ನಮ್ಮ ದೇಶದಲ್ಲಿ ಬೇರೆ ದೇಶಗಳಿಗಿಂತ ಭಿನ್ನವಾದ ಕಾರ್ಯಕ್ಷಮತೆಯಿದೆ. ನಾವು ಚಿಂತಿಸುವುದು, ಕೈಗೊಳ್ಳುವ ಕಾರ್ಯ ಕೇವಲ ನಮ್ಮ ದೇಶದ ಏಳಿಗೆಗಲ್ಲ, ಇಡೀ ಪ್ರಪಂಚಕ್ಕೆ ಬೇಕಾದುದನ್ನು ಮಾಡುತ್ತೇವೆ, ದಕ್ಷಿಣ ಏಷ್ಯಾ ಸೆಟಲೈಟ್ಗಳನ್ನು ನಿರ್ಮಿಸಿದ್ದನ್ನು ಇಡೀ ಪ್ರಪಂಚ ಶ್ಲಾಘಿಸುತ್ತಿದೆ, ವೈಯಕ್ತಿಕ ಯೋಚನೆಗಿಂತ ಪರಿಸರದಲ್ಲಿ ಎಲ್ಲ ಜೀವಿಗಳಿಗೆ, ಮುಂದಿನ ಪೀಳಿಗೆಗೆ ಒಂದು ಜವಾಬ್ದಾರಿಯನ್ನು ತರುತ್ತದೆ, ನಮ್ಮ ಪರಂಪರೆಯಲ್ಲಿಯೂ ಅದನ್ನೇ ಕಾಣುತ್ತೇವೆ. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ದಕ್ಷಿಣ ಜಿಲ್ಲೆಯ ವಿಭಾಗ ಎಸ್.ಎಸ್.ಎಲ್.ಸಿಯಲ್ಲಿ ಉನ್ನತಶ್ರೇಣಿಯ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಸ್ರೋ ಸಂಸ್ಥೆಯ ನಿರ್ದೇಶಕರಾದ ಶ್ರೀ ಕಿರಣ್ಕುಮಾರ್ ಈ ಮಾತುಗಳೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅಭಿನಂದಿಸಿದರು.
ದಿನಾಂಕ 6-8-2017 ರಂದು ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ನಡೆದ ಈ ಸಮಾರಂಭದಲ್ಲಿ ಇನ್ನೂರು ವಿದ್ಯಾರ್ಥಿಗಳು ಪುರಸ್ಕೃತರಾಗಿ ಅವರಲ್ಲಿ ದಿವ್ಯಾಂಗ ಚೇತನ ವಿದ್ಯಾರ್ಥಿಗಳೂ ಇದ್ದುದು ಒಂದು ವಿಶೇಷ.
ಭಾರತ ವಿಶ್ವಗುರು ಆಗಬೇಕು, ಯುವ ಪೀಳಿಗೆಯಲ್ಲಿ ಕೌಶಲ್ಯವನ್ನು ಅಭಿವೃದ್ಧಿಪಡಿಸಬೇಕು, ಅವರು ಆವಿಷ್ಕಾರ ಮಾಡಿ ದೇಶವನ್ನು ಮಾದರಿ ದೇಶವನ್ನಾಗಿ ಮಾಡಬೇಕು, ಪ್ರಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಮನೋಭಾವ ಎಲ್ಲರಲ್ಲಿ ಬರಬೇಕು, ವಿಜ್ಞಾನ, ತಂತ್ರಜ್ಞಾನ ಬಳಸಿ ಸಾಮಾಜಿಕ ಜೀವನಕ್ಕೆ ಅಗತ್ಯವಾದಂತೆ ಬಳಸಿಕೊಳ್ಳಬೇಕು, ವೈಯುಕ್ತಿಕ ಸಾಧನೆಗಿಂತ ದೇಶಕ್ಕೆ ಕೊಡುಗೆ ಮುಖ್ಯ, ಕಲಿಯುವ ವಿಷಯಕ್ಕಿಂತ ಕಲಿಯುವ ಪದ್ಧತಿ ಮುಖ್ಯ ಎಂಬ ಕಿವಿಮಾತುಗಳನ್ನು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ಆಗಮಿಸಿದ್ದ ಮತ್ತೊಬ್ಬ ಅತಿಥಿಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಸಹಬೌದ್ಧಿಕ್ ಆದ ಶ್ರೀ ಸಿ.