ದೇಶ ಏಳ್ಗೆಯಾಗಬೇಕಾದರೆ ನರಹರಿಯಂಥವರು ಬೇಕು – ಡಾ||. ಕೆ.ಎಸ್. ನಾರಾಯಣಾಚಾರ್ಯ

ಉತ್ತಮ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದ ಅತ್ಯಂತ ಉತ್ತಮ ಕಾರ್ಯ. ನರಹರಿಯವರು ಅಂತಹ ಉತ್ತಮ ಶಿಕ್ಷಕರು ಹಾಗೂ ಕ್ರಿಯಾಶೀಲರು. ಪ್ರಾಮಾಣಿಕತೆ, ರಾಷ್ಟ್ರಪ್ರೇಮ, ತ್ಯಾಗ ಮನೋಭಾವಗಳನ್ನು ಮೈಗೂಡಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ನರಹರಿಯವರದು. ಶಿಕ್ಷಕರಾಗಿ, ಶಾಸಕರಾಗಿ ಶಿಕ್ಷಣ ಕ್ಷೇತ್ರಕ್ಕೆ , ಶಿಕ್ಷಕ ಸಮುದಾಯಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ದೇಶ ಏಳಿಗೆಯಾಗಬೇಕಾದರೆ ನಮಗೆ ನರಹರಿಯಂಥವರು ಬೇಕು. ಇಂತಹ ವಿಶಿಷ್ಟ ವ್ಯಕ್ತಿತ್ವದ ನರಹರಿಯವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಉಚಿತವಾಗಿದೆ ಎಂದು ಪ್ರಖ್ಯಾತ ವಿದ್ವಾಂಸರೂ, ಲೇಖಕರೂ ಆದ ಡಾ|| ಕೆ. ಎಸ್. ನಾರಾಯಣಾಚಾರ್ಯರು ಪ್ರೊ. ಕೃ. ನರಹರಿಯವರ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಡಿಸೆಂಬರ್ 10, 2017 ರಂದು ಸಂತಸ ವ್ಯಕ್ತಪಡಿಸಿದರು. ಅವರು ಮುಂದುವರೆದು ಶ್ರೀಕೃಷ್ಣ ಜನಿಸಿದ ನಾಡಿನಿಂದಲೇ ರಾಷ್ಟ್ರೋದ್ಧಾರವಾಗಬೇಕು. ಬ್ರಹ್ಮ ಮತ್ತು ಕ್ಷಾತ್ರ ಜೊತೆಗಿದ್ದಾಗ ದೇಶದ ಏಳಿಗೆಯಾಗುತ್ತದೆ. ಅದಕ್ಕೆ ಚಾಣಕ್ಯ, ಚಂದ್ರಗುಪ್ತರು ಉತ್ತಮ ನಿದರ್ಶನ ಎಂದು ನುಡಿದರು. ರಜೆ ತೆಗೆದುಕೊಳ್ಳುವ ದೇವತೆಗಳ ಕಲ್ಪನೆ ನಮ್ಮಲ್ಲಿಲ್ಲ. ಹಾಗೆಯೇ ನಾವೆಲ್ಲರೂ, Holidayಯನ್ನು Holydayಯಾಗಿ ಪರಿಗಣಿಸಿ ಹಗಲಿರುಳು ಶ್ರಮಿಸಬೇಕು ಎಂದು ಕರೆ ನೀಡಿ, ಪ್ರೊ. ಕೃ. ನರಹರಿಯವರು ಹಾಗೆ ದುಡಿದವರು. ನಮಗೆ ನರಹರಿಯಂಥವರ ಆದರ್ಶ ಬೇಕು ಎಂದು ಅಭಿಪ್ರಾಯಪಟ್ಟರು.

