ನೂತನ ದಿನಚರಿಯ ಲೋಕಾರ್ಪಣೆ

ದಿನಾಂಕ: 15-4-2014 ರಂದು ಸಂಘದ ಕಾರ್ಯಾಲಯ ಯಾದವ ಸ್ಮೃತಿ ಶೇಷಾದ್ರಿಪುರಮ್ ಬೆಂಗಳೂರು – ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ‘ದಿನಚರಿಯ ಲೋಕಾರ್ಪಣಾ’ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಏರ್ಪಾಡಾಗಿತ್ತು. ಮುಖ್ಯವಕ್ತಾರರಾಗಿ ಶ್ರೀ ಎಚ್.ನಾಗಭೂಷಣರಾವ್, ಮಾನ್ಯ ಪೋಷಕರು, ಕರ್ನಾಟಕರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಇವರು ಭಾಗವಹಿಸಿ ‘ಯುಗಾದಿಯಿಂದ ಯುಗಾದಿವರೆಗಿನ ದಿನಗಳೇ ನಮ್ಮ ಭಾರತೀಯ ನೂತನವರ್ಷ. ನಮ್ಮ ಸನಾತನ ಪರಂಪರೆ ಅತ್ಯಂತ ಶ್ರೇಷ್ಠವಾದುದು. ಈ ಹಿನ್ನೆಲೆಯಲ್ಲಿ ನಮ್ಮ ಮಾಧ್ಯಮಿಕ ಶಿಕ್ಷಕ ಸಂಘವು ಪ್ರತಿವರ್ಷವೂ ನೂತನ ದಿನದರ್ಶಿಯನ್ನು ಯುಗಾದಿ ದಿನವೇ ಪ್ರಕಾಶಿಸುತ್ತಾ ಬಂದಿದೆ. ಈ ಸತ್ಸಂಪ್ರದಾಯವು ಇತರರಿಗೆ ಮೇಲ್ಪಂಕ್ತಿಯಾಗಲಿ’ ಎಂದು ತಮ್ಮ ಸದಾಶಯವನ್ನು ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷಸ್ಥಾನದಿಂದ ಮಾತನಾಡಿದ ಸಂಘದ ಹಿರಿಯರಾದ ಶ್ರೀ ಜಿ.ಎಸ್.ಕೃಷ್ಣಮೂರ್ತಿಯವರು – ‘ಜನವರಿ ಮಾಸ ನಮಗೆ ನೂತನವರ್ಷವಲ್ಲ. ಭಾರತೀಯರ ನೂತನವರ್ಷ ಯುಗಾದಿ ದಿನ ಆರಂಭವಾಗುತ್ತದೆ. ಆಂಗ್ಲರು ಆಚರಿಸುವ ನೂತನವರ್ಷವನ್ನು ಅಂದರೆ, ಜನವರಿ ಮಾಸವೇ ಹೊಸವರ್ಷಾಚರಣೆ ಎಂಬ ಭ್ರಮೆ ನಿವಾರಣೆಯಾಗಬೇಕಿದೆ. ಆ ಮೂಲಕ ನಮ್ಮ ಶ್ರೇಷ್ಠಪರಂಪರೆ ಹಾಗೂ ನೈಜ ಇತಿಹಾಸದ ಅರಿವು ಎಲ್ಲರಲ್ಲೂ ಮೂಡಬೇಕಿದೆ.’ ಎಂಬುದಾಗಿ ಅಭಿಪ್ರಾಯಪಟ್ಟರು.

ಇನ್ನೋರ್ವ ಅಭ್ಯಾಗತರಾದ ಮಹಿಳಾ ವಿಭಾಗದ ಪ್ರಮುಖರಾದ ಶ್ರೀಮತಿ ಸೀತಾಲಕ್ಷ್ಮಿಯವರು ‘ಮಹಿಳಾ ಶಿಕ್ಷಕಿಯರು ಹೆಚ್ಚು ಹೆಚ್ಚು ಸಂಘದ ಸದಸ್ಯರಾಗಬೇಕು.’ ಮಹಿಳಾ ಶಿಕ್ಷಕಿಯರ ಸಂಘಟನೆಯ ಅನಿವಾರ್ಯತೆಯನ್ನು ಮತ್ತು ಮಾಧ್ಯಮಿಕ ಶಿಕ್ಷಕಸಂಘದಿಂದ ಆ ದಿಸೆಯಲ್ಲಿ ಕೈಗೊಂಡ ವಿವಿಧ ಆಯಾಮಗಳ ಬಗ್ಗೆ ಸಭೆಗೆ ಪರಿಚಯ ಮಾಡಿಕೊಟ್ಟರು.

ಸಭೆಯಲ್ಲಿ ಹಿರಿಯರಾದ ಶ್ರೀ ಕೃ.ನರಹರಿಯವರ ಉಪಸ್ಥಿತಿ ಇತ್ತು ಹಾಗೂ ಶ್ರೀ ಚಿದಾನಂದ ಪಾಟೀಲ್, ಶ್ರೀ ವರದರಾಜು ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಸುಪರ್ಣಾರವರ ದೇವತಾಪ್ರ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಶುಭಾರಂಭವಾಯಿತು. ಶ್ರೀ ಸೂಗೂರು ತಿಪ್ಪೇಸ್ವಾಮಿಯವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಜೆ.ಎಮ್.ಜೋಶಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ವಿವಿಧ ಚಟುವಟಿಕೆಗಳನ್ನು ಪರಿಚಯಿಸಿದರು. ಶ್ರೀ ಗಂಗಪ್ಪ ಎಲ್ಲರನ್ನೂ ಆದರದಿಂದ ಅಭಿನಂದಿಸಿದರು. ಶ್ರೀ ಎಸ್.ಜಿ.ತಾಂಬೆಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Highslide for Wordpress Plugin