ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾಘಟಕ ಒಟ್ಟಾಗಿ ಏರ್ಪಡಿಸಿದ್ದ ಯುಗಾದಿ ನೂತನ ವರ್ಷದ ಶಿಕ್ಷಕ ಸಂಘದ ಪಂಚಾಂಗ (ಕ್ಯಾಲೆಂಡರ್) ವನ್ನು ದಿನಾಂಕ 4-4-2018 ರಂದು ಸಂಘದ ಕಾರ್ಯಾಲಯದಲ್ಲಿ ಶ್ರೀ ಕೃ. ನರಹರಿಯವರು ಮತ್ತು ವೇದಿಕೆಯ ಮೇಲೆ ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಪೋಷಕರಾದ ಹಾಗೂ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಹೆಚ್ ನಾಗಭೂಷಣ ರಾವ್‌ರವರು ಯುಗಾದಿ, ಭಾರತೀಯ ಕಾಲಮಾನದ ಪ್ರಕಾರ ನೂತನ ವರ್ಷದ ಮಹತ್ವ ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸಿದರು.
ಮತ್ತೋರ್ವ ಅತಿಥಿಗಳಾದ ಶ್ರೀ ಬಸವರಾಜ್, ತುಮಕೂರು ವಿಭಾಗದ ಶಿಕ್ಷಕ ಸಂಘದ ಪ್ರಮುಖರು ಮಾತನಾಡುತ್ತಾ ಸಂಘದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಗೂ ಸಮಾಜ ಸೇವೆಗಳಲ್ಲಿ ಶಿಕ್ಷಕರ ಪಾತ್ರದ ಕುರಿತು ಮಾತನಾಡಿದರು. ರಾಜ್ಯ ಖಜಾಂಚಿಗಳಾಗದ ಜೆ.ಎಂ ಜೋಷಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃ. ನರಹರಿಯವರು ಶಿಕ್ಷಕ ಸಂಘ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ನೈಜ ರಾಷ್ಟ್ರಪ್ರೇಮ ಬೆಳೆಸುವಂತೆ ಕರೆ ನೀಡಿದರು.
ಸಂಘದ ಉತ್ತರ ಜಿಲ್ಲಾ ಅಧ್ಯಕ್ಷರಾದ ಎಸ್ ಜಿ ತಾಂಬೆ ಮುಖ್ಯ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕ್ಯಾಲೆಂಡರ್‌ಗೆ ಜಾಹಿರಾತು ನೀಡಿದ ದಾನಿಗಳಿಗೆ ದಕ್ಷಿಣ ಜಿಲ್ಲೆಯ ಅಧ್ಯಕ್ಷರಾದ ಬಿ.ಎ ಸುರೇಂದ್ರರವರು ಕೃತಜ್ಞತೆ ಸಲ್ಲಿಸಿದರು. ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ವಾಸುಕಿರವರು ನಿರೂಪಣೆ ಮಾಡಿದರು. ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿಗಳಾದ ಗಂಗಪ್ಪನವರು ಸಭಿಕರಿಗೆ ವಂದಿಸಿದರು. ೫೦ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಂಘದ ಕಾರ್ಯಕರ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ವರದಿ : ಶ್ರೀ ಎಸ್.ಜಿ ತಾಂಬೆ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರು