ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ

ಶಿಕ್ಷಣ ರಾಷ್ಟ್ರದ ಬಲ. ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ದಿವ್ಯ ಔಷಧವಿದ್ದಂತೆ. ಮೌಲ್ಯಯುತ ಶಿಕ್ಷಣ ನೀಡುವ ಶಿಕ್ಷಕರೇ ನಿಜವಾದ ರಾಷ್ಟ್ರ ರಕ್ಷಕರು ಎಂದು ಧಾರವಾಡ ರಾಮಕೃಷ್ಣ- ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕೇವಲ ಸರ್ಟಿಫಿಕೇಟ್ ನೀಡುವುದು ಶಿಕ್ಷಣವಲ್ಲ. ಯಾರೋ ಬರೆದಿಟ್ಟ ಇತಿಹಾಸ ಓದುವ ಮೂಲಕ ನಾವು ಆತ್ಮಸ್ವಾತಂತ್ರ್ಯ ಕಳೆದುಕೊಂಡಿದ್ದೇವೆ. ಶಿಕ್ಷಕರು ಪೇಮೆಂಟ್, ಪ್ರಮೋಶನ್ ಹಾಗೂ ಪೆನ್ಶನ್ ಎಂಬ ಮೂರು ‘ಪಿ’ಗಳ ಬಗ್ಗೆ ಮಾತ್ರ ಚಿಂತಿಸದೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕು. ಶಿಕ್ಷಕರ ಒಳಗೆ ದಿವ್ಯತೆ ಸೃಷ್ಟಿಯಾದರೆ ಮಾತ್ರ ವಿದ್ಯಾರ್ಥಿಗಳಲ್ಲಿನ ದಿವ್ಯತೆ ಹೊರತೆಗೆಯಬಹುದು ಎಂದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ಕೆಆರ್‌ಎಂಎಸ್‌ಎಸ್)ದ ಸುವರ್ಣ ಮಹೋತ್ಸವದ ಅಂಗವಾಗಿ ಇಲ್ಲಿನ ಬಿವಿಬಿ ಮಹಾವಿದ್ಯಾಲಯದ ಬಯೋಟೆಕ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕನ ಹಿತಕ್ಕಾಗಿ ಸಮಾಜ ಎಂಬ ಮೂರು ಧ್ಯೇಯಗಳೊಂದಿಗೆ ಮಾಧ್ಯಮಿಕ ಶಿಕ್ಷಕ ಸಂಘ ಕೆಲಸ ಮಾಡುತ್ತಿದೆ. ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಜೆಎನ್‌ಯು ಸೇರಿದಂತೆ ಇತರೆ ವಿವಿಗಳಲ್ಲಿ ಎಂಥವರಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂಬ ಬಗ್ಗೆ ಚಿಂತನೆ ನಡೆಸಬೇಕಿದೆ. ಶಿಕ್ಷಕರ ಹಿತಕ್ಕಿಂತ ಮೊದಲು ಶಿಕ್ಷಣದ ಹಿತ ಕಾಪಾಡಬೇಕಿದೆ. ಹೊಸ ಶಿಕ್ಷಣ ಪದ್ಧತಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿರುವುದು ಸ್ವಾಗತಾರ್ಹ ಎಂದರು.

ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಅರಿಯಬೇಕಿದೆ. ಶಿಕ್ಷಕರ ಹುದ್ದೆ ಪವಿತ್ರವಾದುದು. ಶಿಕ್ಷಕರು ನೆಮ್ಮದಿಯಿಂದ ಇದ್ದರೆ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು.

ಶೈಕ್ಷಣಿಕ ಗುಣಮಟ್ಟ- ಪರಿಕಲ್ಪನೆ- ಸವಾಲುಗಳು ಎಂಬ ವಿಷಯದ ಕುರಿತು ಪ್ರಜ್ಞಾ ಪ್ರವಾಹದ ದಕ್ಷಿಣ ಮಧ್ಯಕ್ಷೇತ್ರ ಸಂಯೋಜಕ ರಘುನಂದನ ಉಪನ್ಯಾಸ ನೀಡಿದರು. ಸಮ್ಮೇಳನದಲ್ಲಿ ‘ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ’, ‘ಮಾತೃಶಕ್ತಿಯನ್ನು ಗೌರವಿಸುವ ಅವಶ್ಯಕತೆ, ‘ರಾಜ್ಯದ ಪ್ರಸ್ತುತ ಶೈಕ್ಷಣಿಕ ಸ್ಥಿತಿ ಎಂಬ 3 ನಿರ್ಣಯಗಳ ಕರಡು ಪ್ರತಿ ಮಂಡಿಸಲಾಯಿತು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಅತೀ ಅವಶ್ಯ. ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳದೇ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಪ್ರಜ್ಞಾಪ್ರವಾಹ ದಕ್ಷಿಣ ಮಧ್ಯಕ್ಷೇತ್ರದ ಸಂಯೋಜಕ ರಘುನಂದನ್ ಹೇಳಿದರು. ಶೈಕ್ಷಣಿಕ ಗುಣಮಟ್ಟ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ತಂತ್ರಜ್ಞಾನ ಬಳಕೆ ಮಿತವಾಗಿರಬೇಕು. ಉಪಯುಕ್ತತೆಗೆ ಪೂರಕವಾಗಿರಬೇಕು. ಅನಗತ್ಯವಾಗಿ ತಂತ್ರಜ್ಞಾನದ ಬಳಕೆ ಮಾಡಿದರೆ ಅಪಾಯವೇ ಹೆಚ್ಚು ಎಂದು ಸಲಹೆ ನೀಡಿದರು.

ವ್ಯಾಪಾರ ಮತ್ತು ಧರ್ಮಗಳು ಒಂದಕ್ಕೊಂದು ಹೋಲಿಕೆಯಾಗುವುದಿಲ್ಲ. ವ್ಯಾಪಾರದಲ್ಲಿ ಧರ್ಮವಿರಬೇಕು. ಧರ್ಮದಲ್ಲಿ ವ್ಯಾಪಾರವಿರಬಾರದು. ಪಾಲಕರು, ಶಿಕ್ಷಕರು, ಸಮುದಾಯ ಹಾಗೂ ಸರಕಾರಗಳು ಸೇರಿಕೊಂಡು ಪರಿವಾರವಾಗಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಮಹಾಪೌರ ಸುಧೀರ ಸರಾಫ, ಶಿಕ್ಷಣ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ಪಾಟೀಲ, ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಾಲಕೃಷ್ಣ ಭಟ್, ಸುಶೀಲ ನಮೋಶಿ, ಗಣೇಶ ಕಾರ್ಣಿಕ್, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಸಂರಕ್ಷಕ ಕೃ. ನರಹರಿ, ಶಿವಾನಂದ ಸಿಂಧನಕೇರಾ, ವಿಶ್ರಾಂತ ಕುಲಪತಿ ಜಗದೀಶ ಸಿಂಘಾಲ, ಕೆಆರ್‌ಎಂಎಸ್‌ಎಸ್ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ, ಪ್ರೊ. ರಘು ಅಕಮಂಚಿ, ಎಬಿಆರ್‌ಎಸ್‌ಎಂ ಸಹಕಾರ್ಯದರ್ಶಿ ಮಮತಾ ಡಿ. ಕೆ. ಸೇರಿದಂತೆ ಇತರರು ಉಪಸ್ಥಿತರಿದ್ದರು.
26 ಜಿಲ್ಲೆಗಳಿಂದ ಶಿಕ್ಷಣ ತಜ್ಞರು, ಶಿಕ್ಷಕರು ಸೇರಿದಂತೆ ಸುಮಾರು ೭೦೦ ಜನರು ಪಾಲ್ಗೊಂಡಿದ್ದರು.

ಶಿಕ್ಷಕರಿಗಾಗಿ ಕೆಆರ್‌ಎಂಎಸ್‌ಎಸ್
ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಶಿಕ್ಷಕರ ಒಳಿತಿಗಾಗಿ ಕೆಲಸ ಮಾಡುತ್ತಿರುವ ಏಕೈಕ ಸಂಘಟನೆ ಎಂದರೆ ಮಾಧ್ಯಮಿಕ ಶಿಕ್ಷಕ ಸಂಘ. ಹಲವು ಶಿಕ್ಷಕರ ಸಂಘಟನೆಗಳು ಒಡೆದು ಹೋಗಿವೆ. ಆದರೆ, 50 ವರ್ಷವಾದರೂ ಮಾಧ್ಯಮಿಕ ಶಿಕ್ಷಕ ಸಂಘ ಮಾತ್ರ ಒಗ್ಗಟ್ಟಾಗಿ ಶಿಕ್ಷಕರ ಏಳ್ಗೆಗಾಗಿ ಶ್ರಮಿಸುತ್ತಿದೆ ಎಂದು ಎಂಎಲ್‌ಸಿ ಅರುಣ ಶಹಾಪುರ ತಿಳಿಸಿದರು.

ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು

ನಿರ್ಣಯ-1 : ಒಂದು ರಾಷ್ಟ್ರ ಒಂದು ಶಿಕ್ಷಣ ಒಂದು ವೇತನ

ರಾಷ್ಟ್ರ ಎಂದರೆ ಬೆಟ್ಟ, ಗುಟ್ಟ, ಸಮುದ್ರ, ನದಿ, ಮಣ್ಣು ಅಲ್ಲ. ಅದು ನಮ್ಮ ಭಾವನೆ. ಹಾಗಾಗಿ ರಾಷ್ಟ್ರ ಹಿರಿತನದಲ್ಲಿ ಅಚಲ ವಿಶ್ವಾಸ. ರಾಷ್ಟ್ರೀಯ ವಿಧೇಯತೆಯಿಂದ ಯಾವಾಗ ಭಾವನೆಗಳು ತುಂಬಿ ತುಳುಕುತ್ತವೆಯೋ ಮತ್ತು ರಾಷ್ಟ್ರೀಯ ಹಿತಕ್ಕಾಗಿ ಅವುಗಳು ನಿರ್ದೇಶಿಸಲ್ಪಡುತ್ತವೆಯೋ ಆಗ ರಾಷ್ಟ್ರೈಕ್ಯ ರೂಪತಾಳುತ್ತದೆ. ಅಂತೆಯೇ ನಾವು ಒಂದೇ ನೆಲಕ್ಕೆ ಸೇರಿದವರೆಂಬ ಭಾವನೆ ನಮ್ಮ ಪ್ರಕ್ರಿಯೆಗಳಿಂದ ವ್ಯಕ್ತವಾಗುತ್ತದೆ. ಆಗ ನಾವು ಭಾವೈಕ್ಯತೆಯಿಂದ ರಾಷ್ಟ್ರೈಕ್ಯವನ್ನು ಸಾಧಿಸುತ್ತೇವೆ ಮತ್ತು ಅದನ್ನು ನಾವು ಈಗಾಗಲೇ ಸಾಧಿಸಿದ್ದೇವೆ. ಹಾಗಾಗಿ ನಾವು ಒಂದು ರಾಷ್ಟ್ರ.

ಡಾ|| ರಾಧಾಕೃಷ್ಣನ್‌ರ ಅಭಿಪ್ರಾಯದಂತೆ ರಾಷ್ಟ್ರೈಕ್ಯವನ್ನು ಇಟ್ಟಿಗೆ ಗಾರೆಯಿಂದ ಕಟ್ಟಲಾಗುವುದಿಲ್ಲ. ಜನರ ಮನ ಮತ್ತು ಹೃದಯದಲ್ಲಿ ಅದು ಮೌನವಾಗಿ ಬೆಳಗಬೇಕು. ಹಾಗೆ ಮಾಡುವ ಒಂದೇ ವಿಧಾನವೆಂದರೆ ಶಿಕ್ಷಣ ವಿಧಾನ. ಅಂತೆಯೇ ಇಂದು ಶಿಕ್ಷಣ ಕೇಂದ್ರ, ರಾಜ್ಯಗಳ ಮೂಲಕ ಸರಕಾರಿ ಸಾರ್ವಜನಿಕ ಶಾಲೆಗಳು, ಖಾಸಗಿ ಶಾಲೆಗಳು, ಪಬ್ಲಿಕ್ ಶಾಲೆಗಳು, ಕೇಂದ್ರೀಯ ಶಾಲೆಗಳು, ಸೈನಿಕ ಶಾಲೆಗಳು, ನವೋದಯ ಶಾಲೆಗಳು, ವಸತಿ ಶಾಲೆಗಳು, ಮೊರಾರ್ಜಿ ಶಾಲೆಗಳು ಇತ್ಯಾದಿ ಬೇರೆ ಬೇರೆ ಪ್ರಕಾರಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಪೂರ್ವ ಶಿಕ್ಷಣ ರಾಷ್ಟ್ರದ ತುಂಬ ಪ್ರಸಾರವಾಗುತ್ತಿದೆ. ಅದನ್ನು ಒಟ್ಟು ಇಡೀ ಒಂದು ರಾಷ್ಟ್ರದ ಶಿಕ್ಷಣವಾಗಿ ಒಂದೇ ಛತ್ರದಡಿಯಲ್ಲಿ ಬರುವಂತೆ ಒಂದು ರಾಷ್ಟ್ರದ ಶಿಕ್ಷಣವಾಗಿ ಪುನಃ ರೂಪಿಸಬೇಕು. ಹೀಗಾದಾಗ ರಾಷ್ಟ್ರದ ಶಿಕ್ಷಣ ಏಕತೆ ಮತ್ತು ರಾಷ್ಟ್ರೀಯತೆಯ ಭಾವನೆಗೆ ಇಂಬುಗೊಟ್ಟಂತಾಗಿ ಮುಂದಿನ ಪೀಳಿಗೆಯ ಮನಸ್ಸಿನಲ್ಲಿ ನಿಜರಾಷ್ಟ್ರೀಯತೆಯ ಉತ್ಸಾಹ ಉಕ್ಕಲು ಸಾಧ್ಯವಾಗುತ್ತದೆ. ಆಗ ಒಂದು ರಾಷ್ಟ್ರ ಒಂದು ಶಿಕ್ಷಣದ ಕಲ್ಪನೆಗೆ ಬೆಲೆ ಬರುತ್ತದೆ.

