ವೃತ್ತಿ ನೈಪುಣ್ಯತೆ ಜೊತೆ ಸೇವಾಮನೋಭಾವ ಬೆಳೆಸಿಕೊಳ್ಳಿ
ಕರ್ತವ್ಯಭೋಧ ದಿವಸ ಕಾರ್ಯಕ್ರಮದಲ್ಲಿ ಚಿದಾನಂದ ಅಭಿಮತ
ನಾವು ಪಡೆಯುವ ಶಿಕ್ಷಣ ನಮ್ಮಲ್ಲಿ ಶ್ರದ್ಧೆ, ಆತ್ಮವಿಶ್ವಾಸ, ಉತ್ಸಾಹ ಹಾಗೂ ಘನತೆ ಹೆಚ್ಚಿಸಲು ಕಾರಣವಾಗಬೇಕು. ಶಿಕ್ಷಕರಾದವರು ವೃತ್ತಿ ನೈಪುಣ್ಯತೆ ಜೊತೆ ಸೇವಾ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಪ್ರಧಾನಕಾರ್ಯದರ್ಶಿ ಚಿದಾನಂದ ಪಾಟೀಲ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿವಿವೇಕಾನಂದರು ಹಾಗೂ ನೇತಾಜಿ ಸುಭಾಷಚಂದ್ರ ಬೋಸ್ ಜಯಂತಿ ಅಂಗವಾಗಿ ಜನವರಿ 14, 2018 ರಂದು ಹಮ್ಮಿಕೊಂಡಿದ್ದ ಸಂಕಲ್ಪ ದಿನ (ಕರ್ತವ್ಯ ಬೋಧ ದಿವಸ) ಹಾಗೂ ಡಾಕ್ಟರೇಟ್ ಪದವಿ ಪಡೆದ ಜೇವರಗಿ ತಾಲೂಕಿನ ಅಂದೋಲಾ ಪ್ರೌಢಶಾಲೆಯ ಶಿಕ್ಷಕ ಸಿದ್ದಪ್ಪ ಕಕ್ಕಳಮೇಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ವೀರ ಸನ್ಯಾಸಿಯಾದ ವಿವೇಕಾನಂದರು ವಿಶ್ವದ ಸರ್ವಶ್ರೇಷ್ಠ ತತ್ವಜ್ಞಾನಿಯಗಿದ್ದು, ಹಾಗೂ ಸುಭಾಷಚಂದ್ರ ಬೋಸ್ ಇವರುಗಳ ಸಂದೇಶ ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಶಿಕ್ಷಕರಾದವರು ಸದಾ ಅಧ್ಯಯನಶೀಲ ರಾಗಿರಬೇಕು. ಡಾ. ಕಕ್ಕಳಮೇಲಿಯವರಂತೆ ಎಲ್ಲ ಶಿಕ್ಷಕರು ವೃತ್ತಿಯಲ್ಲಿ ಹೆಚ್ಚಿನ ನೈಪುಣ್ಯತೆ ಪಡೆಯಲು ಶಿಕ್ಷಕ ವೃತ್ತಿಯ ಜೊತೆಗೆ ಉನ್ನತ ವ್ಯಾಸಂಗ ಮಾಡುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಯಳಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಭಾರತದಲ್ಲಿಯೇ ಅತ್ಯಂತ ದೊಡ್ಡ ಶಿಕ್ಷಕ ಸಂಘಟನೆಯಾದ ABRSM (ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾ ಸಂಘ(ರಿ)ರ ಜೊತೆಯಲ್ಲಿ ಕಾರ್ಯಮಾಡುತ್ತಿದೆ. ದೇಶದ ಎಲ್ಲಾ ಭಾಗದಲ್ಲಿ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜಯಂತಿಯಿಂದ ಜನವರಿ 23 ರ ಸುಭಾಷಚಂದ್ರಭೋಸ್ ಜಯಂತಿಯವರೆಗೆ ಕರ್ತವ್ಯ ಬೋಧ ದಿವಸ (ಸಂಕಲ್ಪ ದಿನಾಚರಣೆ) ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಶಿಕ್ಷಕರಲ್ಲಿ ತಮ್ಮ ಕರ್ತವ್ಯದ ಪಾವಿತ್ರ್ಯತೆಯ ಮತ್ತು ದೇಶ ಕಟ್ಟುವ ಕಾರ್ಯದಲ್ಲಿ ಶಿಕ್ಷಕರು ಹೇಗೆ ತೊಡಗಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತದೆ. ದೇಶದಲ್ಲಿಯೆ ಮಹತ್ತರ ಬೆಳವಣಿಗೆಗೆ ಕಾರಣಿಕರ್ತರಾದವರು ಶಿಕ್ಷಕರು. ಪ್ರೇರಣೆ, ಉತ್ಸಾಹ ತುಂಬುವಂತಹ ಶಿಕ್ಷಕ ಸಮುದಾಯ ಬೆಳೆಯಬೇಕೆನ್ನುವ ಮಹತ್ತರ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಚರಿಸುತ್ತ ಬಂದಿದೆ. ಅದಕ್ಕಾಗಿ ಶಿಕ್ಷಕರು ಈ ಅವಧಿಯಲ್ಲಿ ಪ್ರತಿಜ್ಞೆ ಮಾಡುವ ಮೂಲಕ ಉತ್ತಮ ಶಿಕ್ಷಕರಾಗುವುದಕ್ಕೆ ಸಂಕಲ್ಪ ಮಾಡುತ್ತಾರೆ. ರಾಷ್ಟ್ರೀಯ ಪ್ರ.ಕಾ. ಶಿವಾನಂದ ಸಿಂಧನಕೇರಾ ಶಿಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಾಗಾಂವನ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಚಂದ್ರಕಾಂತ ಬಿರೆದಾರ ಮಾತನಾಡಿ ಮಾಧ್ಯಮಿಕ ಶಿಕ್ಷಕ ಸಂಘವು ಶಿಕ್ಷಕರ ಹಾಗೂ ಶಿಕ್ಷಣ ಕೇತ್ರದ ಬೇಡಿಕೆಗಳಿಗಷ್ಟೆ ಹೋರಾಟ ಮಾಡದೆ ಎಸ್. ಎಸ್. ಎಲ್.ಸಿ. ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರಿಗಾಗಿ ಹಲವಾರು ವರ್ಷಗಳಿಂದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾಧನೆ ಮಾಡಿದ ಶಿಕ್ಷಕರಿಗೆ ಸನ್ಮಾನಿಸಿ ಪ್ರೋತ್ಸಾಹಿಸುವುದು, ಅದರಲ್ಲೂ ಶಿಕ್ಷಕರಿಗೆ ವೃತ್ತಿ ಪಾವಿತ್ರ್ಯತೆಯ ಜಾಗೃತಿ ಮೂಡಿಸುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಿವಲಿಂಗಪ್ಪ ಮೂಲಗೆ, ನೌಕರರ ಗೃಹನಿರ್ಮಾಣ ಮಂಡಳಿ ನೀರ್ದೆಶಕ ವಿಲಾಸರಾವ, ಬಸವರಾಜ ಗುಂಜಾಳ, ಚಂದ್ರಶೇಖರ ಗೋಸಾಲ, ಕೆ. ಬಸವರಾಜ, ಮಡಿವಾಳಪ್ಪ ಬಿರಾದಾರ, ಮಹೇಶ ದೇವಣಿ, ಪ್ರಭುಲಿಂಗ ಮುಲಗೆ, ಮುಂತಾದವರು ಹಾಜರಿದ್ದರು. ಶಿಕ್ಷಕ ಶಿವಶರಣ ರುದನೂರ ಸ್ವಾಗತಿಸಿದರು. ವಿಭಾಗ ಪ್ರಮುಖ ಮಹೇಶ ಬಸರಕೋಡ ವಂದಿಸಿದರು. ಸಂಜೀವ ಕುಮಾರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.