ರಾಷ್ಟ್ರೀಯ ಕಾರ್ಯಕಾರಿಣಿಯ ವರದಿ

ಮಹಿಳೆಯರ ಸ್ಥಿತಿಗತಿಯ ಆಧಾರದ ಮೇಲೆ ಒಂದು ಸಮಾಜದ ಸ್ಥಿತಿಗತಿಯ ಪರಿಚಯವಾಗುತ್ತದೆ ಎಂದು ABRSM ನ ಸಂರಕ್ಷಕರಾದ ಶ್ರೀ ಅನಿರುದ್ದ ದೇಶಪಾಂಡೆಜೀಯವರು ಇದೇ ಅಕ್ಟೋಬರ್ 27 ರಂದು ಅಮರಾವತಿಯಲ್ಲಿ (ಮಹಾರಾಷ್ಟ್ರ) ನಡೆದ ರಾಷ್ಟ್ರೀಯ ಮಹಿಳಾ ಸಂವರ್ಗದ ಸಭೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.

ಮಹಿಳಾ ಸಂವರ್ಗದ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವುದರೊಂದಿಗೆ ಹಾಗೂ ಸರಸ್ವತಿ ವಂದನೆಯೊಂದಿಗೆ ಪ್ರಾರಂಭ ಮಾಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಂಃಖSಒನ ಅಧ್ಯಕ್ಷರಾದ ಡಾ|| ವಿಮಲ್ ಪ್ರಸಾದ್ ಅಗರ್‌ವಾಲ್ ರವರು, ಸಂರಕ್ಷಕರಾದ ಶ್ರೀ ಅನಿರುದ್ಧ ದೇಶಪಾಂಡೆಯವರು ಉಪಸ್ಥಿತರಿದ್ದರು.

ಮೊದಲನೇ ಅವಧಿಯಲ್ಲಿ 7 ರಾಜ್ಯಗಳಿಂದ ಮಹಿಳಾ ಸಂವರ್ಗದಲ್ಲಿ ಉಪಸ್ಥಿತರಿದ್ದ ಮಹಿಳೆಯರಿಂದ ಕಳೆದ ಕಾರ್ಯಕಾರಿಣಿಯಿಂದ ಇದುವರೆಗೂ ನಡೆದ ಕಾರ್ಯಕ್ರಮಗಳ ವರದಿ ಪಡೆದುಕೊಳ್ಳಲಾಯಿತು.

ಎರಡನೇ ಅವಧಿಯಲ್ಲಿ ಮಹಾರಾಷ್ಟ್ರದ ಕಲ್ಪನಾ ಪಾಂಡೆ ಯವರು ಹಾಗೂ ಸುಜಾತಾ ಕುಲಕರ್ಣಿಯವರು ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಎಂಬ ವಿಷಯದ ಮೇಲೆ ಅವರು ನಡೆಸುತ್ತಿರುವ ಸಂಶೋಧನೆಯ ಕುರಿತು ವಿವರಣೆ ನೀಡುತ್ತಾ ಅಲ್ಲಿರುವ ಶಿಕ್ಷಕಿಯರಿಂದ ಆ ಬಗ್ಗೆ ತಯಾರಿಸಿರುವ ಪ್ರಶ್ನಮಾಲಿಕೆಯನ್ನು ಭರಿಸುವ ಕಾರ್ಯವನ್ನು ಸಹ ಮಾಡಿದರು. ಅನುಸೂಚಿಗಳನ್ನು ಭರ್ತಿ ಮಾಡುವಾಗ ಬಂದ ಅನೇಕ ಸಂದೇಹಗಳನ್ನು ಶಿಕ್ಷಕಿಯರು ಸಭೆಯಲ್ಲಿ ಬಗೆಹರಿಸಿಕೊಂಡರು.

ಮಹಿಳಾ ಸಂವರ್ಗದ ಸಮಾರೋಪ ಸಮಾರಂಭದಲ್ಲಿ ABRSM ಅಧ್ಯಕ್ಷರಾದ ಡಾ|| ವಿಮಲ್ ಪ್ರಸಾದ್ ಅಗರ್‌ವಾಲ್ ರವರು ABRMS ನ ಸ್ಥಾಪನೆ, ಕಾರ್ಯವೈಖರಿಯನ್ನು ಪರಿಚಯಿಸುತ್ತಾ ಸಂಘಟನೆಯಲ್ಲಿ ಮಹಿಳಾ ಸಂವರ್ಗ ವಿಸ್ತಾರವಾಗಬೇಕೆಂದು ತಿಳಿಸಿದರು. ಸುಧಾ ಶರ್ಮಾರವರು ಸಭೆಯಲ್ಲಿ ಉಪಸ್ಥಿತರಿರುವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತಾ ಶಾಂತಿ ಮಂತ್ರದೊಂದಿಗೆ ಅಂದಿನ ಮಹಿಳಾ ಸಂವರ್ಗ ಮುಕ್ತಾಯವಾಯಿತು.