K. Narahari abhinandana program (4)

K. Narahari abhinandana program (5)

K. Narahari abhinandana program (1)

K. Narahari abhinandana program (2)

K. Narahari abhinandana program (3)

K. Narahari abhinandana program

ದಿನಾಂಕ 10-12-2017 ರಂದು ಬೆಂಗಳೂರಿನ ಆರ್. ವಿ. ದಂತ ಮಹಾವಿದ್ಯಾಲಯದಲ್ಲಿ ನಡೆದ ಪ್ರೊ. ಕೃ. ನರಹರಿಯವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳೂ. ಶಿಕ್ಷಣ ತಜ್ಞರೂ, ಅಭಿನಂದನಾ ಸಮಿತಿಯ ಅಧ್ಯಕ್ಷರೂ ಆದ ಡಾ|| ಎನ್. ಆರ್. ಶೆಟ್ಟಿಯವರು ಮಾತನಾಡಿ ನರಹರಿಯವರು ಶಿಕ್ಷಕರಾಗಿ, ಶಾಸಕರಾಗಿ ಮಾಡಿದ ಕೆಲಸಗಳನ್ನು ಸ್ಮರಿಸಿದರು. ಪ್ರೊ. ಕೆ.ಎನ್.ರಿಗೆ ಶಿಕ್ಷಣ, ಶಿಕ್ಷಕರ ಬಗ್ಗೆ ವಿಶೇಷ ಕಾಳಜಿ, ಕಳಕಳಿ ಇದೆ. ಹಾಗಾಗಿ ಶಿಕ್ಷಣ ಕೇತ್ರದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದುದಲ್ಲದೆ ಶಿಕ್ಷಕರ ಗುಣಮಟ್ಟ ಹೆಚ್ಚಿಸಲೂ ಪ್ರಯತಿಸಿದ್ದಾರೆ ಎಂದು ಹೇಳಿದ ಎನ್. ಆರ್. ಶೆಟ್ಟಿಯವರು ತಾವು ಅವರ ಚಿಂತನಾಕ್ರಮವನ್ನು ಅನುಸರಿಸಿರುವುದಾಗಿ ಅಭಿಪ್ರಾಯಪಟ್ಟರು. ಅವರು ತಮ್ಮ ಭಾಷಣವನ್ನು ಮುಂದುವರೆಸುತ್ತಾ ನಾವು ಪಶ್ಚಿಮದ ಮಾದರಿ ಯನ್ನು ಅನುಸರಿಸಿ ಶಿಕ್ಷಣ ಪದ್ಧತಿಯನ್ನು ನಾಶಮಾಡಿದ್ದೇವೆ. ಹಿಂದಿನ ಗುರುಕುಲ ಪದ್ಧತಿಯು ನೈತಿಕತೆಯ ತಳಹದಿಯ ಮೇಲೆ ನಿಂತಿದೆ. ಗುರು-ಶಿಷ್ಯ ಪರಂಪರೆ ನಮ್ಮ ಶಕ್ತಿಯಾಗಿತ್ತು. ನಮ್ಮ ವಿದ್ಯಾಕೇಂದ್ರಗಳು – ನಲಂದ, ತಕ್ಷಶಿಲೆ ಮುಂತಾದವು – ವಿದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದವು. ಈಗ ಆ ಮೌಲ್ಯಗಳು ಕಡಿಮೆಯಾಗಿದೆ. ನರಹರಿಯವರು ಶಿಕ್ಷಕರಲ್ಲಿ ಭಾರತೀಯ ಚಿಂತನೆ ತುಂಬಿದರು ಎಂದು ಅಭಿಪ್ರಾಯಪಟ್ಟರು. ಶಾಸಕರಾಗಿ ಕೃ. ನರಹರಿಯವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಮುಖ್ಯಮಂತ್ರಿಗಳಾಗಿದ್ದ ಜೆ. ಹೆಚ್. ಪಟೇಲರು ಪ್ರೊ. ಕೃ. ನರಹರಿಯವರನ್ನು ಅಭಿನಂದಿಸಿದ್ದನ್ನು ಸ್ಮರಿಸಿದರು.

ಕೃ. ನರಹರಿಯವರ ಅಭಿನಂದನೆಯ ಸುಸಂದರ್ಭದಲ್ಲಿ ಚೈತನ್ಯಸಿಂಧು ಅಭಿನಂದನಾ ಗ್ರಂಥವನ್ನು ಮುಖ್ಯ ಅತಿಥಿಗಳು ಲೋಕಾರ್ಪಣೆ ಮಾಡಿದರು. ಗ್ರಂಥದ ಅರ್ಪಣೆಗೂ ಮುನ್ನ ಅಭಿನಂದನಾ ಗ್ರಂಥದ ಸಂಪಾದಕರೂ, ಖ್ಯಾತ ಲೇಖಕರೂ, ಹಿರಿಯ ಪತ್ರಕರ್ತರೂ ಆದ ಡಾ|| ಬಾಬು ಕೃಷ್ಣಮೂರ್ತಿಯವರು ಮಾತನಾಡಿ ಚೈತನ್ಯಸಿಂಧು ಕೃತಿಯು ನಾಲ್ಕು ವಿಭಾಗಗಳನ್ನು ಒಳಗೊಂಡಿದ್ದು ಮೊದಲ ಭಾಗದಲ್ಲಿ ಕೃ. ನರಹರಿಯವರ ವೈಯುಕ್ತಿಕ ವಿಚಾರಗಳನ್ನೊಳಗೊಂಡ ಲೇಖನಗಳಿದ್ದರೆ, ಎರಡನೆಯ ಭಾಗ ಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳಾಗಿದೆ. ಇತಿಹಾಸಕ್ಕೆ ಸಂಬಂಧಿಸಿದ ವಿಚಾರಧಾರೆಗಳ ಲೇಖನಗಳು ಮೂರನೆಯ ಭಾಗದಲ್ಲಿದ್ದರೆ, ಕಡೆಯ ಭಾಗವು ನರಹರಿಯವರ ಲೇಖನಗಳನ್ನು ಒಳಗೊಂಡಿರುವುದಾಗಿ ಗ್ರಂಥದ ಸ್ವರೂಪವನ್ನು ತಿಳಿಸಿ, ತಾವು ನರಹರಿಯವರ ಬಗೆಗಿನ ಗೌರವದಿಂದ ಸಂತೋಷವಾಗಿ ಗ್ರಂಥದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದುದಾಗಿ ಹೇಳಿದರು.

ಅಭಿನಂದನೆಗೂ ಮುನ್ನ ಪ್ರೊ. ಕೃ.ನರಹರಿಯವರ ಹಿರಿಯ ಸಹೋದರಿ ಕೃ. ರುಕ್ಮಿಣಿಯಕ್ಕ, ಸಂಸದರಾದ ಬಸವರಾಜ ಸೇಡಂ, ಆರ.ಎಸ್.ಎಸ್.ನ ವಿ.ನಾಗರಾಜ್, ಪಿ.ಇ.ಎಸ್.ವಿಶ್ವವಿದ್ಯಾಲಯದ ಕುಲಪತಿಗಳೂ, ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಪ್ರೊ. ಎಂ. ಆರ್. ದೊರೆಸ್ವಾಮಿ, ಹಿರಿಯರಾದ ಹರಿಬಾಉ ವಝೆ, ನರಹರಿಯವರ ತಮ್ಮನ ಮಗ ಕೃಷ್ಣಪ್ರಸಾದ್ ಅಭಿನಂದನಾ ನುಡಿಗಳನ್ನಾಡಿದರು. ಈ ಮಾತುಗಳಲ್ಲಿ ನರಹರಿಯವರ ಚಿಂತನೆಗಳು, ಅವರಿಂದ ಪ್ರೇರಣೆ, ಅವರ ವಿಶಿಷ್ಟ ವ್ಯಕ್ತಿತ್ವಗಳು ವ್ಯಕ್ತವಾದವು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ನರಹರಿಯವರು ಬ್ರಹ್ಮಾರ್ಪಣಂ ಎನ್ನುವಂತೆ ಎಲ್ಲವನ್ನೂ ಆರ್. ಎಸ್. ಎಸ್.ಗೆ ಸಲ್ಲಿಸಿದರು. ಅವರು ಮಾತನಾಡುತ್ತ ಈ ಸಭೆಯಲ್ಲಿ ಸಾಧಕರು ಅನೇಕರಿದ್ದೀರಿ. ನಿಮ್ಮ ಮುಂದೆ ನಾನು ಚಿಕ್ಕವನು. ನನ್ನಲ್ಲೂ ನ್ಯೂನತೆಗಳು, ಇತಿಮಿತಿಗಳು ಇವೆ ಎಂದು ವಿನಮ್ರಭಾವದಿಂದ ನುಡಿದರು. ತಮ್ಮಲ್ಲಿ ಆದರ್ಶಗಳನ್ನು ಬಿತ್ತಿ ರೂಪಿಸಿದ ತಂದೆ, ತಾಯಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಮಾರ್ಗ ಬದಲಿಸದೆ ಹೆಜ್ಜೆ ಹಾಕಿದಲ್ಲಿ ಗುರಿ ಮುಟ್ಟುವುದು ನಿಶ್ಚಯ. ದೇವರು ಎಲ್ಲರಿಗೂ ಮಾನಸಿಕತೆ, ಇಚ್ಛಾಶಕ್ತಿ, ಬುದ್ಧಿಶಕ್ತಿ ಹಾಗೂ ಕ್ರಿಯಾಶಕ್ತಿಗಳನ್ನು ನೀಡಲೆಂದು ಹಾರೈಸಿ ಮಾತುಗಳನ್ನು ಮುಕ್ತಾಯ ಮಾಡಿದರು.