ವ್ಯಕ್ತಿಯ ವ್ಯಕ್ತಿತ್ವದ ಅಭಿವೃದ್ಧಿಗಾಗಿಯೇ ಇರುವ ಏಕೈಕ ವೃತ್ತಿಯೇ ಶಿಕ್ಷಕ ವೃತ್ತಿ. ಇದು ಶಿಕ್ಷಣದ ಪ್ರಗತಿಗೆ ಕೀಲಿಕೈಯಿದ್ದಂತೆ. ಇಂತಹ ಶಿಕ್ಷಕ ಭಾರತೀಯ ಸಂದರ್ಭದಲ್ಲಿ ಕೇಂದ್ರ ರಾಜ್ಯ ಹಾಗೂ ಖಾಸಗಿ ಸಂಸ್ಥೆಗಳ ಬೇರೆ ಬೇರೆ ಪ್ರಕಾರದ ಶಿಕ್ಷಣದ ಕ್ರಮಗಳಲ್ಲಿ ಅವರೂ ಕೂಡ ಹರಿದು ಹಂಚಿ ಹೋಗಿದ್ದಾರೆ. ಪರಿಣಾಮ ಅವರ ವೇತನ, ಭತ್ಯೆಗಳ ವ್ಯತ್ಯಾಸಗಳು, ಅಂತರಗಳು ಇದ್ದು ಅವರಲ್ಲಿ ಸಾಕಷ್ಟು ಅತೃಪ್ತಿ ಇದೆ. ಪ್ರಯುಕ್ತ ಇಡೀ ರಾಷ್ಟ್ರ ಮಟ್ಟದಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಅಧ್ಯಾಪಕರುಗಳನ್ನು ಯು.ಜಿ.ಸಿ ಅಡಿಯಲ್ಲಿ, ತಾಂತ್ರಿ ಶಿಕ್ಷಣದ ಅಧ್ಯಾಪಕರುಗಳನ್ನು ಎ.ಆಯ್.ಸಿ.ಟಿ.ಇ ಯಡಿಯಲ್ಲಿ ಸೇರಿಸಿ ಒಂದೇ ಮಾದರಿಯಲ್ಲಿ ಇಟ್ಟುಕೊಳ್ಳಲಾಗಿದೆಯೋ, ಅದೇ ಮಾದರಿಯಲ್ಲಿ ಇಡೀ ರಾಷ್ಟ್ರದ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಶಿಕ್ಷಣದ ಕೇಂದ್ರ ಧನಸಹಾಯ ಆಯೋಗವನ್ನು ಸ್ಥಾಪಿಸುವ ಮೂಲಕ ಅದರ ಅಡಿಯ ಅಧ್ಯಾಪಕರುಗಳಿಗೆ ವೇತನಭತ್ಯೆಗಳು ಏಕ ರೀತಿಯಲ್ಲಿಯೇ ಇರಲಿ. ಆಗ ಒಂದು ದೃಢ ಮತ್ತು ಐಕ್ಯತೆಯ ದೇಶದ ನಿರ್ಮಾಣಕ್ಕೆ ಸಾಮಾಜಿಕ ಹಾಗೂ ರಾಷ್ಟ್ರೀಯ ಐಕ್ಯತೆಗೆ ಹಾಗೂ ಎಲ್ಲ ಸಾಮಾಜಿಕ ವರ್ಗಗಳನ್ನು ಮತ್ತು ಗುಂಪುಗಳನ್ನು ಒಂದು ಗೂಡಿಸಿ ತನ್ಮೂಲಕ ಭಾತೃತ್ವದ ಹಾಗೂ ಐಕ್ಯತೆಯ ಸಮಾಜವನ್ನುಂಟು ಮಾಡುವ ನಿಟ್ಟಿನಲ್ಲಿ ಒಂದು ರಾಷ್ಟ್ರ, ಒಂದು ಶಿಕ್ಷಣ, ಒಂದು ವೇತನ ನೀತಿ ಜಾರಿಗೆ ಬರುವಂತೆ ಸರಕಾರ ಕ್ರಮಕೈಗೊಳ್ಳಬೇಕು ಎಂದು ಈ ವೇದಿಕೆಯ ಮೂಲಕ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಆಗ್ರಹಿಸುತ್ತದೆ.

