ಬಳ್ಳಾರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಬಳ್ಳಾರಿ : ಸ್ವಾಮಿ ವಿವೇಕಾನಂದರು ಆತ್ಮವಿಶ್ವಾಸದ ಪ್ರತೀಕ. ಅವರ ಭಾವಚಿತ್ರವನ್ನು ತದೇಕ ಚಿತ್ತದಿಂದ ನೋಡಿದಾಗ ನಿರಾಶ ಭಾವನೆ ತೊಲಗುತ್ತದೆ. ಮಹಾನ್ ಚೇತನ ಶಕ್ತಿ ಸ್ವರೂಪ ಅವರು. ಅಮೇರಿಕಾದ ಚಿಕಾಗೋ ಪ್ರಾಂತ್ಯದಲ್ಲಿ ಮಾಡಿದ ಭಾಷಣದಲ್ಲಿ ಇಡೀ ಪ್ರಪಂಚಕ್ಕೆ ಹಿಂದೂ ಧರ್ಮದ ಘನತೆಯನ್ನು ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರೊಬ್ಬ ವೀರ ಸನ್ಯಾಸಿ, ಬಾಲ್ಯದಿಂದಲೂ ಕಠಿಣ ವ್ರತಗಳನ್ನು ಆಚರಿಸುತ್ತಾ ತ್ಯಾಗಮಯಿ ಜೀವನ ಅನುಭವಿಸಿದವರು. ಏಳಿ! ಎದ್ದೇಳಿ! ಗುರಿಮುಟ್ಟುವವರೆಗೂ ವಿಶ್ರಮಿಸದಿರಿ ಎಂಬ ಸಂದೇಶವನ್ನು ಯುವ ಪೀಳಿಗೆಗೆ ನೀಡುತ್ತಾ ಈ ದೇಶದ ಸಂಸ್ಕೃತಿಯ ರಕ್ಷಣೆಗೆ ಕಂಕಣಬದ್ಧರಾಗುವಂತೆ ಎಚ್ಚರಿಸಿದರು ಎಂದು ಪ್ರಗತಿ ಕೃಷ್ಣ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ಡಬ್ಲ್ಯೂ. ನಾಗರಾಜ್ ನುಡಿದರು. ಅವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಉಪನ್ಯಾಸ ನೀಡಿದರು.

Bellary--sankalapadina

ಬಳ್ಳಾರಿ ಪೂರ್ವ ವಲಯದಿಂದ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರುದ್ರಮುನಿ ಸ್ವಾಮಿಯವರು ಮಾತನಾಡಿ, ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದ ದಂಪತಿಗಳಿಬ್ಬರು ದೀನದಲಿತರ ಸೇವೆಯಲ್ಲಿ ತೊಡಗಿದ ಅಪರೂಪದ ಕಥೆಯೊಂದನ್ನು ತಿಳಿಸಿದರಲ್ಲದೇ ಮಕ್ಕಳು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದುವಂತೆ ಕರೆನೀಡಿದರು. ಪ್ರೌಢಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ನಾಗರಾಜ ಮಾತನಾಡಿ ರಾಮಕೃಷ್ಣ ಪರಮಹಂಸರ ಗರಡಿಯಲ್ಲಿ ಪಳಗಿದ ಅನೇಕ ಶಿಷ್ಯವೃಂದದವರು ಸಂಸಾರ ತ್ಯಜಿಸಿ ಸನ್ಯಾಸಿಗಳಾದರು. ನರೇಂದ್ರ ವಿವೇಕಾನಂದರಾದರು. ಪಾಂಡಿತ್ಯವನ್ನು ಗಳಿಸಿಕೊಂಡಿದ್ದ ವಿವೇಕಾನಂದರ ಜೀವನ ಸಾಧನೆ ಅನುಕರಣೀಯ ಎಂದರು. ಜಿಲ್ಲಾಧ್ಯಕ್ಷರಾದ ಎ. ಗುಂಡಾಚಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರೂಪಣೆ ತಾಲ್ಲೂಕು ಅಧ್ಯಕ್ಷರಾದ ಯು. ರಮೇಶ್ ನಿರ್ವಹಿಸಿದರು. ಸೋಮಶೇಖರ್ ವಂದಿಸಿದರು.

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ವರದಿ : ಯು.ರಮೇಶ್, ಜಿಲ್ಲಾಧ್ಯಕ್ಷರು, ಬಳ್ಳಾರಿ

Highslide for Wordpress Plugin