ಆರ್. ಮುಕುಂದ್ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತ ಪ್ರತಿಭೆಗೆ ಹತ್ತು ಹಲವು ಮುಖಗಳೆಂದೂ ಅಂಕಪಟ್ಟಿಯ ಆಧಾರ ಅಂತಹ ಒಂದು ಅಂಶವನ್ನು ಮಾತ್ರ ಸೂಚಿಸುತ್ತದೆಂದೂ ಉಳಿದಂತೆ, ರಾಷ್ಟ್ರಕ್ಕೆ ಬೇಕಾದ ರೀತಿಯಲ್ಲಿ ಎಳೆಯ ಪ್ರತಿಭೆಗಳನ್ನು ವಿಕಾಸಗೊಳಿಸುವ ಜವಾಬ್ದಾರಿ ಶಿಕ್ಷಕರದೆಂದು ಹೇಳುತ್ತ ಆ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಡೆಸುತ್ತಿರುವ ಪ್ರಸ್ತುತ ಕಾರ್ಯಕ್ರಮವನ್ನು ಶ್ಲಾಘಿಸಿದರು. ಪ್ರತಿಭಾ ವಿಕಾಸಕ್ಕೆ ಗುರು ಎಂಬ ಸೂರ್ಯನ ಕಿರಣ ಅತ್ಯಗತ್ಯವೆಂದೂ ವಿದ್ಯಾರ್ಥಿಗಳಲ್ಲಿ ಸೃಷ್ಟಿಶೀಲನ ಸಾಮರ್ಥ್ಯವನ್ನು ಶಿಕ್ಷಕರು ಬೆಳೆಸಬೇಕೆಂದರು.
‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದ ಮತ್ತೊಬ್ಬ ವಿಶೇಷ ಅತಿಥಿಗಳಾದ ಡಾ|| ವಿಜಯಲಕ್ಷ್ಮೀ ದೇಶಮಾನೆಯವರು (ಕಿದ್ವಾಯ್ ಸಂಸ್ಥೆಯ ನಿವೃತ್ತ ನಿದೇರ್ಶಕರು) ’ಸಮಾಜಕ್ಕೆ ಕೆಲಸ ಮಾಡಿ ಎಂಬ ದೀನದಯಾಳರ ಮಾತನ್ನು ಉದ್ಧರಿಸಿ, ಸೇರಿ ಬದುಕುವ ಅಗತ್ಯವನ್ನು ಹೇಳುತ್ತಾ, ಪ್ರತಿಯೊಂದು ಕೆಲಸದಲ್ಲಿ ನಿಷ್ಟತೆ, ನಿರ್ದುಷ್ಟತೆ, ಖಚಿತತೆ ಅವಶ್ಯ’ ಎಂಬ ಮಾರ್ಗದರ್ಶನ ನುಡಿಗಳನ್ನು ಹೇಳಿದರು. ವಿವೇಕಾನಂದರ ಪ್ರಸಿದ್ಧ ವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ಮತ್ತೊಬ್ಬ ಗೌರವಾನ್ವಿತ ಅತಿಥಿಗಳಾಗಿ ಬಂದಿದ್ದ ಡಾ|| ವಿಷ್ಣು ಭರತ್ ಆಲಂಪಳ್ಳಿಯವರು (ಆರ್.ವಿ.ಇನ್ಸೆಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕರು) ವಿದ್ಯೆಯ ಮಹತ್ವ್ತ ಶಾಶ್ವತವಾದುದೆಂದು, ಪ್ರಾಮಾಣಿಕ ಪರಿಶ್ರಮದಿಂದ ಉತ್ತಮ ಫಲ ದೊರಕುವುದರಲ್ಲಿ ಸಂಶಯವಿಲ್ಲವೆಂದು ಹೇಳಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘದ ಹಿರಿಯರಾದ ಶ್ರೀ ಕೃ. ನರಹರಿಯವರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶ್ರೀ ಶಿವಾನಂದ ಸಿಂಧನಕೇರಾ (ಶಿಕ್ಷಕ ಸಂಘದ ಅಧ್ಯಕ್ಷರು) ಹಾಗೂ ಇತರ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿಗಳನ್ನು ಕಾರ್ಯದರ್ಶಿಗಳಾದ ಶ್ರೀಮತಿ ವಾಸುಕಿಯವರು, ನಿರೂಪಣೆಯನ್ನು ಶ್ರೀಮತಿ ಗಾಯಿತ್ರಿ ಕೃಷ್ಣ ಅವರೂ ಮಾಡಿ ಬಾಲಕಿ ಸಿರಿಯಿಂದ ’ವಂದೇ ಮಾತರಂ’ ಗೀತೆಯೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ವರದಿ : ಸಹನಾ