ನಿರ್ಣಯ-2 : ಮಾತೃಶಕ್ತಿಯನ್ನು ಗೌರವಿಸುವ ಅವಶ್ಯಕತೆ

ಅನೇಕ ವಿಚಾರಧಾರೆಗಳು ತಮ್ಮ ತಮ್ಮ ಪೂರ್ವಾಗ್ರಹ ಮತ್ತು ವಾದಗಳ ದೃಷ್ಟಿಯಿಂದ ಸ್ತ್ರೀಯನ್ನು ಅನೇಕ ರೀತಿಯಲ್ಲಿ ವಿಶ್ಲೇಷಿಸುತ್ತಿವೆ. ಆಧುನಿಕ ಪಾಶ್ಚಾತ್ಯ ಚಿಂತನೆ ಸ್ತ್ರೀಯನ್ನು ಪುರುಷರಿಗಿಂತ ಕೆಳಹಂತದಲ್ಲಿ ನೋಡುತ್ತದೆ. ಇನ್ನೊಂದೆಡೆ ಕಮ್ಯುನಿಸಂ ಪ್ರತಿ ವಿಷಯವನ್ನು ವರ್ಗ ಸಂಘರ್ಷದ ದೃಷ್ಟಿಯಲ್ಲಿ ನೋಡುತ್ತದೆ. ಇವೆಲ್ಲವುಗಳ ಮಧ್ಯದಲ್ಲಿಯೂ ಭಾರತೀಯ ಚಿಂತನೆ ಸಮಗ್ರ ದೃಷ್ಟಿಯುಳ್ಳದ್ದಾಗಿದೆ. ಇಲ್ಲಿ ಸ್ತ್ರೀ-ಪುರುಷರು ಭಿನ್ನರಲ್ಲ, ಒಬ್ಬರಿಗೊಬ್ಬರು ಪೂರಕವಾಗಿದ್ದು, ಪರಸ್ಪರ ಅವಲಂಬಿತರಾಗಿದ್ದಾರೆ. ಸ್ತ್ರೀ-ಪುರಷರಿಬ್ಬರ ಸಾಮರಸ್ಯದಿಂದ ಮಾತ್ರ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯ. ಅರ್ಧನಾರೀಶ್ವರ ತತ್ವವೂ ಸಹ ಇದನ್ನೇ ಬಿಂಬಿಸಿದೆ. ವಿಶ್ವದ ಅನ್ಯ ಧರ್ಮಗಳಲ್ಲಿಭಗವಂತನನ್ನು ಪುರುಷನನ್ನಾಗಿ ಮಾತ್ರ ಪ್ರಾರ್ಥಿಸುತ್ತಾರೆ. ಆದರೆ ಭಾರತೀಯತೆಯ ವಿಶೇಷತೆಯೇನೆಂದರೆ ಶಿವನಲ್ಲಿಯೂ ಸಹ ಮಾತೃಸ್ವರೂಪವನ್ನು ನೋಡಲಾಗುತ್ತದೆ. ಮಾತೃಶಕ್ತಿಯ ಈ ಆರಾಧನೆ ಬಹಳ ವೈಶಿಷ್ಟ್ಯಪೂರ್ಣವಾಗಿರುವಂತಹುದು.

