ಜೂನ್ ತಿಂಗಳ 28 ರಂದು ಭಾನುವಾರ ಕ.ರಾ.ಮಾ.ಶಿ. ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 30 ನೆಯ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ನಿವೃತ್ತ ರಾಜ್ಯಪಾಲರಾಗಿರುವ ಸನ್ಮಾನ್ಯ ನ್ಯಾಯಮೂರ್ತಿ ಡಾ. ಎಂ. ರಾಮಾಜೋಯಿಸ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಭಾರತೀಯ ಸಂಸ್ಕೃತಿ ಪರಂಪರೆಗಳ ಬಗ್ಗೆ ಮಾತನಾಡಿದರು. ಸ್ವಾಮಿ ವಿವೇಕಾನಂದರು ಬಾರತದ ಕೀರ್ತಿಪತಾಕೆಯನ್ನು ಜಗತ್ತಿನ ತುಂಬ ಹಾರಿಸಿದ್ದು, ನಮ್ಮದೇಶದ ಸಂಸತ್ ಭವನದಲ್ಲಿರುವ ಘೋಷ ವಾಕ್ಯಗಳ ಬಗ್ಗೆ ತಿಳಿಸಿದರು. ವೇದಗಳು, ಉಪನಿಷತ್ತು, ಭಗವದ್ಗೀತೆಯ ಶ್ಲೋಕಗಳನ್ನು ಹೇಳಿ ಅವುಗಳ ಮಹತ್ವವನ್ನು ತಿಳಿಸಿದರು.
ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಾಗಿರುವ ಐ.ಎ.ಎಸ್. ಅಧಿಕಾರಿ ಶ್ರೀಮತಿ ವಿ. ರಶ್ಮಿ ಮಹೇಶ್ ಅವರು ಸಮಾರಂಭದಲ್ಲಿ ಪಾಲ್ಗೊಂಡು ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಸಾಧಿಸುವ ಛಲವನ್ನು ಹೇಗೆ ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಬಡತನ ನಮ್ಮ ವಿದ್ಯಾಭ್ಯಾಸಕ್ಕೆ ಎಂದೂ ತೊಡಕಾಗಬಾರದು. ನಮ್ಮ ಗುರಿಯನ್ನು ನಿರ್ಧರಿಸಿಕೊಂಡ ನಂತರ ಅದನ್ನು ಸಾಧಿಸುವವರೆಗೆ ಪ್ರಯತ್ನವನ್ನು ಮುಂದುವರೆಸಿ ಯಶಸ್ಸನ್ನು ಪಡೆಯಬೇಕು ಎಂಬ ವಿಚಾರಗಳನ್ನು ತಿಳಿಸಿ ಪ್ರೋತ್ಸಾಹಿಸಿದರು. ಶಿಕ್ಷಕ ಸಂಘದ ಪೋಷಕರಾಗಿರುವ ಶ್ರೀ ಹೆಚ್. ನಾಗಭೂಷಣರಾವ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು 30 ವರ್ಷಗಳಿಂದ ಶಿಕ್ಷಕ ಸಂಘ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆ ಮಾಡಿದ 25 ವಿಕಲಾಂಗ ಮಕ್ಕಳನ್ನು, 200 ಜನ ಶಾಲಾ ಪ್ರಥಮಿಗರನ್ನು ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಶಿಕ್ಷಕರ ಮಕ್ಕಳನ್ನು ಸನ್ಮಾನಿಸಲಾಯಿತು. ಅವರಿಗೆ ಸುಂದರವಾದ ಲ್ಯಾಮಿನೇಷನ್ ಮಾಡಿಸಿರುವ ಪ್ರಶಸ್ತಿಪತ್ರ, ಮೌಲ್ಯಯುತವಾದ ಪುಸ್ತಕಗಳು ಹಾಗೂ ಆಕರ್ಷಕವಾದ ಸ್ಮರಣ ಫಲಕ [ಮೆಮೆಂಟೋ] ಗಳನ್ನು ನೀಡಿ ಸನ್ಮಾನಿಸಲಾಯಿತು.
ಶಿಕ್ಷಕ ಸಂಘದ ರಾಷ್ಟ್ರ ಮಟ್ಟದ ಮಹಿಳಾ ಪ್ರಮುಖರಾಗಿರುವ ಶ್ರೀಮತಿ ಆರ್. ಸೀತಾಲಕ್ಷ್ಮಿಯವರು ಮಕ್ಕಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಡಾ. ಎಂ.ರಾಮಾಜೋಯಿಸ್ ಅವರು ರಚಿಸಿದ್ದ ‘ಚಾರಿತ್ರ್ಯವೇ ಜೀವನ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಜೆ.ಪಿ. ನಗರದ ಆರ್.ವಿ. ಡೆಂಟಲ್ ಕಾಲೇಜಿನ ಭವ್ಯವಾದ ಸಭಾಂಗಣದಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಇಡೀ ಸಭಾಂಗಣ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಂದ ತಂಬಿತ್ತು. ಕು. ಸುಪ್ರೀತಾ ಪ್ರಾರ್ಥನೆ ಮಾಡಿದರು. ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರಾಗಿರುವ ಶ್ರೀ ವಿ. ರಾಜು ಅವರು ಗಣ್ಯರನ್ನು ಪರಿಚಯಿಸಿ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲೆಯ ಕಾರ್‍ಯದರ್ಶಿಗಳಾಗಿರುವ ಶ್ರೀ ಬಿ.ಎ. ಸುರೇಂದ್ರ ಅವರು ಸರ್ವರಿಗೂ ವಂದಿಸಿದರು. ಖಜಾಂಚಿಗಳಾಗಿರುವ ಶ್ರೀಮತಿ ಜಿ. ಎನ್. ವಾಸುಕಿಯವರು ದಾನಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು, ಮಹಿಳಾ ಪ್ರಮುಖರಾಗಿರುವ ಶ್ರೀಮತಿ ಮಾಲಿನಿಯವರು ನಿರೂಪಣೆಯನ್ನು ಮಾಡಿದರು.
ವರದಿ : ವಿ. ರಾಜ, ಅಧ್ಯಕ್ಷರು, ಬೆಂಗಳೂರು ದಕ್ಷಿಣ ಜಿಲ್ಲೆ