ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ, 45 ಪ್ರೌಢಶಾಲೆಗಳ 350 ಮಕ್ಕಳು ಭಾಗಿ
ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ ಅಗತ್ಯ : ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯ ಶ್ಲಾಘನೆ
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆಗಾಗಿ ಅನುಭವಿಗಳ ಉಪನ್ಯಾಸ ಮಾಲೆ, ತರಬೇತಿ ಕಾರ್ಯಾಗಾರಗಳು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸುಮಾರು ವರ್ಷಗಳಿಂದ ಜಿಲ್ಲಾ ಹಾಗೂ ಹಂತದಲ್ಲಿಯೂ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾಪರಿಷತ್ ಹಾಗೂ ಖಾಸಗಿ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ತಾಲೂಕಿನ ಪ್ರೌಢಶಾಲೆಗಳ ತಲಾ 5 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮತ್ತು ಹೆಚ್ಚು ಅಂಕ ಗಳಿಕೆ ಸುಲಭವಾಗಲು ಹಮ್ಮಿಕೊಂಡಿರುವ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಂಡ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಕಲು(ಕಾಪಿ)ಮುಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಈಗಾಗಲೇ ಶಾಲಾ ಅವಧಿ ಮುಗಿದ ನಂತರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚುವರಿ ಅಭ್ಯಾಸ ತರಗತಿ ಜೊತೆಗೆ ಪಾಸಿಂಗ್ ಪ್ಯಾಕೆಜ್ಗಳ ವಿತರಣೆ, ಆಕಾಶಾಣಿ ಪಾಠ, ಗುಂಪು ಚರ್ಚೆ, ಅಣುಕು ಪರೀಕ್ಷೆಗಳು, ಸೇರಿ ವಿನೂತನ ಮಾದರಿಯಲ್ಲಿ ತರಗತಿಗಳನ್ನು ನಡೆಸುತ್ತಾ ಹತ್ತಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಕ್ರಿಯಾಶೀಲರಾಗಿ ಪಾಠ ಬೋಧನೆ ಮಾಡಬೇಕು, ವಿದ್ಯಾರ್ಥಿಗಳು ಸಹ ಆಸಕ್ತಿಯಿಂದ ಕಲಿಕೆಯಲ್ಲಿ ಮುಂದುವರಿದರೆ ಮಾತ್ರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮತ್ತು ಹೆಚ್ಚು ಅಂಕ ಗಳಿಕೆ ಸುಲಭ ಸಾಧ್ಯ ಎಂದು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಮಾತಾನಾಡಿ ಕಳೆದ ವರ್ಷ ಜಿಲ್ಲೆಯಲ್ಲಿ 2ನೇ ಸ್ಥಾನ ಪಡೆದಿತ್ತು. ಈ ಬಾರಿ ಮೊದಲ ಸ್ಥಾನ ನಮ್ಮ ಗುರಿಯಾಗಬೇಕು. ಆ ಜವಾಬ್ದಾರಿ ನಮ್ಮೆಲ್ಲರದಾಗಿದ್ದು, ಶಿಕ್ಷಕರು ಶಾಲೆಯಲ್ಲಿ ಮಗುವಿನ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕೆಂದರು.
ಪಠ್ಯ ಪುಸ್ತಕ ಸಮಿತಿಯ ಸದಸ್ಯರಾದ ನಾರಾಯಣ ಬಾಬಾನಗರ (ವಿಜ್ಞಾನ), ಸಿ. ಬಿ. ಅರುಣಕುಮಾರ(ಗಣಿತ), ರಾಮನಗರದ ಎಸ್. ಶಂಕರ, ಡಿಎಸ್ಇಆರ್ಟಿಯ ನಾಗಣ್ಣ ಶಹಾಬಾದ (ಸಮಾಜ ವಿಜ್ಞಾನ) ಕುರಿತು ತರಬೇತಿ ನೀಡಿದರು. ತಾಲೂಕಿನ 45 ಪ್ರೌಢ ಶಾಲೆಗಳ 350 ಕ್ಕೂ ಹೆಚ್ಚು ಮಕ್ಕಳು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.
ಮಾಧ್ಯಮಿಕ ಶಿಕ್ಷಕ ಸಂಘದ ತಾಲೂಕ ಉಪಾಧ್ಯಕ್ಷ ಮುಖಗರು ಎಲ್.ಎಸ್. ಬೀದಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾಪರಿಷತ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಪಾದ ಕೋಗನೂರ, ಮಾದ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಯಳಸಂಗಿ, ಪ್ರತಿಭಾ ಪರಿಷತ್ನ ತಾಲೂಕಾ ಅಧ್ಯಕ್ಷ ಪರಮೇಶ್ವರ ವಾದ್ಗರ್ಗಿ ಆಗಮಿಸಿದ್ದರು.
ಕಾರ್ಯಕ್ರಮವನ್ನು ಪ್ರತಿಭಾ ಪರಿಷತ್ನ ಉಪಾಧ್ಯಕ್ಷ ಅಣ್ಣಾರಾಯ ಬಿರೆದಾರ ನಿರೂಪಿಸಿದರೆ, ಪರಮೇಶ್ವರ ವಾದ್ಗರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯೋಗಿರಾಜ ಮಾಡ್ಯಳೆ ವಂದಿಸಿದರು. ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ : ಮಹೇಶ ಬಸರಕೋಡ, ಕಲಬುರಗಿ ವಿಭಾಗ ಪ್ರಮುಖ