ದಿನಾಂಕ 28-10-2017 ರಂದು ಸರಸ್ವತಿ ವಂದನೆ ಹಾಗೂ ದೀಪ ಬೆಳಗುವುದರೊಂದಿಗೆ ABRSM  ರಾಷ್ಟ್ರೀಯ ಕಾರ್ಯಕಾರಿಣಿ ಪ್ರಾರಂಭವಾಯಿತು. ಡಾ|| ವಿಮಲ್ ಪ್ರಸಾದ್ ಅಗರ್‌ವಾಲ್‌ರವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಮಹಾರಾಷ್ಟ್ರ ಸರ್ಕಾರದಲ್ಲಿ ಅಮರಾವತಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ನಾಮಧಾರಿ ಪ್ರವೀಣ್‌ರವರು ಹಾಗೂ ಅಮರಾವತಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಮುರಳೀಧರ ಚಾಂದೇಕರ್‌ರವರು ಅತಿಥಿಗಳಾಗಿ ಆಗಮಿಸಿದ್ದರು. ABRSM ಮಹಾಮಂತ್ರಿಗಳಾದ ಶ್ರೀ ಜೆ.ಪಿ.ಸಿಂಘಾಲ್‌ರವರು ABRSM ನ ಕಾರ್ಯವೈಖರಿಯ ಬಗ್ಗೆ ತಿಳಿಸುತ್ತಾ ಸಂಘಟನೆ 24 ರಾಜ್ಯಗಳಲ್ಲಿ ಸಕ್ರಿಯವಾಗಿ ಭಾರತೀಯತೆಯ ದೃಷ್ಟಿಕೋನವನ್ನಿಟ್ಟುಕೊಂಡು ಶಿಕ್ಷಣ, ಶಿಕ್ಷಕ ಮತ್ತು ಸಮಾಜದ ಹಿತದಲ್ಲಿ ಕೆಲಸ ಮಾಡುತ್ತಿದೆಯೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ನಾಮದರಿ ಪ್ರವೀಣ್ ಕೋಟೆಯವರು ಭಾರತವನ್ನು ಮಹಾಶಕ್ತಿಯನ್ನಾಗಿ ಮಾಡುವಲ್ಲಿ ಭಾರತೀಯ ಶಿಕ್ಷಕರ ಸ್ಥಾನ ಮಹತ್ವಪೂರ್ಣ ವಾದುದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಡಾ|| ವಿಮಲ್ ಪ್ರಸಾದ್ ಅಗರ್‌ವಾಲ್‌ಜೀಯವರು ಸಂಘಟನೆಯಲ್ಲಿ ಇದುವರೆಗೂ ಸಾಮಾನ್ಯ ಕಾರ್ಯಕರ್ತರಾಗಿದ್ದವರು ಇಂದು ಮಹಾವಿದ್ಯಾಲಯದ ಕುಲಗುರುಗಳಾಗಿದ್ದಾರೆ. ಇದರಿಂದಲೇ ಈ ಸಂಘಟನೆಯ ಶಕ್ತಿ ವ್ಯಕ್ತವಾಗುತ್ತದೆ. ಮಹಿಳೆಯರಲ್ಲೂ ನಾಯಕತ್ವದ ವಿಕಾಸವಾಗಬೇಕೆಂಬ ಕಿವಿ ಮಾತನ್ನು ಹೇಳಿದರು.

ನಂತರದ ಅವಧಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಸಾಂಕಲಚಂದ್ ಬಾಗರೀಚರವರು ಒಂದು ಸಂಘಟನೆಯನ್ನು ಅಥವಾ ಚಾರಿಟೆಬಲ್ ಟ್ರಸ್ಟ್‌ನ್ನು ನಡೆಸುವಾಗ ತಿಳಿದು ಕೊಂಡಿರಬೇಕಾದ ಕರ ಕಾನೂನಿನ ಬಗ್ಗೆ ವಿಸ್ತೃತವಾದ ವಿವರಣೆಯನ್ನು ನೀಡಿದರು. ಆಡಿಟ್ (Audit) ಮಾಡಿಸುವಾಗ ಪ್ರಾಕ್ಟೀಸ್‌ನಲ್ಲಿರುವ CA ರವರಿಂದಲೇ ಮಾಡಿಸಬೇಕೆಂದು ತಿಳಿಸಿದರು. ಸಂಘಟನೆಯಲ್ಲಿ Audit ನ್ನು ಹೇಗೆ ನಿರ್ವಹಿಸಬೇಕೆಂಬುದರ ಬಗ್ಗೆಯೂ ತಿಳಿಸುತ್ತಾ, ಅನೇಕರ ಸಂದೇಹಗಳನ್ನು ಸಹ ನಿವಾರಿಸುವ ಪ್ರಯತ್ನವನ್ನು ಮಾಡಿದರು.

