ಶಿಕ್ಷಕರು ತಮ್ಮ ಹಳೆ ಅನುಭವಗಳ ಜತೆಗೆ ಹೊಸ ಅನುಭವಗಳನ್ನು ಸೇರಿಸಿಕೊಂಡು ಪಾಠ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ 8-11-2016, ಮಂಗಳವಾರ ನಗರದ ತಾಲ್ಲೂಕು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಪಾತ್ರ ಕುರಿತ ಒಂದು ದಿನ ಕಾರ್ಯಾಗಾರ ಹಾಗೂ ವಿಷನ್-2016 ಕುರಿತು ಮಾತನಾಡಿದರು.
ಪಾಠದ ಜತೆಗೆ ಪ್ರೀತಿ, ಅಂತಃಕರಣ ಇರಬೇಕು, ಕೇವಲ ಸಂಬಳಕ್ಕಾಗಿ ಕೆಲಸ ಮಾಡಬಾರದು, ಶಿಕ್ಷಕರಲ್ಲಿ ಕಲಿಸುವ ಹಪಾಹಪಿ ಇರಬೇಕು, ಪಾಠ ಮಾಡುವ ಉತ್ಸುಕತೆ ಇದ್ದರೆ ಹೊಸ ಹೊಸ ತಂತ್ರಗಳು ತಾನಾಗಿಯೇ ಹೊಳೆಯುತ್ತವೆ ಎಂದು ತಿಳಿಸಿದರು. ಪರೀಕ್ಷೆಯಲ್ಲಿ ಅಂಕ ಗಳಿಸುವುದೇ ಇಂದು ಮುಖ್ಯವಾಗಿದೆ, ಈ ಮನಸ್ಥಿತಿ ಬದಲಾಗಬೇಕು, ನಕಲು ಮಾಡಿಯೂ ಹೆಚ್ಚು ಅಂಕ ಗಳಿಸಬಹುದು, ಎನ್ನುವುದನ್ನು ಯಾರು ಮರೆಯಬಾರದು, ಅಂಕಗಳಿಗಿಂತ ಮಕ್ಕಳು ವಿಷಯವನ್ನು ಎಷ್ಟು ತಿಳಿದುಕೊಂಡಿದ್ದಾರೆ ಎನ್ನುವುದು ಮುಖ್ಯ ಎಂದರು.
ಹೃದಯದಿಂದ ಕಲಿಯುವ ಯಾವುದೇ ವಿಷಯ ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ ಪರೀಕ್ಷೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಕ್ಕಳು ಓದುವುದರಿಂದ ಶಿಕ್ಷಕರು ಹೇಳಿಕೊಟ್ಟ ಪಾಠ ಅವರ ನೆನಪಿನಲ್ಲಿ ಉಳಿಯುವುದಿಲ್ಲ. ಇದರರ್ಥ ಮಕ್ಕಳಿಗೆ ಪರೀಕ್ಷೆ ಎಂಬುದು ಭಾರವಾಗಿದ್ದು, ಅದು ಬದಲಾಗುವ ಅಗತ್ಯವಿದೆ, ಎನಿಸುತ್ತದೆ ಎಂದು ತಿಳಿಸಿದರು. ನೋಡುವುದು, ಕೇಳಿಸಿಕೊಳ್ಳುವುದು, ಬರೆಯುವುದು- ಓದುವುದು ಮತ್ತು ಮಾಡುವುದರ ಮೂಲಕ ಮಕ್ಕಳು ವಿಷಯವನ್ನು ಗ್ರಹಿಸುತ್ತಾರೆ. ಅದರಲ್ಲೂ ಶೇ 78 ರಷ್ಟು ಮಕ್ಕಳು ನೋಡುವ ಮೂಲಕ ಕಲಿಯುತ್ತಾರೆ. ಹಾಗಾಗಿ ಶಿಕ್ಷಕರು ಪ್ರಾಜೆಕ್ಟರ್ ಮೂಲಕ ವಿಷಯ ಕಲಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಇರುತ್ತದೆ ಎಂದು ಸಲಹೆ ಮಾಡಿದರು. ಬಹಳಷ್ಟು ಶಿಕ್ಷಕರು ಯಾಂತ್ರಿಕವಾಗಿ ಪಾಠ ಮಾಡುತ್ತಿದ್ದು, ಅದು ಬದಲಾಗಬೇಕು. ಶಿಕ್ಷಕರು ಕೇವಲ ಯಾಂತ್ರಿಕವಾಗಿ ಪಾಠ ಮಾಡದೇ ಮಕ್ಕಳನ್ನು ಅದರಲ್ಲಿ ತೊಡಗಿಸಿಕೊಂಡರೆ ಅದು ಹೆಚ್ಚು ಮನನವಾಗುತ್ತದೆ. ಪಾಠ ಮಾಡುವಾಗ ನಮ್ಮ ಧ್ವನಿಯಲ್ಲಿ ಏರಿಳಿತ ಇರಬೇಕು, ಇದರಿಂದ ಮಕ್ಕಳಿಗೆ ಪಾಠ ಗ್ರಹಿಸಲು ಅನುಕೂಲವಾಗುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಧರನ್ ಉದ್ಘಾಟಿಸಿ, ಶಿಕ್ಷಕರು ಮಕ್ಕಳಿಗೆ ಒತ್ತಡ ಹೇರದೆ ಪ್ರೀತಿ- ವಿಶ್ವಾಸದಿಂದ ಕಲಿಸಬೇಕು, ಒಂದು ಮುನ್ನೋಟವನ್ನು ಹಾಕಿಕೊಂಡು ಫಲಿತಾಂಶ ಹೆಚ್ಚಳಕ್ಕೆ ಗಮನಹರಿಸಬೇಕು, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಜಿಲ್ಲೆಯ ಮಕ್ಕಳು ಹಿಂದೆ ಉಳಿಯುತ್ತಿದ್ದಾರೆ, ಹೀಗಾಗಿ ಈ ಶಿಕ್ಷಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕಾರ್ಯಾಗಾರದಲ್ಲಿ ತಿಳಿಸಿದರು.
ಅಮರನಾಥ್ ಪಾಟೀಲ್ ಎಂ.ಎಲ್.ಸಿ ಮಾತನಾಡುತ್ತಾ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಶಿಕ್ಷಕರು ಶ್ರಮಿಸಬೇಕು, ಬಳ್ಳಾರಿ ಜಿಲ್ಲೆ ೨೦೧೪-೧೫ರಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ೨೪ನೇ ಸ್ಥಾನದಲ್ಲಿತ್ತು, ೨೦೧೫-೧೬ರಲ್ಲಿ ೩೪ನೇ ಸ್ಥಾನ ಗಳಿಸಿದೆ. ಹೀಗಾಗಿ ಮುಂದಿನ ಬಾರಿ ಉತ್ತಮ ಫಲಿತಾಂಶ ಪಡೆಯಬೇಕು. ಗಣಿತ ಕಬ್ಬಿಣದ ಕಡಲೆಯಲ್ಲ, ಅದನ್ನು ಸರಳ ಸೂತ್ರದಲ್ಲಿ ಕಲಿಸಬೇಕು, ವಿಜ್ಞಾನಕ್ಕೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ, ಅಖಿಲ ಭಾರತ ರಾಷ್ಟ್ರೀಯ ಶೈಕ್ಷಣಿಕ ಸಂಘದ ಮುಖ್ಯ ಪ್ರಶಿಕ್ಷಣ ಪ್ರಕೋಷ್ಠ ಹೆಚ್. ನಾಗಭೂಷಣರಾವ್, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ. ಆರ್. ಕೊಟ್ರಪ್ಪ, ಕಲಬುರ್ಗಿ ವಿಭಾಗದ ಪ್ರಮುಖ ಎ. ಗುಂಡಾಚಾರ್, ಮಾಧ್ಯಮಿಕ ಶಿಕ್ಷಕ ಸಂಘದ ಮಲ್ಲಿಕಾರ್ಜುನ್, ರಮೇಶ್, ಆರೋಗ್ಯ ಇಲಾಖೆಯ ರೇವಣ್ಣಸಿದ್ದಪ್ಪ, ವಕೀಲ. ಎಲ್.ಎಸ್. ಆನಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರೌಢಶಾಲೆಯ ಗಣಿತ ಹಾಗೂ ವಿಜ್ಞಾನ ಶಿಕ್ಷಕರು ಹಾಗೂ ಮುಖ್ಯ ಗುರುಗಳು, ಒಟ್ಟು ಸುಮಾರು ೨೫೦ ಕ್ಕೂ ಹೆಚ್ಚು ಸಂಖ್ಯೆ ಕಾರ್ಯಾಗಾರಲ್ಲಿ ಪಾಲ್ಗೊಂಡಿದ್ದರು.