ದಿನಾಂಕ 13, ಸೆಪ್ಟಂಬರ್ 2016, ಮಂಗಳವಾರ ಬೆಳಗ್ಗೆ 11 ಕ್ಕೆ ವಿಜಯನಗರ ಪಿ.ಯು. ಕಾಲೇಜ್, ವಿದ್ಯಾನಗರ, ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಶಿಕ್ಷಕರ / ಉಪನ್ಯಾಸಕರ ಸಮಸ್ಯೆಗಳ ಕುರಿತು ಸಭೆ ನಡೆಯಿತು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ವ್ಹಿ. ಸಂಕನೂರವರು ಈ ಸಭೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು 1965 ರಿಂದ ಇಲ್ಲಿಯವರೆಗೂ ಶಿಕ್ಷಕರ ಹಿತಕ್ಕಾಗಿ ಕಾರ್ಯ ಮಾಡುತ್ತಾ ಇದೆ ಈ ಭಾಗದಲ್ಲಿ ಇನ್ನು ಗಟ್ಟಿಯಾಗಿ ನೆಲೆವೂರಿ ಬೆಳೆಯಬೇಕಾಗಿದೆ.
ಮಾಧ್ಯಮಿಕ ಶಿಕ್ಷಕ ಸಂಘ ಒಬ್ಬ ವ್ಯಕ್ತಿಯ ಹೆಸರಿನ ಮೇಲೆ ನಿಂತ ಸಂಘಟನೆ ಅಲ್ಲ, ರಾಜಕೀಯ ಲಾಭಕ್ಕಾಗಿ ಕಟ್ಟಿರುವ ಸಂಘಟನೆಯೂ ಅಲ್ಲ, ಬದಲಿಗೆ ರಾಷ್ಟ್ರೀಯ ಹಿತಾಸಕ್ತಿ ತತ್ವಗಳ ಆಧಾರದ ಮೇಲೆ ಕಟ್ಟಲ್ಪಟ್ಟ ಸಂಘಟನೆಯಾಗಿದೆ ಮತ್ತು ಶಿಕ್ಷಕರ ಯಾವುದೇ ಸಮಸ್ಯೆಗಳಿಗೂ ಸದಾ ಸ್ಪಂದಿಸಲು ನಾನು ಸಿದ್ಧ ಎಂದು ನುಡಿದರು. ಶಿಕ್ಷಕರ ಸಮಸ್ಯೆಗಳಾದ ಹುದ್ದೆಯಲ್ಲಿ ಬಡ್ತಿ, ಕಾಲ್ಪನಿಕ ವೇತನ ಹಾಗೂ ವೇತನ ತಾರತ್ಯಮ ಹೀಗೆ ಹತ್ತು ಹಲವು ಸಮಸ್ಯೆಗಳ ಕುರಿತಾಗಿ ಸಂವಾದ ನಡೆಸಿದರು.
ಸಭೆಯಲ್ಲಿ ರಾಜ್ಯ ಸಹ-ಪ್ರಧಾನ ಕಾರ್ಯದರ್ಶಿ ಶ್ರೀ ಸಂದೀಪ ಬೂದಿಹಾಳರವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಇತಿಹಾಸ, ಹಿನ್ನಲೆ, ಗುರಿ, ಉದ್ದೇಶಗಳ ಬಗ್ಗೆ ಸವಿವರವಾಗಿ ಹೇಳುತ್ತಾ ಈ ಸಂಘಟನೆ ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕನ ಹಿತಕ್ಕಾಗಿ ಸಮಾಜ ಧ್ಯೇಯದಡಿಯಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ. ಈ ಸಂಘಟನೆಯಲ್ಲಿ ಶಿಕ್ಷಣದ ಸಲುವಾಗಿ ಕಾರ್ಯ ಮಾಡುತ್ತಿರುವ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಸಹ ಶಿಕ್ಷಕರು, ದೈಹಿಕ, ಚಿತ್ರಕಲೆ ಶಿಕ್ಷಕರು ಹೀಗೆ ಎಲ್ಲ ಬೋಧಕ-ಬೋಧಕೇತರರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಹೊಸ ಜಿಲ್ಲಾ ಘಟಕ ರಚಿಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಧರ ಪಾಟೀಲ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇವರಮನಿ, ಖಜಾಂಚಿಗಳಾದ ಶ್ರೀ ರವಿಚಂದ್ರ ಕೊಣ್ಣೂರ ಉಪಸ್ಥಿತರಿದ್ದರು.