1. ರಾಜ್ಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಸರ್ಕಾರ ಯಾವ ಯೋಜನೆಗಳನ್ನು ಕೈಗೊಂಡಿದೆ; (ವಿವರ ನೀಡುವುದು)
ಉತ್ತರ: ಸರ್ವ ಶಿಕ್ಷಣ ಅಭಿಯಾನದ ಕಂಪ್ಯೂಟರ್ ಆಧಾರಿತ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಕೇಂದ್ರ ಪುರಸ್ಕೃತ ಐಸಿಟಿ ಯೋಜನೆಯಡಿಯಲ್ಲಿ ಆಯ್ದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗಿದೆ. 2016-17ನೇ ಸಾಲಿನಿಂದ ರಾಜ್ಯದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ( ಟಿಎಎಲ್ಪಿ) ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮವನ್ನಾಗಿ ಮರು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.
2. ಮಾಹಿತಿ ಸಿಂಧು, ಐಸಿಟಿ-2 ಮತ್ತು 3 ನೇ ಹಂತಗಳಲ್ಲಿ ಎಷ್ಟು ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ (ವಿವರ ನೀಡುವುದು)
ಉತ್ತರ: ಮಾಹಿತಿ ಸಿಂಧು ಯೋಜನೆಯಡಿಯಲ್ಲಿ 1009 ಸರ್ಕಾರಿ ಪ್ರೌಢಶಾಲೆಗಳಲ್ಲಿ, ಐಸಿಟಿ ಫೇಸ್-1 ಯೋಜನೆಯಡಿಯಲ್ಲಿ 480 ಸರ್ಕಾರಿ ಪ್ರೌಢಶಾಲೆಗಳಲ್ಲಿ ಐಸಿಟಿ ಫೇಸ್ -2 ಯೋಜನೆಯಡಿಯಲ್ಲಿ 1571 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮತ್ತು 708 ಪದವಿ ಪೂರ್ವ ಕಾಲೇಜುಗಳಲ್ಲಿ ಐದು ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲಾಗಿದೆ. 2016-17ನೇ ಸಾಲಿನಲ್ಲಿ ಐಸಿಟಿ ಫೇಸ್ -3 ಯೋಜನೆಯನ್ನು (ಟಿಎಎಲ್ಪಿ) ತಂತ್ರಜ್ಞಾನ ಬೆಂಬಲಿತ ಕಲಿಕಾ ಕಾರ್ಯಕ್ರಮವನ್ನಾಗಿ ಮರು ರೂಪಿಸಲಾಗಿದ್ದು. ಈ ಯೋಜನೆಯಡಿ 2016-17ನೇ ಸಾಲಿನಲ್ಲಿ 1000 ಸರ್ಕಾರಿ ಪ್ರೌಢಶಾಲೆಗಳಲ್ಲಿ ಅನುಷ್ಠಾನ ಮಾಡಲಾಗುವುದು.