ರಾಜ್ಯ ಕಾರ್ಯಕಾರಿಣಿ ಸಭೆ 2018

ದಿನಾಂಕ 22-7-2018  ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಯಾದವಸ್ಮೃತಿ ಬೆಂಗಳೂರಿನಲ್ಲಿ ನಡೆಯಿತು. ಸಭೆಯು ಸರಸ್ವತಿದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗುವುದರೊಂದಿಗೆ ಆರಂಭವಾಯಿತು. ಸಭೆಯಲ್ಲಿ ಸಂಘದ ಹಿರಿಯರು, ಎ.ಬಿ.ಆರ್.ಎಸ್.ಎಂ ನ ಸಂರಕ್ಷಕರಾದ ಶ್ರೀ ಕೃ ನರಹರಿ ಜೀ, ಎ.ಬಿ.ಆರ್.ಎಸ್.ಎಂ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶ್ರೀ ಶಿವಾನಂದ ಸಿಂಧನಕೇರಾ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಅರುಣ್ ಶಹಾಪುರ ಎಂ.ಎಲ್.ಸಿ, ಶ್ರೀ ಅ. ದೇವೇಗೌಡ ಶಾಸಕರು, ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ, ಪ್ರಧಾನ ಕಾರ್ಯದರ್ಶಿ ಶ್ರೀ ಚಿದಾನಂದ ಪಾಟೀಲ್, ಸಹ ಪ್ರಧಾನ ಕಾರ್ಯದರ್ಶಿ ಶ್ರೀ ಗಂಗಾಧರಾಚಾರಿ ಹಾಗೂ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಸಹ ಪ್ರಧಾನ ಕಾರ್ಯದರ್ಶಿ ಶ್ರೀ ಗಂಗಾಧರಾಚಾರಿ ಸ್ವಾಗತಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ರಾಜ್ಯ ಪದಾಧಿಕಾರಿಗಳು ಸಭೆಗೆ ತಮ್ಮ ಪರಿಚಯ ಮಾಡಿಕೊಂಡ ನಂತರ ಕಳೆದ ಕಾರ್ಯಕಾರಿಣಿಯಿಂದ ಇಲ್ಲಿಯವರೆಗಿನ ಸಂಘದ ಕಾರ್ಯಕ್ರಮಗಳ ಕುರಿತು ಜಿಲ್ಲಾವಾರು, ಸಂಕ್ಷಿಪ್ತ ವರದಿಯನ್ನು ಆಯಾ ಜಿಲ್ಲೆಗಳ ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ಅ. ದೇವೆಗೌಡ ಇವರು ತಮ್ಮನ್ನು ಶಾಸಕರಾಗಿ ಆಯ್ಕೆ ಮಾಡುವಲ್ಲಿ ಶ್ರಮಿಸಿದ ಎಲ್ಲ ಕಾರ್ಯಕರ್ತರು ಮತ್ತು ಆಶೀರ್ವದಿಸಿದ ಹಿರಿಯರಿಗೆ ತಮ್ಮ ವಂದನೆಗಳನ್ನು ತಿಳಿಸಿ, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾವು ಸದಾ ಕಾರ್ಯತತ್ಪರರಾಗಿರುವೆ ಮತ್ತು ಶಿಕ್ಷಕರ ಬೆಂಬಲಕ್ಕೆ ಸದಾ ಸಿದ್ಧವಿರುವೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘದ 2017-18 ನೇ ಸಾಲಿನ ಖರ್ಚು, ವೆಚ್ಚಗಳ ಲೆಕ್ಕಪತ್ರವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಖಜಾಂಚಿಗಳಾದ ಶ್ರೀ ಜೆ.ಎಂ ಜೋಷಿಯವರು ವಿಸ್ತೃತವಾಗಿ ತಿಳಿಸಿದರು. ಎಲ್ಲ ಪದಾಧಿಕಾರಿಗಳು ಓಂ ಹೇಳುವುದರ ಮೂಲಕ ಒಪ್ಪಿಗೆಯನ್ನು ಸೂಚಿಸಲಾಯಿತು.

