ಪ್ರತಿಭೆಯನ್ನು ದೇಶಕ್ಕೆ ಅರ್ಪಿಸಿ : ವಿದ್ಯಾರ್ಥಿಗಳಿಗೆ ಮಹೇಂದ್ರ ಮುನ್ನಾತ್ ಕರೆ

ನನ್ನ ಭಾರತ, ನಿಮ್ಮ ಭಾರತ ಸುಭಾಷ್ ಚಂದ್ರರ ಭಾರತ, ವಾಜಪೇಯಿ ಭಾರತ, ಭಗತ್ ಸಿಂಗ್‌ರ ಭಾರತ, ಅಬ್ದುಲ್ ಕಲಾಂರ ಭಾರತ. ಇಂತಹ ಶ್ರೇಷ್ಠ ಭಾರತದ ಮಣ್ಣನ್ನು ಪೂಜಿಸಿ, ಧರ್ಮವನ್ನು ಪ್ರೀತಿಸಿ, ನಮ್ಮ ಮನೆ, ನಮ್ಮ ಬೀದಿಯನ್ನು ಸ್ವಚ್ಛವಾಗಿಟ್ಟರೆ ಇಡೀ ಭಾರತವೇ ಸ್ವಚ್ಛ ಭಾರತವಾಗುತ್ತದೆ, ಎಲ್ಲವನ್ನೂ ಸರ್ಕಾರದಿಂದಲೇ ಅಪೇಕ್ಷಿಸಬೇಡಿ ಎಂದು ಮಾರುತಿ ಮೆಡಿಕಲ್ಸ್‌ನ ಶ್ರೀ ಮಹೇಂದ್ರ ಮುನ್ನಾತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಂದುವರೆದು ಅವರು ತಾಯಿ ಹಾಲು ಇರೋತನಕ, ಹಸುವಿನ ಹಾಲು ಕೊನೆತನಕ ಎಂದು ಹೇಳುವುದರ ಮೂಲಕ ಗೋವಿನ ಮಹತ್ವವನ್ನು ತಿಳಿಸಿದರು. ನಮ್ಮಲ್ಲಿರುವ ಪ್ರತಿಭೆಯನ್ನು ದೇಶಕ್ಕೆ ಅರ್ಪಿಸುವಂತೆ ಯುವಪೀಳಿಗೆಗೆ ಮಹೇಂದ್ರ ಮುನ್ನಾತ್ ಕಿವಿ ಮಾತು ಹೇಳಿದರು.

north

north1

ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಎಲ್ಲರೂ ಒಂದೇ. ಅದೇ ಮನುಷ್ಯ ಜಾತಿ ಎಂಬುದರ ಮೂಲಕ ಭಾವೈಕ್ಯದ ಭಾವನೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿದರು. ಶ್ರೀ ಮಹೇಂದ್ರ ಮುನ್ನಾತ್ ತಾರೀಖು 24-7-2016 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಂಗಳೂರು ಉತ್ತರ ಜಿಲ್ಲೆಯು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮೈನವಿರೇಳಿಸುವಂತೆ ಮಾತನಾಡಿದರು.

