ಪ್ರತಿಯೊಬ್ಬರ ಮೊದಲ ಹೀರೋಯಿನ್ ಎಂದರೆ ಅದು ತಾಯಿ, ನಂತರದ ಸ್ಥಾನ-ಶಿಕ್ಷಕಿ. ಶಿಕ್ಷಣ ಕ್ಷೇತ್ರದ ಬಗ್ಗೆ ನನಗೆ ತುಂಬಾ ಗೌರವವಿದೆ. ಶಿಕ್ಷಣ, ಕ್ಷೇತ್ರಕ್ಕೆ ಉತ್ತಮ ಪ್ರತಿನಿಧಿಗಳನ್ನು ಗುರುತಿಸಿ, ಆಯ್ಕೆ ಮಾಡಿ ಕಳುಹಿಸುವ ಜವಾಬ್ದಾರಿ ನಿಮ್ಮದು. ಏಕೆಂದರೆ ಎಲ್ಲ ಕ್ಷೇತ್ರಗಳಿಗೂ ಇದು ಬುನಾದಿ. ಇಲ್ಲಿನ ಒಬ್ಬೊಬ್ಬ ಮಹಿಳೆ 10 ಜನ ಸಂಘಟಕರನ್ನು ಪ್ರತಿನಿಧಿಸುತ್ತಾಳೆ. ಇಂದು ಆರಂಭವಾದ ಈ ಸಂಖ್ಯೆ ಇದರ ನೂರರಷ್ಟಾಗಿ ಬೆಳೆಯಬೇಕು. ಆಗಲೂ ನನ್ನನ್ನು ಆಹ್ವಾನಿಸಲು ಮರೆಯಬೇಡಿ ಎಂದು ಕನ್ನಡದ ಪ್ರಸಿದ್ಧ ಚಲನಚಿತ್ರ ನಟಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯೆಯಾಗಿದ್ದ ಶ್ರೀಮತಿ ತಾರಾ ಅನುರಾಧರವರು ಹೇಳಿದರು.
ದಿನಾಂಕ 21-9-18 ರಂದು ಬೆಂಗಳೂರಿನ ಯಾದವಸ್ಮೃತಿ’ಯ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಲಯದಲ್ಲಿ ರಾಜ್ಯ ಮಹಿಳಾ ಪ್ರಮುಖ್ ಶ್ರೀಮತಿ ಎನ್. ವಾಸುಕಿಯವರ ನೇತೃತ್ವದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಶಿಕ್ಷಕರ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ತಾರಾ ಅನುರಾಧಾರವರು ಮಾತನಾಡುತ್ತಾ ಸಂಘಟಕರಿಗೆ ಆತ್ಮೀಯವಾಗಿ ಹೀಗೆ ಹೇಳಿದ್ದರು.
ಅಖಿಲ ಭಾರತೀಯ ಶೈಕ್ಷಿಕ್ ಮಹಾಸಂಘದ ಮಹಿಳಾ ವಿಭಾಗದ ರಾಷ್ಟ್ರೀಯ ಸಹಕಾರ್ಯದರ್ಶಿಯಾದ ಶ್ರೀಮತಿ ಡಿ.ಕೆ. ಮಮತಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಸಂರಕ್ಷಕರೂ, ಮಾಜಿ ವಿಧಾನಪರಿಷತ್ ಸದಸ್ಯರೂ, ಹಿರಿಯರೂ ಆದ ಶ್ರೀಯುತ ಕೃ. ನರಹರಿಯವರು ದೀಪಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿದರು. ಅವರು ಮಾತನಾಡಿ ‘ಮೊದಲ ಸಭೆಗೆ ದೂರದೂರಿನಿಂದ ಬಂದಿದ್ದೀರಿ, ನಿಮ್ಮನ್ನೆಲ್ಲ ಕಂಡು ಅತೀವ ಆನಂದವಾಗುತ್ತಿದೆ. ಮಹಿಳೆಯರು ಮನೆಬಿಟ್ಟು ಬರಲು ಎಷ್ಟು ಕಷ್ಟವೆಂದು ನಾನು ಬಲ್ಲೆ. ಮುಂದಿನ ದಿನಗಳಲ್ಲಿ ನಿಮ್ಮ ಸಂಖ್ಯೆ, ಶಕ್ತಿ ಅಪಾರವಾಗಲಿ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರೂ ಆದ ಶ್ರೀಯುತ ಅರುಣ್ ಶಹಾಪೂರ ಅವರು ಉಪಸ್ಥಿತರಿದ್ದ ಎಲ್ಲ ಶಿಕ್ಷಕಿಯರ ಪರಿಚಯ ಮಾಡಿಕೊಂಡರು. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಚಿದಾನಂದ ಪಾಟೀಲರು ಸಂಘದ ಸ್ಥಾಪನೆಯ ಉದ್ದೇಶ, ಇದರ ಕಾರ್ಯವ್ಯಾಪ್ತಿ, ಉದ್ದೇಶಗಳ ಬಗ್ಗೆ ತಿಳಿಸಿದರು.
ನಂತರ ಚರ್ಚಾರೂಪದಲ್ಲಿ ಸಭೆ ಮುನ್ನಡೆಸಿಕೊಂಡು ಹೋದರು. ಶಿಕ್ಷಕಿಯರಿಗಾಗಿ ಒಂದು ಸಂಘಟನೆಯ ವಿಭಾಗ ಬೇಕೆ? ಏಕೆ ಬೇಕು? ಅದರ ಕಾರ್ಯವ್ಯಾಪ್ತಿ ಹೇಗಿರಬೇಕು? ಎಲ್ಲೆಲ್ಲಿ ಸಂಘಟನೆಗಳನ್ನು ಮಾಡಬೇಕು? ಸಂಘಟನೆಯ ಮೂಲಕ ಯಾವ ಯಾವ ಕಾರ್ಯಕ್ರಮಗಳನ್ನು ಮಾಡಬೇಕು? ಸಂಘಟನೆಯ ಮೂಲಕ ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು? ಸಂಘಟನೆ ಹೇಗಿರಬೇಕು? ಇತ್ಯಾದಿ ವಿಷಯಗಳ ಬಗ್ಗೆ ಕೂಲಂಕುಷ ಚರ್ಚೆ ನಡೆಯಿತು. ಇದೇ ಅವಧಿಯಲ್ಲಿ ಶಿಕ್ಷಕಿಯರು ಮನೆಯಲ್ಲಿ, ಶಾಲೆಯಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ಮಧ್ಯೆಯೂ ಸಂಘಟನೆಯಲ್ಲಿ ತೊಡಗುವ ಮನೋಭಾವನೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ತಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆತ ತೃಪ್ತಿ ಶಿಕ್ಷಕಿಯರದಾಗಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ೩೫ ಜನ ಶಿಕ್ಷಕಿಯರು ಹಾಜರಿದ್ದರು.
ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಶ್ರೀಯುತ ಎ. ಗಂಗಾಧರಾಚಾರಿ ಅವರು ಸಭೆಯಲ್ಲಿದ್ದ ಸರ್ವರಿಗೂ ಹೃದಯ ತುಂಬ ವಂದನೆ ಸಲ್ಲಿಸಿದರು.
ವರದಿ -ಶ್ರೀಮತಿ ಜಿ.ಎನ್ ವಾಸುಕಿ, ರಾಜ್ಯ ಮಹಿಳಾ ಪ್ರಮುಖ್