ಕಾನ್ಪುರದಲ್ಲಿ ಅಖಿಲ ಭಾರತ ಮಹಿಳಾ ಸಮನ್ವಯ ಸಭೆ

ದೇಶಸೇವೆಯ ಕೆಲಸದಲ್ಲಿ ತೊಡಗುವ ನಾನಾ ಸಂಘಟನೆಗಳು ಪರಸ್ಪರ ಸಂಪರ್ಕ ಮತ್ತು ಸಮನ್ವಯದೊಂದಿಗೆ ಕಾರ್ಯ ನಡೆಸುವುದು ಅಗತ್ಯ. ಪ್ರತಿಯೊಬ್ಬ ಮಹಿಳೆ ನಾಗರಿಕಳಾಗಿ ಸಾಮಾಜಿಕ ಪ್ರಜ್ಞೆಯೊಂದಿಗೆ ರಾಷ್ಟ್ರಚಿಂತನೆ ಮಾಡು ವಂತಾಗಬೇಕು. ಎಂದು ಇದೇ ಸೆಪ್ಟೆಂಬರ್ 17 ಮತ್ತು 18 ರಂದು ಯು.ಪಿ. ಯ ಕಾನ್ಪುರದಲ್ಲಿ ನಡೆದ ಅಖಿಲಭಾರತ ಮಹಿಳಾ ಸಮನ್ವಯದ ಸಭೆಯ ನೇತೃತ್ವ ವಹಿಸಿದ್ದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖರಾದ ಗೀತಾ ತಾಯಿಯವರು ತಿಳಿಸಿದರು.

kanpur

ರಾಷ್ಟ್ರಸೇವಿಕಾ ಸಮಿತಿಯ ಸಂಚಾಲಕರಾದ ವಂದನೀಯ ಶಾಂತಕ್ಕ, ಸಂಘ ಪ್ರಮುಖರಾದ ಪ್ರಮೀಳಾತಾಯಿ, ಸಂಘ ಪ್ರಮುಖ ಪ್ರಚಾರಕರಾದ ಡಾ|| ಮನಮೋಹನ್‌ಜೀ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಮಾರ್ಗದರ್ಶಿಗಳಾದ ಪ್ರೊ|| ಅನಿರುದ್ಧ ದೇಶಪಾಂಡೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದರಲ್ಲಿ ಇಪ್ಪತ್ತೈದು ಪ್ರಾಂತ್ಯಗಳ ೩೪ ಸಂಘಟನೆಗಳು ಪಾಲ್ಗೊಂಡು 180 ಮಹಿಳಾ ಪ್ರತಿನಿಧಿಗಳು ಹಾಗೂ 15 ಮಂದಿ ಪುರುಷ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವುದರೊಂದಿಗೆ ಗಣ್ಯರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಅತಿಥಿಗಳನ್ನು ಸ್ವಾಗತಿಸಿ, ಪರಿಚಯ ಮಾಡಿ, ಸಮನ್ವಯ ಸಭೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ವಂದನೀಯ ಗೀತಾತಾಯಿಯವರು ಮೊದಲಿಗೆ ಇಡೀ ವರ್ಷದಲ್ಲಿ ಪ್ರಾಂತೀಯ ಕಾರ್ಯಕ್ರಮಗಳನ್ನು ನಡೆಸಿದ ವಿವಿಧ ಸಂಘಟನೆಗಳು ಅವುಗಳ ವರದಿಯೊಂದಿಗೆ ನಿವೇದನೆ ಮಾಡುವಂತೆ ತಿಳಿಸಿದರು. ರಾಷ್ಟ್ರಸೇವಿಕಾ ಸಮಿತಿ, ವನವಾಸಿ ಕಲ್ಯಾಣ ಸಮಿತಿ, ವಿದ್ಯಾಭಾರತೀ, ಸೇವಾ ಭಾರತೀ, ಭಾರತೀಯ ಮಜದೂರ್ ಸಂಘ, ಭಾರತೀಯ ಕಿಸಾನ್ ಸಂಘ, ಭಾರತೀಯ ಸ್ತ್ರೀ ಶಕ್ತಿ, ಭಾರತೀಯ ಶಿಕ್ಷಣ ಮಂಡಳಿ, ಭಾರತೀಯ ಜನತಾ ಪಕ್ಷ, ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ವಿಶ್ವಹಿಂದೂ ಪರಿಷತ್, ಆದಿಯಾಗಿ ಹಲವಾರು ಸಂಘಟನೆಗಳು ಇದರಲ್ಲಿದ್ದು ತಮ್ಮೆಲ್ಲಾ ವರದಿಗಳನ್ನು ನೀಡಿದರು.

ಮಧ್ಯಾಹ್ನದ ಅವಧಿಯಲ್ಲಿ ಡಾ|| ಮನಮೋಹನ್‌ಜೀ ವೈದ್ಯರು ಸಂಘಟನಾಕಾರ್ಯದಲ್ಲಿ ಪ್ರಸಾರ ಮಾಧ್ಯಮದ ಪಾತ್ರದ ಮಹತ್ವದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿದರು.