ವೇದಕಾಲದಲ್ಲಿ ಆಚಾರ್ಯರು ಸಹ ದೀಕ್ಷಾ ಸಮಯದಲ್ಲಿ ನೀಡುತ್ತಿದ್ದ ಮೊದಲನೇ ಉಪದೇಶವೇ ಮಾತೃದೇವೋಭವ ನಂತರ ಪಿತೃದೇವೋಭವ ಮತ್ತು ಆಚಾರ್ಯದೇವೋಭವ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ ಎಂಬ ಉಕ್ತಿಯಲ್ಲಿ ಹತ್ತು ಉಪಾಧ್ಯಾಯರು ಒಬ್ಬ ಉಪಾಧ್ಯಾಯಿನಿಗೆ ಸಮವೆಂದು ಹೇಳಲಾಗಿದೆ.

ಮಾತೃ ಎಂಬ ಶಬ್ದವೇ ಭಾರತೀಯತೆಯ ಪವಿತ್ರಮಯ ಶಬ್ದವಾಗಿದೆ. ಭಾರತದಲ್ಲಿ ಪಾಶ್ಚಿಮಾತ್ಯರಂತೆ ಸ್ತ್ರೀಯನ್ನು ಭೋಗದ ವಸ್ತುವನ್ನಾಗಿಸದೇ ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಯಾವುದಾದರೂ ದೇಶದ ಪ್ರಗತಿಯ ಮಾನದಂಡವನ್ನು ಸ್ತ್ರೀಯರೊಡನೆ ವ್ಯವಹರಿಸುವ ರೀತಿಯನ್ನು ನೋಡಿ ತಿಳಿಯಬಹುದಾಗಿದೆ ಎಂಬುದು ಕೇವಲ ಸ್ವಾಮಿ ವಿವೇಕಾನಂದರ ಹೇಳಿಕೆಯಲ್ಲ, ನಮ್ಮ ಸನಾತನ ಸಂಸ್ಕೃತಿಯ ಸ್ವಾಭಾವಿಕತೆಯಾಗಿದೆ. ಸ್ತ್ರೀಯ ಪೂರ್ಣತ್ವವು ಪ್ರಾಚೀನ ಕಾಲದಿಂದ ಇಲ್ಲಿಯವರೆಗೂ ಭಾರತೀಯ ಉನ್ನತ ಆದರ್ಶಗಳನ್ನೊಳಗೊಂಡ ಸ್ತ್ರೀರತ್ನಗಳಿಂದ ವ್ಯಕ್ತವಾಗಿದೆ. ಇವರೆಲ್ಲಾ ತಮ್ಮ ಉತ್ತಮ ಕೆಲಸ ಹಾಗೂ ಸೇವೆಯಿಂದ ನಾರಿ ಕುಲದ ಹೆಸರನ್ನೇ ಉಜ್ವಲಗೊಳಿಸಿದ್ದಾರೆ. ಗಾರ್ಗಿ, ಮೈತ್ರೇಯೀಯಂತಹ ವಿದೂಷಿಯರು, ಶೌರ್ಯಕ್ಕಾಗಿ ವೀರಮಾತೆ ಜೀಜಾಬಾಯಿ, ರಾಣಿ ಲಕ್ಷ್ಮೀಬಾಯಿ, ಸಮಾಜಸುಧಾರಣೆಯಲ್ಲಿ ಸ್ತ್ರೀ ಶಿಕ್ಷಣಕ್ಕೆ ಸಾವಿತ್ರಿಬಾಯಿ ಪುಲೆ ಮುಂತಾದವರು ತೇಜಸ್ವಿ ಸ್ತ್ರೀಯರಾಗಿದ್ದು, ಇವೆರೆಲ್ಲರ ಕಾರ್ಯಗಳು ಅನುಕರಣೀಯವಾದವುಗಳಾಗಿವೆ.