ವಿಂಗ್ ಕಮಾಂಡರ್ ಆರ್. ತಿರುಮಲಾಚಾರ್‌ರವರು ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸಿ, ದೇಶದ ಉತ್ತಮ ಪ್ರಜೆ ಗಳಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ಕರೆ ನೀಡಿದರು. ಪ್ರತಿಭಾ ಪುರಸ್ಕಾರ ಸಮಾರಂಭದ ಮತ್ತೊಬ್ಬ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೇರಳ ಸಮಾಜದ ಕಾರ್ಯದರ್ಶಿಗಳಾದ ಶ್ರೀ ರೇಜಿ ಕುಮಾರ್‌ರವರು ಇಲ್ಲಿನ ಶಾಲಾ ಪ್ರಥಮಿಗರು ಯಾವಾಗಲೂ ಹೀಗೆ ಪ್ರಥಮಿಗರಾಗಿ ಮುಂದುವರೆಯಬೇಕೆಂದು ಆಶಿಸಿದರು. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಬೆನ್ನೆಲುಬಾಗಿರುವ ಪೋಷಕರು, ಶಿಕ್ಷಕರನ್ನು ಮರೆಯದಿರುವಂತೆ ಕರೆನೀಡಿದರು. ಆರ್ಥಿಕ ತೊಂದರೆಯಿಂದಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು. ಕೇರಳ ಸಮಾಜ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡಿದರು. ಶ್ರೀ ರೇಜಿ ಕುಮಾರ್‌ರವರು ಕೇರಳ ಸಮಾಜ ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಪರಿಚಯ ಮಾಡಿಕೊಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರು ಮಾತನಾಡುತ್ತ ತಮ್ಮ 13 ವರ್ಷಗಳ ಮಿಲಿಟರಿ ಸೇವೆಯ ಅನುಭವವನ್ನು ಹಂಚಿಕೊಂಡರು. ಇತ್ತೀಚೆಗೆ ವಾಯುಸೇನೆಯ ವಿಮಾನ ದುರಂತದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸೇನಾಧಿಕಾರಿಗಳು, ವಿಶೇಷವಾಗಿ ಕರ್ನಾಟಕದ ಏಕನಾಥ ಶೆಟ್ಟಿಯನ್ನು ಸ್ಮರಿಸಿದರು. ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಬಾಕ್ಸಿಂಗ್ ಪಟು ಮೇರಿಕೋಮಾಳ ಸಾಹಸ, ಸಾಧನೆಯನ್ನು ಪ್ರಸ್ತಾಪಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇವರ ನಿದರ್ಶನಗಳು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಪುಟಿದೇಳಿಸಲಿ ಎಂದು ಆಶಿಸಿದರು.

ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದ 300 ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯ ಪ್ರಮುಖರೂ, ಹಿರಿಯರೂ ಆದ ಶ್ರೀಯುತ. ಜಿ.ಎಸ್ ಕೃಷ್ಣಮೂರ್ತಿಯವರು ಪ್ರತಿಜ್ಞೆಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಅವರು ಪ್ರತಿಜ್ಞೆಯನ್ನು ಕೈಗೊಳ್ಳುವುದರ ಮಹತ್ವವನ್ನು ವಿವರಿಸಿದರು. ಉತ್ತರ ಜಿಲ್ಲೆಯ ಪದಾಧಿಕಾರಿಗಳಾದ ಶ್ರೀ ಸಿದ್ದೇಗೌಡರು ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಶ್ರೀಮತಿ ಅರುಣಾರವರ ಸುಶ್ರಾವ್ಯವಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಶ್ರೀ.ಎಸ್ ಜಿ ತಾಂಬೆಯವರು ಸಮಾರಂಭದ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಾಂತೀಯ ಖಜಾಂಚಿಗಳಾದ ಶ್ರೀ. ಜೆ.ಎಂ ಜೋಶಿಯವರು ಪ್ರಾಸ್ತಾವಿಕದಲ್ಲಿ ಶಿಕ್ಷಕ ಸಂಘವು ನಡೆದು ಬಂದ ದಾರಿಯನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಶೇ ೮೫ಕ್ಕಿಂತ ಹೆಚ್ಚು ಅಂಕಗಳಿಸಿದ ಉತ್ತರ ಜಿಲ್ಲೆಯ ಶಿಕ್ಷಕರ ಮಕ್ಕಳನ್ನು ಪುರಸ್ಕರಿಸಲಾಯಿತು. ೨೨೫ ಶಾಲೆಗಳ ಪ್ರಥಮಿಗರನ್ನು ಸಮಾರಂಭದಲ್ಲಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಪದಾಧಿಕಾರಿಗಳಾದ ಶ್ರೀಯುತ ಟಿ.ಆರ್. ಮಂಜುನಾಥ್, ಎಸ್. ಕೃಷ್ಣ, ಹರಿದಾಸ್, ಎಂ.ಎಸ್ ಜನಾರ್ಧನ, ಶ್ರೀಮತಿ ದಾಕ್ಷಾಯಿಣಿ ಮುಂತಾದವರು ಉಪಸ್ಥಿತರಿದ್ದರು. ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿಯಾದ ಶ್ರೀ ಗಂಗಪ್ಪನವರು ವಂದನಾರ್ಪಣೆ ನೆರವೇರಿಸಿದರು. ಸುಶ್ರಾವ್ಯವಾದ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ : ಎಸ್.ಜಿ ತಾಂಬೆ, ಅಧ್ಯಕ್ಷರು, ಬೆಂಗಳೂರು ಉತ್ತರ ಜಿಲ್ಲೆ

Highslide for Wordpress Plugin