ವಡೋದರಾ : 2016 ರ ಡಿಸೆಂಬರ್ 17 ಮತ್ತು 18 ರ ಶನಿವಾರ, ಭಾನುವಾರದಂದು ಗುಜರಾತ್ ರಾಜ್ಯದ ವಡೋದರದ ಸ್ವಾಮಿನಾರಾಯಣ ಮಂದಿರದಲ್ಲಿ ಅಖಿಲ ಭಾರತೀಯ ಮಹಿಳಾ ಕಾರ್ಯಕರ್ತೆಯರ ವರ್ಗ ನಡೆಯಿತು.
ಡಾ|| ವಿಮಲ್ ಪ್ರಸಾದ್ಜೀಯವರು ಶೈಕ್ಷಿಕ ಮಹಾಸಂಘದ ಪರಿಚಯವನ್ನು ಸಭೆಗೆ ಮಾಡಿಸುತ್ತಾ ಪ್ರತಿ ವರ್ಷದ ಜನವರಿ 12 ರಿಂದ 23 ರವರೆಗಿನ ಯಾವುದಾದರೊಂದು ದಿನವನ್ನು ಆಯ್ಕೆ ಮಾಡಿಕೊಂಡು ಕರ್ತವ್ಯಬೋಧ ದಿನವನ್ನಾಗಿ ಆಚರಿಸುವ ರೀತಿ, ಗುರುಪೂರ್ಣಿಮ ದಿನದಂದು ಗುರುವಂದನೆಯನ್ನು ಆಚರಿಸುವ ಬಗ್ಗೆ ಮತ್ತು ವಿಶ್ವ ವಿಭಾಗದ ಶಿಕ್ಷಾ ಭೂಷಣ್ ಸನ್ಮಾನದ ಬಗ್ಗೆಯೂ ಸವಿಸ್ತಾರವಾಗಿ ತಿಳಿಸಿದರು.
ರಾಷ್ಟ್ರಸೇವಿಕಾ ಸಮಿತಿಯ ವಿಶ್ವವಿಭಾಗದ ಪ್ರಚಾರಕರಾದ ಭಾಗ್ಯಶ್ರೀ ಸಾಠೆಯವರು ಶಾಶ್ವತ ಜೀವನ ಮೌಲ್ಯವನ್ನು ಪ್ರಧಾನ ವಿಷಯವನ್ನಾಗಿಟ್ಟುಕೊಂಡು ಮಾತನಾಡುತ್ತಾ ತಾವು ವಿದೇಶದಲ್ಲಿ ಪ್ರಚಾರ ಕಾರ್ಯ ಮಾಡುವಾಗ ಆದ ಅನುಭವಗಳನ್ನು ತಿಳಿಸುತ್ತಾ “Tailor makes a man gentleman in foreign, but character makes a man gentleman in India” ಎಂದು ತಿಳಿಸಿದರು. ಗರುಡ ಪಕ್ಷಿಯ ಎರಡು ರೆಕ್ಕೆಗಳು ಬಲಿಷ್ಠವಾಗಿದ್ದರೆ ಮಾತ್ರ ಗರುಡ ಎಲ್ಲಾ ಸಮಸ್ಯೆಗಳನ್ನು ಮೀರಿ ಅತಿ ಎತ್ತರದಲ್ಲಿ ಹಾರಾಟ ಮಾಡಬಹುದು. ಹಾಗೆಯೇ ಕುಟುಂಬದಲ್ಲಿ ಪುರುಷ ಮತ್ತು ಸ್ತ್ರೀಯರಿಬ್ಬರು ಬಲಿಷ್ಠವಾಗಿದ್ದರೆ ಮಾತ್ರ ಪರಿವಾರ ಸಂತೃಪ್ತವಾಗಿರಬಹುದೆಂದು ತಿಳಿಸಿದರು.
ವ್ಯಷ್ಠಿ, ಸಮಷ್ಠಿ, ಸೃಷ್ಠಿ, ಪರಮೇಷ್ಠಿಯ ಬಗ್ಗೆ ಗಮನವಿದ್ದಾಗಲೇ ಶಾಶ್ವತ ಜೀವನ ಮೌಲ್ಯವನ್ನು ಉಳಿಸಿ ಬೆಳೆಸಲು ಸಾಧ್ಯವೆಂದು ಹೇಳಿದರು. ಪರಿವಾರವೆಂದರೆ ಸುರಕ್ಷತೆಯ ಆವರಣವಾಗಿರಬೇಕು, ಸ್ನೇಹ, ಆತ್ಮೀಯತೆಯ ಕವಚವಾಗಿರಬೇಕು. ಒಟ್ಟಾರೆ ಪರಿವಾರದಲ್ಲಿ ಗೋಕುಲದಂತಹ ವಾತಾವರಣವಿರುವುದು ಅವಶ್ಯಕವೆಂದು ಹೇಳಿದರು.
