ಭಾರತವು ಮತ್ತೆ ವಿಶ್ವಗುರುವಾಗಿ ಮೆರೆಯಬೇಕಾದರೆ ನಮ್ಮ ಯಾತ್ರೆಯು ಶಿಕ್ಷಕನಿಂದ ಗುರುವಿನತ್ತ ಸಾಗಬೇಕು. ಆ ನಿಟ್ಟಿನಲ್ಲಿ ಮನೆಯಲ್ಲಿ ತಾಯಿ, ವರ್ಗದಲ್ಲಿ ಶಿಕ್ಷಕ, ಸಮಾಜದಲ್ಲಿ ಸನ್ಯಾಸಿ ಸುಧಾರಿಸಬೇಕಾಗಿದೆ ಅಂದಾಗಲೇ ದೇಶ ಮತ್ತು ಸಮಾಜ ಸುಧಾರಿಸಲು ಸಾಧ್ಯವೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರಕರಾದ ಶ್ರೀ ಶಂಕರಾನಂದ ಹೇಳಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘ, ಕರ್ನಾಟಕ ಅಧ್ಯಾಪಕ ಪರಿಷತ್ ಹಾಗೂ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಆಶ್ರಯದಲ್ಲಿ ವಿದ್ಯಾನಗರ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದ ಬಯೋಟೆಕ್ ಸಭಾಂಗಣದಲ್ಲಿ ಬುಧವಾರ (ಆಗಸ್ಟ್ 16) ಆಯೋಜಿಸಿದ್ದ ಗುರುವಂದನೆ ಹಾಗೂ ಶಿಕ್ಷಕರ ಗುಣಮಟ್ಟ ಸವಾಲುಗಳು-ಪರಿಕಲ್ಪನೆ ವಿಷಯದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಋಗ್ವೇದದಿಂದಲೂ ಭಾರತವು ಗುರು-ಶಿಷ್ಯ ಪರಂಪರೆ ಯಿಂದಾಗಿಯೇ ವಿಶ್ವಗುರುವಾಗಿ ಮೆರೆದಿದೆ. ಮನುಷ್ಯ ವಿಕಾಸವಾಗಬೇಕಾದರೆ ಪರಾಕ್ರಮ, ತ್ಯಾಗ, ಜ್ಞಾನ ಮುಖ್ಯ. ಈ ಮೂರು ವಿಕಾಸವಾಗಬೇಕಾದರೆ ಗುರು-ಶಿಷ್ಯ ವಿಶಿಷ್ಟ ಪರಂಪರೆ ಮುಂದುವರಿಯಬೇಕು. ಶಿಕ್ಷಕರಾದವರು ವಿದ್ಯಾರ್ಥಿಗಳನ್ನು ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯಬೇಕು. ಮಕ್ಕಳಲ್ಲಿ ಅಂಧಕಾರ ಹೊಡೆದೋಡಿಸುವ ಹಾಗೂ ಅವರಲ್ಲಿ ಅರಿವು ಮೂಡಿಸುವವರೆ ಶಿಕ್ಷಕ ಎಂದರು.
ತಾಯಿಯಾದವಳು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಬೆಳೆಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಸನ್ಯಾಸಿಗಳು ಸಮಾಜವನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯಬೇಕು. ಅಂದಾಗ ಮಾತ್ರ ದೇಶದಲ್ಲಿ ಪರಿವರ್ತನೆ ಯಾಗಲು ಸಾಧ್ಯ. ಆದರೆ ಪ್ರಸ್ತುತ ತಾಯಿ, ಶಿಕ್ಷಕ, ಸನ್ಯಾಸಿ ಮೂವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಕೊಡುವ ಹಾಗೂ ಅವರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿಲ್ಲ. ಅದರ ಬದಲು ರಾಜಕೀಯ ಮಾಡುತ್ತ ಹೊರಟ್ಟಿದ್ದಾರೆ. ಶಿಕ್ಷಕರ ಮನಸು, ಮಾತು, ಕೃತಿ ಒಂದಾಗಬೇಕು ಎಂದು ತಿಳಿಸಿದರು.
ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ತಾವು ಕಲಿಯುತ್ತಿರುವುದೇ ಉದ್ಯೋಗಕ್ಕಾಗಿ ಎಂಬ ಭಾವನೆ ಹೋಗಬೇಕು. ಸ್ವತಂತ್ರ್ಯವಾಗಿ ಆರ್ಥಿಕವಾಗಿ ನೆಲೆಗಟ್ಟು ಕಾಣುವ ಮನೋಭಾವ ಬೆಳಿಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಗುಣಮಟ್ಟದ ಶಿಕ್ಷಣದಿಂದ ಬಹಳಷ್ಟು ಬದಲಾವಣೆ ಸಾಧ್ಯ. ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ತಾಂತ್ರಿಕ ಶಿಕ್ಷಣ ಮುಖ್ಯ. ಆ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ ಪ್ರತಿಯೊಬ್ಬರಿಗೆ ಪ್ರೇರೇಪಣೆ ನೀಡುವವರೆ ಶಿಕ್ಷಕರು. ಸಮಾಜದಲ್ಲಿನ ಉತ್ತಮ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸುವ ಅವರಿಗೆ ಮೌಲ್ಯಯುತ ಶಿಕ್ಷಣ ಕೊಡಬೇಕು. ಸಮಾಜದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಬಾರದು ಎಂದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಕೊಡಬೇಕು. ಅಂಕಗಳ ಜೊತೆ ವ್ಯಕ್ತಿತ್ವ ವಿಕಸನವಾಗಬೇಕು. ಜೀವನಕ್ಕಾಗಿ ಶಿಕ್ಷಣವಾಗಬೇಕೆ ವಿನಃ ಅಂಕಗಳಿಗಲ್ಲ, ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನದ ಜ್ಯೋತಿ ಆಗಬೇಕು ಎಂದರು.
ವೃತ್ತಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಎಂಟು ಅಧ್ಯಾಪಕರಿಗೆ ಇದೇ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ. ಬಿ. ಪಿ. ಹುರಕಡ್ಲಿ, ನರಗುಂದ ಪ್ರಥಮ ದರ್ಜೆ ಕಾಲೇಜಿನ ಮಲ್ಲಪ್ಪ ಡಿ. ಕಮತಗಿ, ಗ್ರಂಥಪಾಲಕ ಬಿ. ಎಸ್. ಮಾಡವಾಡ, ರಮೇಶ ಕೆ. ಮೆಸ್ತಾ ವೈಜ್ಞಾನಿಕ ಸಂಶೋಧನೆಗೆ ಅಪ್ರತಿಮ ಕೊಡುಗೆ ನೀಡಿದ ಮಹಾದೇವಪ್ಪ ಅವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಿಕ್ಷಣ ಕ್ಷೇತ್ರಕ್ಕೆ ಉಪಯುಕ್ತ ಕೊಡುಗೆ ನೀಡಿದ ಶಿವಾನಂದ ನಾಗೂರ ಹಾಗೂ ಸುಮಿತ್ರಾ ಕೊಲೂರ ಅವರಿಗೆ ಶಿಕ್ಷಕ ಚೇತನ ಮತ್ತು ಪ್ರೊ. ಅನಿಲ್ ವೈದ್ಯ ಅವರಿಗೆ ಅಧ್ಯಾಪಕ ಚೇತನ ಪ್ರಶಸ್ತಿ ನೀಡಲಾಯಿತು. ವಿವಿಧ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದ 50 ಜನ ಪ್ರಾಧ್ಯಾಪಕರಿಗೂ ಅಭಿನಂದಿಸಲಾಯಿತು.
ಕ.ವಿ.ವಿ ಸಿಂಡಿಕೇಟ್ ಸದಸ್ಯರಾದ ಶ್ರೀ ಶಾಂತಣ್ಣ ವಾಯ್. ಕಡಿವಾಲ, ಕರ್ನಾಟಕ ಅಧ್ಯಾಪಕ ಪರಿಷತ್ ರಾಜ್ಯ ಅಧ್ಯಕ್ಷರಾದ ಡಾ|| ರಘು ಅಕ್ಮಂಚಿ, ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಪ್ರೊ. ಸಂದೀಪ ಬೂದಿಹಾಳ, ಸಂಯೋಜಕರಾದ ಡಾ. ಪ್ರಸನ್ನ ಫಂಡರಿ, ಡಾ. ಹೆಚ್. ವ್ಹಿ. ಬೆಳಗಲಿ, ಡಾ. ಗುರುನಾಥ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು.