಅರ್ಥಹೀನ, ಪ್ರತಿಯೊಬ್ಬ ಶಿಕ್ಷಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತೆಗೆಯುವ ಶಿಲ್ಪಿಯಾಗಬೇಕು ಎಂದು ತಿಳಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ರವರ ಆದರ್ಶ ವ್ಯಕ್ತಿತ್ವ, ಅವರು ದೇಶಕ್ಕೆ ನೀಡಿದ ಕೊಡುಗೆಯ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್ಎಲ್ವಿ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಚಂದ್ರಕಲಾ ವೆಂಕಟೇಶ್ರವರು ಸಂಕಲ್ಪ ದಿನ ಕಾರ್ಯಕ್ರಮವನ್ನು ಆಯೋಜಿಸಿದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವನ್ನು ಅಭಿನಂದಿಸಿದರು. ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಮುಂದಿನ ಭವಿಷ್ಯಕ್ಕೆ ಉತ್ತಮವಾದ ಗುರಿಯನ್ನು ಹೊಂದುವ ವಿಶ್ವಾಸವನ್ನು ಶಿಕ್ಷಕರು ಮೂಡಿಸಬೇಕೆಂದು ತಿಳಿಸಿದರು. ಶಿಕ್ಷಕ ವೃತ್ತಿಯು ಸಮಾಜದಲ್ಲಿ ಶ್ರೇಷ್ಠವಾದ ವೃತ್ತಿ, ಎಲ್ಲಾ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ಉತ್ತರ ಹಾಗೂ ಗ್ರಾಮಾಂತರ ಜಿಲ್ಲೆಯ ವಿಭಾಗ ಪ್ರಮುಖರಾದ ಶ್ರೀ ಗಂಗಪ್ಪರವರು ಈಗಿನ ವಿದ್ಯಾರ್ಥಿಗಳಲ್ಲಿ ಮೌಲ್ಯಗಳು ಕ್ಷೀಣಿಸುತ್ತಿವೆ, ಶಿಕ್ಷಕರು ಇದನ್ನು ಅರಿತು ಸುಧಾರಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು. ಬೆಂಗಳೂರು ಉತ್ತರವಲಯ-೪ರ ಕಾರ್ಯದರ್ಶಿಯಾದ ಶ್ರೀ ಮಂಜುನಾಥ್ ಟಿ.ಆರ್ ರವರು ವಂದನಾರ್ಪಣೆ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರವಲಯ-೩ರ ಅಧ್ಯಕ್ಷರಾದ ಶ್ರೀ ಗಂಗಾಧರ ಎಂ. ವಿ. ರವರು ಉತ್ತಮವಾಗಿ ನಡೆಸಿಕೊಟ್ಟರು. ಸಾಮೂಹಿಕ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ವರದಿ : ಶ್ರೀ ಗಂಗಾಧರ.ಎಂ.ವಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ವಲಯ-೩