ಆದರೆ ಸ್ತ್ರೀ ವಿಷಯದಲ್ಲಿ ಇಂತಹ ಅತ್ಯುತ್ತಮ ನಿದರ್ಶನಗಳಿದ್ದಾಗಲೂ ಸಹ ತಿರಸ್ಕಾರ, ಅಪಮಾನ, ಅತ್ಯಾಚಾರ, ಸ್ವೇಚ್ಛಾಚಾರ, ಶೋಷಣೆ, ಕೌಟುಂಬಿಕ ಹಿಂಸೆ, ಲಿಂಗ ತಾರತಮ್ಯ, ಭ್ರೂಣಹತ್ಯೆಯಂತಹ ಕುನೀತಿಗಳಿಂದ ಸಮಾಜ ಜರ್ಜರಿತವಾಗಿದೆ. ಇಂತಹ ಸಮಸ್ಯೆಗಳಿಂದ ಅನೇಕ ಸಾಮಾಜಿಕ ಸಮಸ್ಯೆಗಳು ಸಹ ಹುಟ್ಟಿಕೊಂಡಿವೆ. ಇವುಗಳಿಂದ ಸಮಾಜವನ್ನು ವಿಮುಕ್ತಿಗೊಳಿಸುವ ಜವಾಬ್ದಾರಿ ಪೂರ್ಣ ಸಮಾಜದ ಮೇಲಿದೆ, ಅದರಲ್ಲೂ ಬೌದ್ಧಿಕ ವರ್ಗವಾದ ಶಿಕ್ಷಕರ ಪಾತ್ರ ಪ್ರಮುಖವಾಗಿದೆ.

ಆದ್ದರಿಂದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ನಿಮ್ಮೆಲ್ಲರ ಸಮಕ್ಷಮದಲ್ಲಿ ನಾವೆಲ್ಲರೂ ಮಾತೃಶಕ್ತಿಯನ್ನು ಗೌರವಿಸಲು ವಿದ್ಯುಕ್ತರಾಗಬೇಕೆಂಬ ಪ್ರಸ್ತಾವನೆಯನ್ನು ಇಡುತ್ತಿದೆ. ಪುರುಷರಿಗೆ ಸಮಾನರಷ್ಟೇ ಅಲ್ಲದೇ ಸ್ತ್ರೀಶಕ್ತಿಗೆ ಇನ್ನೂ ವಿಶೇಷ ಸ್ಥಾನಮಾನದ ಅವಶ್ಯಕತೆಯಿದೆ. ಮಾತೃಶಕ್ತಿಯ ವಿವಿಧ ರೂಪಗಳಾದ (ತಾಯಿ, ಸಹೋದರಿ, ಸಹಧರ್ಮಿಣಿ, ಸಹಕರ್ಮಿಣಿ, ಗೆಳತಿ ಮುಂತಾದವು) ಹಿರಿಮೆಯ ರಕ್ಷಣೆಯಾಗಬೇಕು.

ನಮ್ಮಲ್ಲಿರುವ ಮಾತೃಸಮಾಜದ ಬಗೆಗಿನ ಗೌರವ ನಮ್ಮ ದೈನಂದಿನ ನಡತೆಯಲ್ಲಿ ಕಾಣುವಂತಿರಬೇಕು. ಸ್ತ್ರೀಯು ಸಹ ಉತ್ತಮ ನಡತೆಯೊಂದಿಗೆ ಪೂರ್ಣತೆಯ ಕಡೆ ಸಾಗಬೇಕು ಮತ್ತು ಪುರುಷರು ಸಹ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಭಾರತವು ವಿಶ್ವಗುರುವಾಗುವಲ್ಲಿ ಮಾತೃಶಕ್ತಿಯ ಉನ್ನತಿಯು ಸಾಧನೆ ಯಾಗಬೇಕೆಂಬುದೇ ಈ ಪ್ರಸ್ತಾವನೆಯ ಗುರಿಯಾಗಿದೆ.

