ದಿನಾಂಕ 20-06-2015 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಬೆಂಗಳೂರು ಉತ್ತರ ಜಿಲ್ಲಾ ಘಟಕ ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಮಹಿಳಾ ಘಟಕದ ಸಹಯೋಗದೊಂದಿಗೆ ಬೆಂಗಳೂರು ಉತ್ತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಹೃದಯ ತಪಾಸಣೆ, ಮಧುಮೇಹ ಮತ್ತು ರಕ್ತದ ಒತ್ತಡ ಪರೀಕ್ಷೆಗಳ ಶಿಬಿರವನ್ನು ಮಲ್ಲೇಶ್ವರಂನ ಹಿಮಾಂಶು ಜ್ಯೋತಿ ಕಲಾಪೀಠ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ|| ಸಿ.ಎನ್. ಮಂಜುನಾಥ ಮತ್ತು ಅವರ ತಂಡದ ವೈದ್ಯರುಗಳು ತಪಾಸಣೆಗೆ ಆಗಮಿಸಿದ್ದರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶ್ರೀಮತಿ ಅರುಣಾರವರು ಪ್ರಾರ್ಥನೆ ನೆರವೇರಿಸಿದರು. ಗಣ್ಯರೆಲ್ಲರೂ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಉತ್ತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಸೂಗೂರು ತಿಪ್ಪೇಸ್ವಾಮಿಯವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ರಾಜ್ಯ ಖಜಾಂಚಿಗಳಾದ ಶ್ರೀ ಜೆ.ಎಂ ಜೋಶಿಯವರು ಪ್ರಾಸ್ತಾವಿಕ ನುಡಿಯಲ್ಲಿ ಸಂಘವು ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಡಾ|| ಸಿ.ಎನ್. ಮಂಜುನಾಥ ನಿರ್ದೇಶಕರು ಜಯದೇವ ಕಾರ್ಡಿಯಾಲಜಿಯವರು ಮಾತನಾಡಿ ಇಂದಿನ ದಿನಗಳಲ್ಲಿ ಕಾಯಿಲೆಗಳು ಸರ್ವೇಸಾಮಾನ್ಯವಾಗಲು ಕಾರಣಗಳನ್ನು ತಿಳಿಸಿದರು. ಕೆಲಸದ ಒತ್ತಡ, ಸಾಂಸಾರಿಕ ಸಮಸ್ಯೆಗಳು, ಅಪೌಷ್ಠಿಕ ಆಹಾರ, ತಾಳ್ಮೆ ಇಲ್ಲದಿರುವಿಕೆ, ವಿಭಕ್ತ ಕುಟುಂಬಗಳು ಹೀಗೆ ಹಲವಾರು ಕಾರಣಗಳನ್ನು ವಿವರಿಸಿದರು. ಇಂದು ನಮ್ಮ ದೇಶದಲ್ಲಿ ಶೇ.25 ರಷ್ಟು ಹೃದಯ ರೋಗಿಗಳು 40 ವರ್ಷ ಒಳಗಿನವರಿದ್ದಾರೆಂದು ತಿಳಿಸಿದರು.
ಹೃದಯ, ಶ್ವಾಸಕೋಶ ಮತ್ತು ಮೂತ್ರಕೋಶಗಳ ಸಂಬಂಧಿ ಕಾಯಿಲೆಗಳನ್ನು ಬರುವ ಮುಂಚೆಯೇ ತಡೆಗಟ್ಟುವುದು ಹೇಗೆ? ಎಂಬುದರ ಬಗ್ಗೆ ಮಾಹಿತಿ ಯನ್ನು ನೀಡಿದರು. ಜೊತೆಗೆ ದಿನನಿತ್ಯ ತಪ್ಪದೇ ಯೋಗ,ಧ್ಯಾನ, ವ್ಯಾಯಾಮ ಮಾಡಲು ಸಲಹೆ ನೀಡಿದರು. ವಿದ್ಯಾರ್ಥಿಗಳಿಗೂ ಆರೋಗ್ಯ ಕಾಪಾಡಿಕೊಳ್ಳುವಿಕೆ, ಪರೀಕ್ಷೆ ಎದುರಿಸುವಿಕೆಗಳ ಬಗ್ಗೆಯೂ ಸಲಹೆಗಳನ್ನು ನೀಡಿದರು.
ಇನ್ನೋರ್ವ ಅತಿಥಿಗಳಾದ ಶ್ರೀ ವಿಜಯ ಕುಮಾರ ನಿರ್ದೇಶಕರು ಹಿಮಾಂಶು ಜ್ಯೋತಿ ಕಲಾಪೀಠ ಸಂಘ ಇವರು ಮಾತನಾಡಿ ನಮ್ಮ ಸಂಘದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ ಡಾ|| ಮಂಜುನಾಥರವರು ಉತ್ತಮ ಸಲಹೆಗಳನ್ನು ನೀಡಿದ್ದಾರೆ ದಯವಿಟ್ಟು ಎಲ್ಲರೂ ಪಾಲಿಸಿರಿ ಎಂದು ವಿನಂತಿಸಿದರು.
ಉಪ-ಪ್ರಾಂಶುಪಾಲರಾದ ಶ್ರೀ ಚಂದ್ರಮೌಳಿ ಯವರು ವಂದನಾರ್ಪಣೆ ಮಾಡಿದರು. ಜಿಲ್ಲಾ ಕಾರ್ಯದರ್ಶಿ ಶ್ರೀ ಎಸ್.ಜಿ ತಾಂಬೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು 120 ಶಿಕ್ಷಕ/ ಶಿಕ್ಷಕಿಯರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ವರದಿ : ಶ್ರೀ ಎಸ್.ಜಿ. ತಾಂಬೆ, ಬೆಂಗಳೂರು ಉತ್ತರ ಜಿಲ್ಲೆ ಕಾಯದರ್ಶಿ, ಕ.ರಾ.ಮಾ.ಶಿ.ಸಂ