ಪರೀಕ್ಷೆಯನ್ನು ಸಂಭ್ರಮಿಸಿ

ಹಿತಮಿತವಾದ ಆಹಾರ ಸೇವನೆ, ಸರಿಯಾಗಿ ನಿದ್ದೆ ಮಾಡುವುದು, ಭಯ ಮತ್ತು ಆತಂಕದಿಂದ ದೂರವಿದ್ದು ಉಲ್ಲಸಿತ ಮನಸ್ಸಿನಿಂದ ಪರೀಕ್ಷೆಯನ್ನು ಎದುರಿಸಿದರೆ ವಿದ್ಯಾರ್ಥಿಗಳಿಗೆ ಯಶಸ್ಸು ಖಂಡಿತ. ಇದು ಮಾನಸಿಕ ತಜ್ಞರಾದ ಡಾ|| ಸತ್ಯನಾರಾಯಣ ರಾವ್ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನೀಡಿದ ಕಿವಿಮಾತು.

parikshe-sambramisi-photo

ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಗೊಂದಲಗಳಿಗೆ ಒಳಗಾಗಬಾರದು. ವಿಷಯಗಳಿಗೆ ಸಂಬಂಧಿಸಿದ ಅನುಮಾನಗಳನ್ನು ಶಿಕ್ಷಕರ ಬಳಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಪರೀಕ್ಷಾ ಕಾಲದಲ್ಲಿ ಮಾತ್ರ ಹೆಚ್ಚು ಸಮಯ ಓದುವುದರಿಂದ ಮಾನಸಿಕ ಒತ್ತಡಕ್ಕೆ ವಿದ್ಯಾರ್ಥಿಗಳು ಒಳಗಾಗುತ್ತಾರೆ. ಪ್ರಾರಂಭದಿಂದಲೇ ತಯಾರಾಗುತ್ತಾ ಬಂದರೆ ಪರೀಕ್ಷೆಯನ್ನು ಬಹಳ ಸುಲಭವಾಗಿ ಎದುರಿಸಿ ಯಶಸ್ಸನ್ನು ಕಾಣಬಹುದೆಂದು ಮಂಡ್ಯ ಜಿಲ್ಲಾ ಉಪನಿರ್ದೇಶಕರಾದ ಎಂ. ಶಿವಮಾದಪ್ಪನವರು ಹೇಳಿದರು. ಎಲ್ಲಾ ವಿಷಯಗಳಲ್ಲೂ ಅಧ್ಯಾಯವಾರು, ನೀಲನಕ್ಷೆಗನುಗುಣವಾಗಿ ಬರಬಹುದಾದ ಪ್ರಶ್ನೆಗಳನ್ನು ಪ್ರಶ್ನಕೋಠಿಯ ರೂಪದಲ್ಲಿ ತಯಾರಿಸಿ ವಿದ್ಯಾರ್ಥಿಗಳಿಗೆ ಉತ್ತರದೊಂದಿಗೆ ನೀಡಲಾಯಿತು. ಕನಿಷ್ಠ 40 ಅಂಕಗಳನ್ನು ಪಡೆಯುವ ಬಗ್ಗೆ ಕೆಲವು ಸಲಹೆ ಸೂಚನೆಗಳನ್ನು ಸಂಪನ್ಮೂಲ ವ್ಯಕ್ತಿಗಳು ನೀಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಂಡ್ಯ ಜಿಲ್ಲಾ ಘಟಕವು ಮಾರ್ಚ್ 16-03-2015 ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪರೀಕ್ಷೆಯನ್ನು ಸಂಭ್ರಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ನಂಜುಂಡಾಚಾರ್ ವಿದ್ಯಾರ್ಥಿಗಳು ಪ್ರಾರಂಭದಿಂದ ಅಧ್ಯಯನ ಮಾಡಿದಾಗ ಮಾತ್ರ ಯಾವುದೇ ಭಯವಿಲ್ಲದೆ ಪರೀಕ್ಷೆಯನ್ನು ಎದುರಿಸುತ್ತಾರೆ. ಆದ್ದರಿಂದ ಎಲ್ಲರೂ ಮೊದಲಿನಿಂದಲೇ ಚೆನ್ನಾಗಿ ಅಭ್ಯಾಸ ಮಾಡಬೇಕೆಂದು ಕರೆಕೊಟ್ಟರು.

ಮೈಸೂರಿನ ಸದ್ವಿದ್ಯಾ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ. ಕೆ.ಆರ್ ಪ್ರದೀಪ್, ಅನಿಲ ಕುಮಾರ್, ಮೈಸೂರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಶಿವಣ್ಣ, ಮಲ್ಲಿಕಾರ್ಜುನ್, ಜಯಶ್ರೀ, ಪುಷ್ಪ, ರಾಘವೇಂದ್ರ, ದೇವರಾಜು, ಮಂಗಳ ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದ ಈ ಕಾರ್ಯಕ್ರಮದಲ್ಲಿ ಸುಮಾರು ೧೦೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗಿನ ಉದ್ಘಾಟನಾ ಸಮಾರಂಭದಲ್ಲಿ ಮಂಡ್ಯ ಜಿಲ್ಲಾ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಚಿಕ್ಕಸ್ವಾಮಿ, ಕಾರ್ಯದರ್ಶಿ ಎಂ. ಪುಟ್ಟಸ್ವಾಮಿ, ಖಜಾಂಚಿ ಸುರೇಶ್ ಭಾಗವಹಿಸಿದ್ದರು.

ವರದಿ: ಶ್ರೀ ಚಿಕ್ಕಸ್ವಾಮಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಮಂಡ್ಯ.

Highslide for Wordpress Plugin