ನಿರ್ಣಯ-3 : ರಾಜ್ಯದ ಪ್ರಸ್ತುತ ಶೈಕ್ಷಣಿಕ ಸ್ಥಿತಿ

⭕ ಶಿಕ್ಷಕರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದು.
⭕ ವೈಜ್ಞಾನಿಕ ವರ್ಗಾವಣೆ ನೀತಿಯನ್ನು ನಿರೂಪಿಸುವುದು.
⭕ ಅನುದಾನಿತ ಶಿಕ್ಷಕರಿಗೆ ಕಾಲ್ಪನಿಕ ವೇತನ ಜಾರಿಗೆ ತರುವುದು.
⭕ ಅನುದಾನಿತ/ ಸರಕಾರಿ ಶಾಲೆಗಳಲ್ಲಿ ಆರ್.ಟಿ.ಇ ಕಾಯ್ದೆಯಲ್ಲಿಯ ಶಿಕ್ಷಕ: ವಿದ್ಯಾರ್ಥಿಗಳ ಅನುಪಾತದಂತೆ ಹೆಚ್ಚುವರಿ ಶಿಕ್ಷಕರನ್ನು ಪರಿಗಣಿಸುವುದು.
⭕ ಜೆ.ಒ.ಸಿ. ಶಿಕ್ಷಕರಿಗೆ ಖಾಯಂ ಪೂರ್ವ ಸೇವಾ ಅವಧಿಯನ್ನು ಪಿಂಚಣಿ ಮತ್ತು ಇತರೆ ಸೌಲಭ್ಯಗಳಿಗೆ ಪರಿಗಣಿಸುವುದು.
⭕ ಬಡ್ತಿ ಶಿಕ್ಷಕರಿಗೆ ಕಾಲಮಿತಿ ವೇತನ ಬಡ್ತಿ ನೀಡುವುದು.
⭕ 2008 ನಂತರ ನೇರ ನೇಮಕ ಹೊಂದಿರುವ ಶಿಕ್ಷಕರಿಗೆ ಒಂದು ವಿಶೇಷ ಬಡ್ತಿ ನೀಡುವುದು.
⭕ ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ವೈದ್ಯನಾಥನ್ ವರದಿ ಯಥಾವತ್ತಾಗಿ ಜಾರಿಗೊಳಿಸುವುದು.
⭕ ವಸತಿ ಶಾಲೆಗಗಳಲ್ಲಿ ಕಾರ್ಯ ಮಾಡುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು.
⭕ ಅನುದಾನ ರಹಿತ ಶಿಕ್ಷಕರಿಗೆ ಕನಿಷ್ಠ ಮೂಲ ವೇತನ ನಿಗದಿಪಡಿಸುವುದು.
⭕ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿಯ ಅಧ್ಯಾಪಕರ ವೇತನ ತಾರತಮ್ಯ ಸರಿಪಡಿಸುವುದು.
⭕ ಕೆ.ಪಿ.ಎಸ್. ಶಾಲೆಗಳ ಸಂರಚನೆಯಲ್ಲಿಯ ಗೊಂದಲ ನಿವಾರಿಸುವುದು.
⭕ ಪಠ್ಯ ಪುಸ್ತಕದ ಹೊರೆಯನ್ನು ವೈಜ್ಞಾನಿಕವಾಗಿ ಕಡಿತಗೊಳಿಸುವುದು.
⭕ ಡಿ.ಎಲ್.ಡಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ಮಾಡುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು.
⭕ ಪದವಿ ಪೂರ್ವ ವಾಣಿಜ್ಯ ಉಪನ್ಯಾಸಕರಿಗೆ ವಿಷಯವಾರು ಪ್ರತ್ಯೇಕ ಉಪನ್ಯಾಸಕರ ನೇಮಕ.
⭕ ಅನುದಾನಿತ/ಸರಕಾರಿ ಶಾಲೆಗಳಲ್ಲಿ ಇರುವ ಖಾಲಿ ಹುದ್ದೆಗಳನ್ನು ತುಂಬುವುದು.
⭕ ಹಿಂದಿ ಮತ್ತು ಸಂಸ್ಕೃತ ಶಿಕ್ಷಣಕ್ಕೆ ವಿಷಯ ಪರಿವೀಕ್ಷರನ್ನು ನೇಮಿಸಿ ಆ ವಿಷಯಗಳ ಸಬಲೀಕರಣ ಮಾಡುವುದು.
⭕ ಚಿತ್ರಕಲಾ ವೃತ್ತಿ, ಸಂಗೀತ, ನೃತ್ಯ, ಹೊಲಿಗೆ ಈ ವಿಶೇಷ ಶಿಕ್ಷಕರ ಹುದ್ದೆಗಳನ್ನು ತುಂಬುವುದು ಮತ್ತು ಈ ವಿಷಯಗಳಿಗೆ ಒತ್ತು ನೀಡುವುದು.
⭕ ಅನುದಾನಿತ ಶಿಕ್ಷಕರಿಗೆ ಸರಕಾರಿ ಶಿಕ್ಷಕರಿಗೆ ಇರುವಂತೆ ಸಮಾನ ಸೌಲಭ್ಯಗಳನ್ನು ನೀಡುವುದು.
⭕ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಶಿಕ್ಷಕರ ಸದನದ ನಿರ್ಮಾಣ.

ಈ ಎಲ್ಲ ವಿಷಯಗಳನ್ನು ಸರಕಾರ ಗಮನಹರಿಸಿ ಪರಿಹರಿಸಲು ಈ ಶೈಕ್ಷಣಿಕ ಸಮ್ಮೇಳನವು ಒತ್ತಾಯಿಸುತ್ತದೆ.

Highslide for Wordpress Plugin