ನಿವೃತ್ತ ಅಧ್ಯಾಪಕರಾದ ಜಯತೀರ್ಥರ ಪ್ರಾರ್ಥನೆಯ ನಂತರ ಸ್ವಾಗತ ಮತ್ತು ಪರಿಚಯ ತುಮಕೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಎಸ್.ಸಿ. ಶರ್ಮರಿಂದ. ಪ್ರಾಸ್ತಾವಿಕದಲ್ಲಿ ಹೆಚ್. ನಾಗಭೂಷಣರಾವ್ ನರಹರಿಯವರ ಸನ್ಮಾನ ಸಮಾರಂಭ ಆಯೋಜನೆಯ ಉದ್ದೇಶ ನರಹರಿಯವರಿಗೆ ಅಭಿನಂದನೆಯ ಮೂಲಕ ಅವರ ಸೇವೆ, ಹಾಗೂ ಶಿಕ್ಷಣ ಕೇತ್ರಕ್ಕೆ ಸಲ್ಲಿಸುತ್ತಿರುವ ಗೌರವ ಎಂದು ಅಭಿಪ್ರಾಯಪಟ್ಟರು. ಪೇಜಾವರ ಶ್ರೀಗಳಾದ ಶ್ರೀಶ್ರೀ ವಿಶ್ವೇಶತೀರ್ಥ ಸ್ವಾಮಿಗಳು, ಸುತ್ತೂರು ಶ್ರೀಗಳು, ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮುಂತಾದ ಗಣ್ಯರ ಸಂದೇಶಗಳನ್ನು ಹಿರಿಯ ಪತ್ರಕರ್ತರಾದ ದು.ಗು. ಲಕ್ಷ್ಮಣ್ ವಾಚಿಸಿದರು. ವೀಣಾಶರ್ಮರ ಸುಂದರ ನಿರೂಪಣೆಯ ಕಾರ್ಯಕ್ರಮ ಜ್ಯೋತಿಯವರ ವಂದೇಮಾತರಂ ಗೀತೆಯೊಂದಿಗೆ ಮಂಗಳಗೊಂಡಿತು.