ನಾನಾ ಸಂಘಟನೆಗಳು ಮಾಡಿಸಿದ ಕಾರ್ಯಕ್ರಮಗಳಲ್ಲಿ ಕೇರಳದ ಸ್ತ್ರೀ ಶಕ್ತಿ ಸಂಘಟನೆಯು ಮಂಡಿಸಿದ ಸ್ವಾಭಿಮಾನ್ ಪರಿಕ್ರಮ ಯಾತ್ರಾ ಎಂಬುದು ೧೫ ದಿನಗಳ ಕಾಲ 35 ಕಿ.ಮೀ. ನಡಿಗೆಯಲ್ಲಿ ಬಾಲಕಿಯರಿಂದ 60 ಮೀರಿದ ಹಿರಿಯ ಮಹಿಳೆಯರೂ ಸೇರಿದಂತೆ 200000 ಮಂದಿ ಪಾಲ್ಗೊಂಡಿದ್ದರು ಎಂಬುದು ವಿಶಿಷ್ಟವಾಗಿತ್ತು. ಭಾ.ಜ.ಪ.ದ ಮಹಿಳಾ ಮೋರ್ಚಾದ ರಾಷ್ಟ್ರಾಧ್ಯಕ್ಷೆಯವರು ಮಹಿಳಾ ಅಭಿವೃದ್ಧಿಗಾಗಿ ದೇಶದಾದ್ಯಂತ ಯೋಜಿಸಿರುವ Skill development programme, 12 ರೂ.ಗಳ ವಿಮಾಯೋಜನೆ, ಮುದ್ರಾ ಯೋಜನೆ, ರಾಷ್ಟ್ರೀಯ ಮಹಿಳಾ ನೀತಿ ಮುಂತಾದ ಪ್ರಧಾನಮಂತ್ರಿ ಯೋಜನೆಗಳ ವಿವರವನ್ನು ನೀಡಿದ್ದು ತುಂಬ ಉಪಯುಕ್ತ ಮಾಹಿತಿಯಾಗಿತ್ತು.

ಎರಡು ದಿನದ ಕಾರ್ಯಕ್ರಮದ ಫಲಶ್ರುತಿಯಾಗಿ ಮುಂದಿನ ಕ್ರಿಯಾಸ್ವರೂಪವನ್ನು ಶಿಕ್ಷಣ, ಸಾಮಾಜಿಕ ಮತ್ತು ಇತರೆ ಎಂದು ಮೂರು ಕ್ಷೇತ್ರಗಳನ್ನಾಗಿ ವಿಭಾಗಿಸಿ ಯೋಜನಾ ಕಾರ್ಯಕ್ರಮ ಗಳನ್ನು ನಡೆಸಬೇಕೆಂದು ತೀರ್ಮಾನಿಸಲಾಯಿತು.

ಭಾರತೀಯ ಶೈಕ್ಷಿಕ ಮಹಾಸಂಘದ ಮಾರ್ಗದರ್ಶಕರಾದ ಪ್ರೊ|| ಅನಿರುದ್ಧ ದೇಶಪಾಂಡೆಯವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಕಿಯರನ್ನು ಕುರಿತು ಪ್ರತಿ ಶಿಕ್ಷಣಸಂಸ್ಥೆಯಲ್ಲಿ ಗುರುವಂದನಾ ಮತ್ತು ಕರ್ತವ್ಯ ಬೋಧ ಕಾರ್ಯಕ್ರಮ ಗಳನ್ನು ಕಡ್ಡಾಯವಾಗಿ ನಡೆಸುವ ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸುವಂತೆ ತಿಳಿಸಿದರು.

ಸಮಾರೋಪದಲ್ಲಿ ಗೀತಾತಾಯಿಯವರು ಎಲ್ಲಾ ನಿವೇದನೆಗಳ ಪುನರಾವಲೋಕನ ಮಾಡುತ್ತಾ ಮಹಿಳೆ ಅತ್ಯಂತ ದಕ್ಷ ನಿರ್ವಾಹಕಿ ಯಾಗುತ್ತಾಳೆಂದು ಹೇಳುತ್ತಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ನಮ್ಮೆಲ್ಲಾ ಚಿಂತನೆಗಳನ್ನು ಸಾಮಾನ್ಯ ಮಹಿಳೆಯರಿಗೂ ತಲುಪಿಸಬೇಕು. ಆಗ ಮಾತ್ರ ನಮ್ಮ ಎಲ್ಲಾ ಶ್ರಮ ಸಫಲವಾಗುತ್ತದೆ ಎಂದು ತಿಳಿಸಿದರು.

ವರದಿ : ಬಿ. ಕೆ. ಮಮತಾ, ರಾಜ್ಯ ಮಹಿಳಾ ಪ್ರಮುಖರು

Highslide for Wordpress Plugin