ಪ್ರೊ|| ಕೃ. ನರಹರಿಯವರು ಸಭೆಯಲ್ಲಿ ಸಂಘದ ಬಲವಧನೆಗೆ ಶಿಕ್ಷಕರನ್ನು ಇಂದಿನ ಬದಲಾವಣೆಗಳಿಗೆ ಸಜ್ಜುಗೊಳಿಸುವಂತಹ ಕಾರ್ಯಕ್ರಮಗಳಾದ Orientation program, content enrichment program, universal values, professional ethics, stress and time management, personality development  ಇನ್ನಿತರ ಹಲವಾರು ಕಾರ್ಯಯೋಜನೆಗಳೊಂದಿಗೆ ಸಂಘಕ್ಕೆ ಹೆಚ್ಚಿನ ಶಿಕ್ಷಕ ಸದಸ್ಯರನ್ನು ಜೋಡಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ಸೂಚಿಸಿದರು.

ಅಕ್ಟೋಬರ್ 5, 6 ಮತ್ತು 7 2018 ರಂದು ಇಂದೋರ್, ಮಧ್ಯಪ್ರದೇಶದಲ್ಲಿ ನಡೆಯಲಿರುವ ಎ.ಬಿ.ಆರ್.ಎಸ್.ಎಂ ನ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಳ್ಳುವುದರ ಕುರಿತು ಚಿರ್ಚಿಸಲಾಯಿತು. ಪ್ರತಿ ಜಿಲ್ಲೆಯಿಂದ 7 ಜನ ಪದಾಧಿಕಾರಿಗಳು ಕಡ್ಡಾಯವಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ, ಅದಕ್ಕೆ ಬೇಕಾದ ವ್ಯವಸ್ಥೆಗಳ ಕುರಿತು ಜಿಲ್ಲಾವಾರು ಮಾಹಿತಿ ಪಡೆಯಲಾಯಿತು.

ಮಧ್ಯಾಹ್ನದ ಅವಧಿಯಲ್ಲಿ ವಿಭಾಗವಾರು ಪದಾಧಿಕಾರಿಗಳ ಬೈಠಕ್ ನಡೆಯಿತು. ಮುಂದಿನ ದಿನಗಳಲ್ಲಿ ನಡೆಸಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು. ಆಯಾ ಜಿಲ್ಲೆಗಳಲ್ಲಿ ಆಗಸ್ಟ್ 1 ರಿಂದ 10 ನೇ ತಾರೀಖಿನೊಳಗೆ ಗುರುವಂದನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.

ನಂತರದ ಅವಧಿಯಲ್ಲಿ ಶ್ರೀ ಅರುಣ್ ಶಹಾಪೂರರೊಂದಿಗೆ ಶಿಕ್ಷಣ ಮತ್ತು ಶಿಕ್ಷಕರ ಸದ್ಯದ ಅತೀ ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು. ಚರ್ಚೆಗೆ ಒಳಗೊಂಡ ಪ್ರಮುಖ ವಿಷಯಗಳು

•  ಶಿಕ್ಷಕ ವರ್ಗಾವಣೆ ವಿಳಂಬವಾಗಲು ಕಾರಣ, ಸದ್ಯದ ಸ್ಥಿತಿ.
•  6ನೇ ವೇತನ ಆಯೋಗದ ಶಿಫಾರಸ್ಸಿನಲ್ಲಿ ಉಂಟಾದ ಗೊಂದಲಗಳು
•  ಎನ್.ಪಿ.ಎಸ್ ರದ್ದತಿ, ಒ ಪಿ ಎಸ್ ಜಾರಿ
•  2008 ರ ನಂತರ ನೇಮಕಗೊಂಡ ಹಾಗೂ ಬಡ್ತಿ ಹೊಂದಿದ ಶಿಕ್ಷಕರ 400 ರೂ. ಗಳ ವಿಶೇಷ ವೇತನ ಭತ್ಯೆ ಮುಂದುವರೆಸುವುದು.
•  ಕಾಲ್ಪನಿಕ ವೇತನ ಬಡ್ತಿ
•  ರಾಜ್ಯ ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೂ ಎನ್.ಪಿ ಎಸ್ ಸೌಲಭ್ಯವನ್ನು ಕಲ್ಪಿಸುವುದು.
•  ಬಡ್ತಿಯಲ್ಲಿ ಹಿಂದಿನ ಶಿಕ್ಷಕರ ಬಗ್ಗೆ ಗೊಂದಲ ಹಾಗೂ ಪ್ರಸ್ತುತ ಇರುವ ಸ್ಥಿತಿ ಮತ್ತು ಅಡೆತಡೆಗಳು