ಕಾರ್ಯಕ್ರಮದ ಮೊದಲನೇ ಅಧಿವೇಶನದ ವಿಷಯ ಪರಿವಾರದ ಕೇಂದ್ರ ಬಿಂದು ಸ್ತ್ರೀ ಎನ್ನುವುದಾಗಿತ್ತು. ಅಧಿವೇಶನದ ಸಂಪನ್ಮೂಲ ವ್ಯಕ್ತಿಯಾದ ಕಲ್ಪನಾಪಾಂಡೆಯವರು ಪರಿವಾರದಲ್ಲಿ ಪರಸ್ಪರ ಸಂವಾದ ಅಗತ್ಯವೆಂದು ತಿಳಿಸಿದರು. ಹೊಸ ಹಳೆಯ ತಲೆಮಾರುಗಳ ಮಧ್ಯೆ ಸಂಘರ್ಷ ಇರಬಾರದು. ಪರಿವಾರದ ಕೇಂದ್ರಬಿಂದುವಾಗಿ ಮಹಿಳೆ ಪರಿವಾರವನ್ನು ಸದೃಢ ಪಡಿಸಬೇಕೆಂದು ತಿಳಿಸಿದರು. ಈ ಅಧಿವೇಶನದ ಅಧ್ಯಕ್ಷತೆಯನ್ನು ಶ್ರೀಮತಿ ಡಾ|| ರೇಖಾಭಟ್ ರವರು ವಹಿಸಿದ್ದರು. ಪರಿವಾರದ ಕೇಂದ್ರಬಿಂದುವಾದ ಮಹಿಳೆ ಪರಿವಾರದ ಕೆಲಸಗಳನ್ನು ಕರ್ತವ್ಯದೃಷ್ಟಿಯಿಂದಲೇ ಮಾಡುತ್ತಾಳೆ. ಅಲ್ಲಿ ಆಕೆಗೆ ಯಾವ ಪ್ರತಿಸ್ಪರ್ಧಿಯೂ ಇರುವುದಿಲ್ಲ. ಪರಿವಾರದ ಗತಿಶೀಲತೆಯನ್ನು ಮಹಿಳೆ ನೋಡುತ್ತಾಳೆ. ಅಂತೆಯೇ ಸಮಾಜದ ಗತಿಶೀಲತೆ ನಡೆಯುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಎರಡನೇ ಅಧಿವೇಶನದ ವಿಷಯ ಪರಿವಾರದ ಮೇಲೆ ಆಘಾತ ಮಾಡುವಂತಹ ವಿಷಯಗಳೇನು? ಎಂಬುದಾಗಿದ್ದು, ವಿಷಯ ಪ್ರವರ್ತಕರಾಗಿ ಸುದೇಷ್ಣಾ ಶರ್ಮಾರವರು ಹಾಗೂ ಕಾರ್ಯಕ್ರಮದ ಸಂಚಾಲಕಿಯಾಗಿ ಶ್ರೀಮತಿ ಮಮತಾ ಡಿ.ಕೆ ಕಾರ್ಯ ನಿರ್ವಹಿಸಿದರು. ಪರಿವಾರದ ಮೇಲೆ ಆಘಾತವನ್ನುಂಟು ಮಾಡುವ ಕೆಲವು ಕಾರಣಗಳನ್ನು ಈ ರೀತಿ ಪಟ್ಟಿ ಮಾಡಲಾಯಿತು.
