ಬೆಂಗಳೂರು : ತಾಯಿಯೇ ಮೊದಲ ಗುರು ತಾಯಿಯನ್ನು ಮೊದಲು ಪೂಜಿಸಿ ಕೃತಜ್ಞರಾಗಿ. ಆಗ ನಿಮ್ಮ ಭವಿಷ್ಯ ಉಜ್ವಲವಾಗುವುದು. ಮೌಲ್ಯಗಳನ್ನು ಬೆಳೆಸಿಕೊಳ್ಳಿ, ಹಿರಿಯರನ್ನು ಗೌರವಿಸಿ, ದೇಶದ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ಟಿ.ವಿ. ರಾಜು ಶಾಲಾ ಪ್ರಥಮಿಗರಿಗೆ ಕಿವಿಮಾತು ಹೇಳಿದರು.
ದಿನಾಂಕ 13-7-2017 ರಂದು ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ 2017 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿನ ಶಾಲಾ ಪ್ರಥಮಿಗರು ಹಾಗೂ ಶೇಕಡಾ ೮೫ಕ್ಕಿಂತ ಹೆಚ್ಚು ಅಂಕಗಳಿಸಿದ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಪ್ರಥಮಿಗರನ್ನು ಸನ್ಮಾನಿಸಿದ ಶ್ರೀಮತಿ ಚಿತ್ರಾರಾವ್ ಎಂ.ಡಿ, ಹಿಮಾಂಶು ಜ್ಯೋತಿ ಕಲಾಪೀಠ ಇವರು ವಿದ್ಯಾರ್ಥಿಗಳ ಭಾವಿ ಜೀವನ ಉತ್ತಮವಾಗಲಿ ಎಂದು ಆಶಿಸಿದರು. ಎಲ್ಲೇ ಹೋದರೂ ನಮ್ಮ ಸಂಸ್ಕೃತಿ, ಭಾಷೆಗಳನ್ನು ಮರೆಯಬೇಡಿ ಎಂದು ಕರೆನೀಡಿದರು.
ಶಿಕ್ಷಕರ ಪ್ರತಿಭಾವಂತ ಮಕ್ಕಳನ್ನು ಗೌರವಿಸಿದ ಮತ್ತೊಬ್ಬ ಅತಿಥಿ ಶ್ರೀಮತಿ ಮುಕ್ತಾಕಾಗಲಿ, ಹೆಚ್.ಆರ್.ಡಿ, ಜೆ.ಎಸ್.ಎಸ್. ಸಂಸ್ಥೆ ಜಯನಗರ ಇವರು ವಿದ್ಯಾರ್ಥಿಗಳಿಗೆ ಆರೋಗ್ಯ ಮಹತ್ವ ಹಾಗೂ ಶಿಕ್ಷಣದಲ್ಲಿ ಮೌಲ್ಯಗಳ ಮಹತ್ವವನ್ನು ಕುರಿತು ಮಾತನಾಡಿದರು. ಮಾಧ್ಯಮಿಕ ಶಿಕ್ಷಕ ಸಂಘದ ಮಹಾಪೋಷಕರಾದ ಪ್ರೊ|| ಕೃ. ನರಹರಿಯವರು ಸನ್ಮಾನಿತ ಶಾಲಾ ಪ್ರಥಮಿಗರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮವು ಶಿಕ್ಷಕರಾದ ಸಾವಿತ್ರಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರೂ ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರಾದ ಅರುಣ್ ಶಹಾಪೂರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ 400 ವಿದ್ಯಾರ್ಥಿಗಳು ಸನ್ಮಾನಿತರಾದರು. ಉತ್ತರ ಜಿಲ್ಲೆಯ ಕಾರ್ಯದರ್ಶಿ ಗಂಗಪ್ಪನವರು ವಂದನಾರ್ಪಣೆ, ಶ್ರೀ ಸಿದ್ದೇಗೌಡರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭದಲ್ಲಿ ಉತ್ತರ ಜಿಲ್ಲೆಯ ಪದಾಧಿಕಾರಿಗಳಾದ ಹರಿದಾಸ್, ಜನಾರ್ಧನ್, ನಾರಾಯಣ್ ಭಟ್, ವಿಶ್ವನಾಥ್, ಟಿ.ಆರ್. ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು. ಮಾಧ್ಯಮಿಕ ಶಿಕ್ಷಕ ಸಂಘದ ಖಜಾಂಚಿಗಳಾದ ಜೆ.ಎಂ ಜೋಷಿ, ಜಿ.ಎಸ್. ಕೃಷ್ಣಮೂರ್ತಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು. ಕುಮಾರಿ ಸಿರಿಯವರ ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.