ಮಧ್ಯಾಹ್ನದ ಅವಧಿಯಲ್ಲಿ ಪ್ರತಿರಾಜ್ಯದಿಂದ ಒಬ್ಬೊಬ್ಬ ಪ್ರಮುಖರು ತಮ್ಮ ರಾಜ್ಯದಲ್ಲಿ ಆಗಿರುವ ಕಾರ್ಯಗಳ ಬಗ್ಗೆ ಕಾರ್ಯಕಾರಿಣಿ ಸಭೆಗೆ ಮಾಹಿತಿ ನೀಡಿದರು. ಅದರಲ್ಲಿ ಪ್ರಮುಖವೆಂದರೆ ಜಮ್ಮು ಮತ್ತು ಕಾಶ್ಮೀರದ ಹೊಸ ಮತ್ತು ಹಳೆ ಕಾರ್ಯಕರ್ತರ ನಡುವೆ ಸಮನ್ವಯ ಮಾಡುವ ಕಾರ್ಯ, ರಾಜಸ್ಥಾನದಲ್ಲಿ ಇಡೀ ವರ್ಷದ ಕೆಲಸದ ಕ್ಯಾಲೆಂಡರ್ ತಯಾರಿಸಿರುವುದು, ಸಮರಸ್ ಕಾ ದಿವಸ್, ಜಲಸಂರಕ್ಷಣ ಕಾರ್ಯಾಗಾರ ಮುಂತಾದವು. ಶ್ರೀ ಜೆ.ಪಿ ಸಿಂಘಾಲ್‌ಜೀರವರು ABRSM ನ ವರ್ಷದ ವರದಿಯನ್ನು ಮಂಡಿಸಿದರು.

ದಿನಾಂಕ 29-10-2017 ರಂದು ABRSM ನ ಕಾರ್ಯಕಾರಿಣಿಯ ಚುನಾವಣೆ ನಡೆಯಿತು. ಹಿಂದಿನ ಬಾರಿ ABRSM ನ ಮಹಾಮಂತ್ರಿಗಳಾಗಿ ಕೆಲಸ ನಿರ್ವಹಿಸಿದ ಶ್ರೀ ಜೆ.ಪಿ.ಸಿಂಘಾಲ್‌ಜೀ ರವರು ABRSM ನ ಅಧ್ಯಕ್ಷರಾಗಿ ಆಯ್ಕೆಯಾದರೆ, ಕರ್ನಾಟಕದ ಶ್ರೀ ಶಿವಾನಂದ ಸಿಂಧನಕೇರಾರವರು ಮಹಾಮಂತ್ರಿಗಳಾಗಿ ಆಯ್ಕೆಯಾದರು. ಶ್ರೀಮತಿ ಮಮತಾ ಡಿ.ಕೆ. ರವರು ಮಹಿಳಾ ವಿಭಾಗದ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗುವುದರೊಂದಿಗೆ ABRSM ನ ಕಾರ್ಯಕಾರಿಣಿಯಲ್ಲಿ ಕರ್ನಾಟಕ 2 ಸ್ಥಾನವನ್ನು ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀ ವಿಮಲ್ ಪ್ರಸಾದ್ ಅಗರ್‌ವಾಲ್‌ರವರು ಹೊಸದಾಗಿ ಆಯ್ಕೆಯಾದ ಎಲ್ಲಾ ಸದಸ್ಯರಿಗೂ ಉತ್ತಮ ಕಾರ್ಯ ಮಾಡಿಕೊಂಡು ಹೋಗುವಂತೆ ಹೇಳುತ್ತಾ ಎಲ್ಲರೂ ಶುಭಾಶಯ ತಿಳಿಸಿದರು. ಕಾರ್ಯ ನಿರ್ವಹಿಸುವಲ್ಲಿ ಅತಿಯಾಗಿ ನಾವು Technology ಯ ಮೇಲೆ ಅವಲಂಬಿತರಾಗಿರಬಾರದು ಎಂದು ಹೇಳುತ್ತಾ ABRSM ನಲ್ಲಿ ಕಾರ್ಯ ನಿರ್ವಹಿಸಿದ ತಮ್ಮ ಅನುಭವ ವನ್ನು ಎಲ್ಲರ ಜೊತೆ ಹಂಚಿಕೊಂಡರು. ಶಿಕ್ಷಕರು ಸದಾ ವಿದ್ಯಾರ್ಥಿಗಳು ಆದುದರಿಂದ ಸದಾ ಅಧ್ಯಯನಶೀಲರಾಗಿರ ಬೇಕೆಂದು ತಿಳಿಸಿದರು. ವಂದನಾರ್ಪಣೆ ಹಾಗೂ ಶಾಂತಿಮಂತ್ರ ದೊಂದಿಗೆ ಕಾರ್ಯಕಾರಿಣೆ ಸಭೆಗೆ ಇತಿಶ್ರೀ ಹಾಡಲಾಯಿತು.

ವರದಿ : ಶ್ರೀಮತಿ ಮಮತಾ ಡಿ.ಕೆ. ಸಹಕಾರ್ಯದರ್ಶಿ, ಮಹಿಳಾ ವಿಭಾಗ, ABRSM

Highslide for Wordpress Plugin