ಇನ್ನಿತರ ಪ್ರಮುಖ ವಿಷಯಗಳ ಕುರಿತು ಶಿಕ್ಷಕ ಪದಾಧಿಕಾರಿಗಳು ಶ್ರೀ ಅರುಣ ಶಹಾಪೂರ್ ರವರೊಂದಿಗೆ ಚರ್ಚಿಸಿದರು. ಶ್ರೀ ಅರುಣ ಶಹಾಪುರರವರು ಎಲ್ಲರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಸದ್ಯದ ನಿಲುವುಗಳು, ನಿಯಮಗಳು ಹಾಗೂ ಅವುಗಳ ಕುರಿತು ಶಿಕ್ಷಣ ಸಚಿವರಾದ ಶ್ರೀ ಎನ್ ಮಹೇಶ್ ಮತ್ತು ಮಾನ್ಯ ಮುಖ್ಯಮಂತ್ರಿಗಳ ಮತ್ತು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಅವರ ಯೋಚನೆಗಳನ್ನು ತಿಳಿಸಿದರು.

ಸಭೆಯ ಸಮಾರೋಪದ ಅವಧಿಯಲ್ಲಿ ಶ್ರೀ ಶಿವಾನಂದ ಸಿಂಧನಕೇರಾರವರು ಸಂಘದ ಮೂಲ ಧ್ಯೇಯೋದ್ದೇಶ ಹಾಗೂ ಹಿರಿಯರು ಹಾಕಿದ ಮಾರ್ಗದಲ್ಲಿ ಇನ್ನೂ ಸಂಘವನ್ನು ಬಲಗೊಳಿಸಬಲ್ಲ ಸದಸ್ಯತಾ ಅಭಿಯಾನವನ್ನು ಎಲ್ಲಾ ಪದಾಧಿಕಾರಿಗಳು ಪರಿಣಾಮಕಾರಿಯಾಗಿ ಕೈಗೊಳ್ಳಲು ತಿಳಿಸಿದರು. ಗುರುವಂದನಾ ಕಾರ್ಯಕ್ರಮದ ಆಚರಣೆ ಅದರ ಮಹತ್ವವನ್ನು ಕುರಿತು ತಿಳಿಸಿ, ಸಂಘವನ್ನು ಇನ್ನೂ ಉನ್ನತವಾಗಿ ಕಟ್ಟಿ ಬೆಳೆಸಲು ಎಲ್ಲರ ಶ್ರಮ ಹಾಗೂ ಕಾರ್ಯತತ್ಪರತೇ ಮುಖ್ಯವೆಂದು ತಿಳಿಸಿದರು.

ಅಂತಿಮವಾಗಿ ಕಾರ್ಯಕ್ರಮದಲ್ಲಿ ಕೈಗೊಂಡ ನಡಾವಳಿಗಳನ್ನು ಸಭೆಗೆ ತಿಳಿಸಿ ಒಪ್ಪಿಗೆ ಪಡೆಯಲಾಯಿತು. ಶ್ರೀ ವರದರಾಜು, ಬೆಂಗಳೂರು ಗ್ರಾಮಾಂತರ ವಿಭಾಗದ ಪ್ರಮುಖರವರು ಉಪಸ್ಥಿತರಿದ್ದ ಎಲ್ಲಾ ಪ್ರಮುಖರಿಗೂ ಹಾಗೂ ಪದಾಧಿಕಾರಿಗಳಿಗೆ ವಂದನೆಗಳನ್ನು ತಿಳಿಸಿದರು. ಸಭೆಯು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

ವರದಿ : ಶ್ರೀಮತಿ ರೇಣುಕಾ ಹಂಗನಹಳ್ಳಿ

Highslide for Wordpress Plugin