ಬೆಂಗಳೂರು ವಸಂತನಗರದಲ್ಲಿರುವ ದಿ ಯೂನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ಅಮ್ನೆಷ್ಟಿ ಇಂಟೆರನ್ಯಾಷನಲ್ ಸಂಸ್ಥೆಯವರು ಆಯೋಜಿಸಿದ್ದ ಮುರಿದ ಮನೆಗಳು ಎಂಬ ಹೆಸರಿನ ಕಾರ್ಯಕ್ರಮದಲ್ಲಿ ದೇಶ ವಿಭಜಿಸುವ ಘೋಷಣೆಗಳನ್ನು ಕೂಗಿದ್ದು ಮತ್ತು ಉಗ್ರವಾದಿಗಳನ್ನು ಹುತಾತ್ಮನನ್ನಾಗಿಸುವ ಪ್ರಯತ್ನವನ್ನು KRMSS ಬಲವಾಗಿ ಖಂಡಿಸುತ್ತದೆ. ಅತ್ಯಂತ ಶಿಸ್ತು ಬದ್ಧ ಭಾರತೀಯ ಸೈನ್ಯವನ್ನು ಖಳನಾಯಕನನ್ನಾಗಿಸುವ ದೇಶದ್ರೋಹಿಗಳ ಕುತಂತ್ರವನ್ನು ಖಂಡಿಸಿದ್ದಕ್ಕಾಗಿ ಅ.ಭಾ.ವಿ.ಪ. ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ.
ಈ ರೀತಿಯ ಕೃತ್ಯಗಳು ಮತ್ತು ಕಾರ್ಯಕ್ರಮಗಳು ನಮ್ಮ ಹೆಮ್ಮೆಯ ಸೈನ್ಯದ ಸ್ಪೂರ್ತಿ ಕುಂದಿಸುವುದಲ್ಲದೇ ಈ ಮಹಾನ್ ರಾಷ್ಟ್ರವನ್ನು ಅಸ್ಥಿರಗೊಳಿಸುವ ಸಂಚು ಎಂದು KRMSS ಉಚ್ಛ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಶ್ರೀ ರಘು ಅಕ್ಮಂಚಿ ಮತ್ತು ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂದೀಪ ಬೂದಿಹಾಳ ಹೇಳಿದ್ದಾರೆ. ವಿದೇಶಿ ಹಣ ಸಹಾಯದಿಂದ ಕಾರ್ಯ ನಿರ್ವಹಿಸುವ ಅಮ್ನೆಷ್ಟಿ ಇಂಟರ್‌ನ್ಯಾಷನಲ್‌ನಂತಹ ಸರಕಾರೇತರ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮಗಳಿಂದ, ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ದೇಶ ವಿರೋಧಿ ಮನಃಸ್ಥಿತಿಯನ್ನು ಉತ್ತೇಜಿಸುತ್ತಿದೆ. ಇದು ಖಂಡನೀಯ. ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಶ್ಮೀರದ ಹಿಂದುಗಳ ಮೇಲೆ ನಡೆದ ದೌರ್ಜನ್ಯ ಹಾಗೂ ಅವರು ನಿರಾಶ್ರಿತ ಶಿಬಿರಗಳಲ್ಲಿ ದಶಕಗಳಿಂದ ವಾಸವಾಗುವಂತೆ ಮಾಡಿ ಅವರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅಮ್ನೆಷ್ಟಿ ಇಂಟರ್‌ನ್ಯಾಷನಲ್‌ನಂತಹ ಸಂಸ್ಥೆಗಳು ನಿರ್ಲಕ್ಷಿಸುತ್ತಿರುವುದು ಖಂಡನೀಯ. ಸಮೃದ್ಧ, ಸುಸಂಸ್ಕೃತವಾದ ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ಯೋಗ್ಯ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದು ಶಿಕ್ಷಣ ಸಂಸ್ಥೆಗಳ ಉದ್ದೇಶ. ಆದರೆ ತುಮಕೂರಿನ ಶಿಕ್ಷಣ ಸಂಸ್ಥೆಯಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಪೋಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು KRMSS ಆಗ್ರಹಿಸುತ್ತದೆ. ಅಲ್ಲದೇ ವಿದೇಶಿ ಧನ ಸಹಾಯದಿಂದ ಕಾರ್ಯ ನಿರ್ವಹಿಸುತ್ತಿರುವ ಇಂತಹ ಸ್ವಯಂ ಸೇವಾ ಸಂಘಟನೆಗಳು ದೇಶದ ಸಮಗ್ರತೆಯ ಮೇಲೆ ಹಲ್ಲೆ ಮಾಡದಂತೆ ಕೇಂದ್ರ ಸರಕಾರವು ಕ್ರಮಕೈಗೊಳ್ಳಬೇಕೆಂದು ಶ್ರೀ ರಘು ಅಕ್ಮಂಚಿ ಮತ್ತು ಶ್ರೀ ಸಂದೀಪ ಬೂದಿಹಾಳ ಒತ್ತಾಯಿಸಿದರು.