ಶಿಕ್ಷಣದ ಬಗ್ಗೆ, ಶಿಕ್ಷಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪ್ರೊ. ನರಹರಿಯವರ ಅಭಿನಂದನಾ ಸಮಾರಂಭದ ಅಂಗವಾಗಿ ಸಮಾರಂಭದ ಮುನ್ನ ಶಿಕ್ಷಕರಿಗಾಗಿ ಶಿಕ್ಷಕ ಗುರುವಾಗುವುದು ಹೇಗೆ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಪ್ರಮುಖ ಉಪನ್ಯಾಸಕರಾಗಿ ಸು. ರಾಮಣ್ಣ, ಪ್ರಾಂತೀಯ ಕುಟುಂಬ ಪ್ರಬೋಧನ ಪ್ರಮುಖರು ಪಾಲ್ಗೊಂಡಿದ್ದರು. ರಾಮಣ್ಣನವರು ಉಪನ್ಯಾಸದ ಆರಂಭದಲ್ಲಿ ನರಹರಿಯವರು ತಮಗೆ ಪ್ರೇರಣೆ ನೀಡಿದ ಸಂಗತಿಗಳನ್ನು ಪ್ರಸ್ತಾಪಿಸಿದರು. ನಂತರ ವಿಷಯವನ್ನು ಕುರಿತು ಸಂಸ್ಕಾರ ಕ್ಷೇತ್ರ ಸಾರ್ವಕಾಲಿಕ ಮೌಲ್ಯ ಹೊಂದಿದೆ. ಜೀವನೋಪಾಯಕ್ಕಾಗಿ ಕರ್ತವ್ಯ ನಿರ್ವಹಿಸುವವರು (Profession) ಶಿಕ್ಷಕ ; ಧ್ಯೇಯ, ನಿಷ್ಠೆ, ಕರ್ತವ್ಯ ನಿರ್ವಹಿಸುವವರು ಗುರು. ವಿಚಾರಗಳನ್ನು Inform ಮಾಡುವವನು ಶಿಕ್ಷಕ ; ವಿಚಾರಗಳನ್ನು Transform ಮಾಡುವವನು ಗುರು. ಭಾರತಕ್ಕೆ, ಭಾರತೀಯರಿಗೆ ಒಂದು ವಿಶಿಷ್ಟ ವ್ಯಕ್ತಿತ್ವವಿದೆ. ಪ್ರಾಣ- ಮಾನವ- ಮಹಾಮಾನವ- ದೇವಮಾನವ – ದೇವ ಈ ಹೊಣೆಗಳನ್ನೇ ಧರ್ಮ ಎಂದುಕೊಂಡವರು ಗುರುಗಳು. ಶಿಕ್ಷಕನಿಗೆ ನಿವೃತ್ತಿ ; ಆದರೆ ಗುರುವಿಗೆ ನಿವೃತ್ತಿ ಇಲ್ಲ. ಅಂತೆಯೇ ಮೌಲ್ಯ ಕಲಿಕೆಗೆ ಮುಕ್ತಾಯವಿಲ್ಲ. ಹಕ್ಕುಗಳಿಗಾಗಿ ಶಿಕ್ಷಕನಿದ್ದರೆ ; ಕರ್ತವ್ಯ ಮತ್ತು ಹಕ್ಕುಗಳನ್ನು ನಿಭಾಯಿಸುವವನು ಗುರು. ಮಾನವ ಮೂಲಭೂತವಾಗಿ ದೈವಾಂಶಸಂಭೂತ ಎಂಬ ಅಂಶವನ್ನು ವಿದ್ಯಾರ್ಥಿಯಲ್ಲಿ ಅರಳಿಸಬೇಕು. ಹೀಗೆ ಶಿಕ್ಷಕ – ಗುರುವಿನ ನಡುವಿನ ಅಂತರವನ್ನು ಸು. ರಾಮಣ್ಣನವರು ಎಳೆಎಳೆಯಾಗಿ ಶಿಕ್ಷಕರ ಮುಂದಿಟ್ಟರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಾರ್ಗದರ್ಶಕರಾದ ಪ್ರೊ. ಬಾಲಕೃಷ್ಣ ಭಟ್, ಕ.ರಾ.ಮಾ.ಶಿ ಸಂಘದ ಅಧ್ಯಕ್ಷರಾದ ಶಿವಾನಂದ ಸಿಂಧನಕೇರ, ಎಬಿಆರ್‌ಎಸ್‌ಎಂನ ಸಂಘಟನಾ ಕಾರ್ಯದರ್ಶಿಗಳಾದ ಮಹೇಂದ್ರ ಕಪೂರ್, ಕರಾಮಾಶಿಸಂಘದ ಪ್ರಧಾನ ಕಾರ್ಯದರ್ಶಿಗಳಾದ ಚಿದಾನಂದ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರದಿ : ರಾಜಶೇಖರ್, ನಿವೃತ್ತ ಪ್ರಾಂಶುಪಾಲರು, ಕರಾಮಾಶಿಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳು

Highslide for Wordpress Plugin