1. ವೃತ್ತಿನಿರತ ಮಹಿಳೆಯರು, 2. ಅಹಂ ಹೊಂದಿರುವ ಪುರುಷ ಮತ್ತು ಮಹಿಳೆಯರಿಂದ, 3. ವಿಭಕ್ತ ಕುಟುಂಬಗಳಿಂದ, 4. ಮಾಧ್ಯಮಗಳ ಕುಪ್ರಭಾವ, 5. ಪತಿ-ಪತ್ನಿಯರ ಪ್ರತಿಸ್ಪರ್ಧೆ 6. ಪಾಶ್ಚಾತ್ಯೀಕರಣ, 7. ಸಂವಾದ ವಿಹೀನ ಪರಿವಾರ 8. ಮಾನವೀಯ ಮೌಲ್ಯಗಳ ನ್ಯೂನತೆ. ಈ ನ್ಯೂನತೆಗಳ ನಿವಾರಣೆಗೆ ಮಾಡಬೇಕಾದ ಅಂಶಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮೇಶ್ವರಿ ಶರ್ಮಾರವರು ಪರಿವಾರಕ್ಕೆ ಆಘಾತ ನೀಡುವ ಅಂಶಗಳನ್ನು ದೂರಮಾಡುತ್ತಾ ಸಶಕ್ತ ಪರಿವಾರ ಕಟ್ಟಬೇಕೆಂದು ತಿಳಿಸಿದರು.
18-12-2016 ರ ಮೊದಲನೇ ಅಧಿವೇಶನದಲ್ಲಿ ಕಾರ್ಯಕಾರಿಣಿ ಸಭೆ ನಡೆಯಿತು. ನಂತರದ ಅಧಿವೇಶನದಲ್ಲಿ ಪರಿವಾರದ ಮೇಲಾಗುವ ಆಘಾತಗಳಿಗೆ ಶಾಸನಾತ್ಮಕವಾಗಿ ಏನೇನು ಸಮಾಧಾನ ನೀಡಬಹುದೆಂಬುದರ ಬಗ್ಗೆ ಚರ್ಚಿಸಲಾಯಿತು. ಭಾಗ್ಯಶ್ರೀಸಾಠೆಜೀರವರು ಪರಿವಾರದಲ್ಲಿರಬೇಕಾದ ಒಳ್ಳೆಯ ಮೌಲ್ಯಗಳೇನು? ಎಂಬುವುದನ್ನು ಪಿಪಿಟಿ ಮೂಲಕ ತೋರಿಸುತ್ತಾ ಸವಿಸ್ತಾರವಾಗಿ ವಿವರಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಿಯಂವಧಾಜೀಯವರು ಮಾತನಾಡುತ್ತಾ ಪರಿವಾರದ ಕೇಂದ್ರ ಬಿಂದು ಸ್ತ್ರೀ. ಒಂದು ಸರಿಯಾದ ಕೇಂದ್ರ ಬಳಸಿದರೆ ಮಾತ್ರ ಒಂದು ಸುಂದರವಾದ ವೃತ್ತ ರಚಿಸಲು ಸಾಧ್ಯ, ಹಾಗೆಯೇ ಸ್ತ್ರೀ ಸರಿಯಾದ ಕೇಂದ್ರ ಬಿಂದುವಾಗಿ ಪರಿವಾರವೆಂಬ ಸುಂದರವಾದ ವೃತ್ತವನ್ನು ರಚಿಸಿಕೊಳ್ಳಬೇಕೆಂದು ತಿಳಿಸಿದರು.
ಗುಜಾರಾತ್ನ ವಡೋದರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 8 ರಾಜ್ಯಗಳಿಂದ 70 ಕಾರ್ಯಕರ್ತೆಯರು ಭಾಗವಹಿಸಿದ್ದ ಅಭ್ಯಾಸವರ್ಗದಲ್ಲಿ ಅ.ಭಾ.ರಾ.ಶೈ. ಮಹಾಸಂಘದ ಹಿರಿಯ ಪೋಷಕರಾದ ಸಂಜೀವಿನಿ ರಾಯ್ಕರ್ರವರು ಮತ್ತು ಅ.ಭಾ.ರಾ.ಶೈ.ಮಹಾಸಂಘದ ಅಧ್ಯಕ್ಷರಾದ ಡಾ|| ವಿಮಲ್ ಪ್ರಸಾದ್ ಅಗರ್ವಾಲ್ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಅ.ಭಾ.ರಾ.ಶೈ.ಮಹಾಸಂಘದ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯದರ್ಶಿಯಾದ ಶ್ರೀಮತಿ ಸೀತಾಲಕ್ಷ್ಮಿಯವರು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಕರ್ನಾಟಕದಿಂದ ೯ ಮಹಿಳಾ ಕಾರ್ಯಕರ್ತೆಯರ ಭಾಗವಹಿಸುವಿಕೆ ಹೆಮ್ಮೆ ತರುವ ವಿಷಯವಾಗಿತ್ತು.
ವರದಿ : ಮಮತಾ ಡಿ.ಕೆ., ಮಹಿಳಾ ಪ್ರಮುಖ್