ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಸಮಾವೇಶ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ (ರಿ) ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ಇವರ ಸಹಯೋಗದಲ್ಲಿ ದಿನಾಂಕ 29-11-2018 ರಂದು ಬೆಂಗಳೂರಿನಲ್ಲಿರುವ ಯಾದವಸ್ಮೃತಿ ಸಭಾಭವನದಲ್ಲಿ ಒಂದು ದಿನದ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರ ರಾಜ್ಯಮಟ್ಟದ ಸಮಾವೇಶ ನಡೆಯಿತು. ಖ್ಯಾತ ಶಿಕ್ಷಣತಜ್ಞರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀಯುತ ಪ್ರೊ. ಕೃ. ನರಹರಿಯವರು ದೀಪ ಬೆಳಗುವುದರ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಶ್ರೀಯುತರು ತಮ್ಮ ಉದ್ಘಾಟನಾ ಭಾಷಣದಲ್ಲಿ ಹಿಂದಿನಿಂದಲೂ ಸಂಸ್ಕೃತ ಭಾಷಾ ಶಿಕ್ಷಣಕ್ಕೆ ತಮ್ಮ ಸಂಘವು ವಿಶೇಷ ಮಹತ್ವವನ್ನು ಕೊಡುತ್ತಾ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಸಂಸ್ಕೃತ ಶಿಕ್ಷಕರ ಕರ್ತವ್ಯ ಮತ್ತು ಸಂಘಟನೆಯ ಮಹತ್ತ್ವವನ್ನು ತಿಳಿಸಿದರು.

ವಿಶೇಷ ಸಂಪನ್ಮೂಲವ್ಯಕ್ತಿಗಳಾದ ವಿದ್ವಾನ್ ವೆಂಕಟ್ರಮಣ ಭಟ್ಟ, ಮೈಸೂರು ಇವರು ಪ್ರಶ್ನೆಪತ್ರಿಕೆಯ ನೀಲನಕ್ಷೆ ಹಾಗೂ ಸ್ವರೂಪವನ್ನು ವಿವರಿಸಿದರು. ಮುಂದಿನ ಅವಧಿಯಲ್ಲಿ ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರುಣ್ ಶಹಾಪೂರರವರೊಂದಿಗೆ ಈಗ ಸಂಸ್ಕೃತ ಭಾಷಾ ಶಿಕ್ಷಣಕ್ಕೆ ಎದುರಾದ ಸವಾಲುಗಳು ಮತ್ತು ಪರಿಹಾರದ ಬಗ್ಗೆ ಸಂವಾದ ನಡೆಯಿತು. ಭಾಷಾ ಸಂಯೋಜನೆಯ ಕುರಿತು ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಭಟ್ಟರವರು ಮಾನ್ಯ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ಪ್ರಥಮ ಭಾಷೆ-ಸಂಸ್ಕೃತ, ದ್ವಿತೀಯ ಭಾಷೆ-ಕನ್ನಡ, ತೃತೀಯ ಭಾಷೆ- ಇಂಗ್ಲೀಷ್ ಈ ಭಾಷಾ ಸಂಯೋಜನೆಯ ಬಗ್ಗೆ ಸಂಬಂಧಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಆದೇಶವು ಜಾರಿಯಾಗುವಂತೆ ಆಗ್ರಹಿಸಿ ಸಂಘದ ವತಿಯಿಂದ ಮನವಿಯನ್ನು ಶಾಸಕರಿಗೆ ನೀಡಲಾಯಿತು. ಮನವಿಗೆ ಸ್ಪಂದಿಸುವುದಾಗಿ ಶ್ರೀ ಅರುಣ್ ಶಹಾಪೂರರವರು ಭರವಸೆ ನೀಡಿದರು.

ಮಾಧ್ಯಮಿಕ ಶಿಕ್ಷಕ ಸಂಘದ ಮಹಿಳಾ ವಿಭಾಗದ ಪ್ರಮುಖರಾದ ಶ್ರೀಮತಿ ಸೀತಾಲಕ್ಷ್ಮೀರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಂಪನ್ನಗೊಂಡಿತು. ಕರ್ನಾಟಕ ಸಂಸ್ಕೃತ ಶಿಕ್ಷಕ ನಿರ್ದೇಶನಾಲಯದ ಮಾನ್ಯ ನಿರ್ದೇಶಕರಾದ ಪ್ರೊ. ವಿ. ಗಿರೀಶ್ಚಂದ್ರ (ಡೀನ್) ರವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ, ಸಂಸ್ಕೃತ ಶಿಕ್ಷಕ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಅಲ್ಲದೇ ಸಂಸ್ಕೃತ ವಿಶ್ವವಿದ್ಯಾನಿಲಯದ ವತಿಯಿಂದ ಪ್ರೌಢಶಾಲಾ ಸಂಸ್ಕೃತ ಭಾಷಾ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ವಚನವಿತ್ತರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲರವರು ಹಾಗೂ ಕೋಶಾಧ್ಯಕ್ಷರಾದ ಶ್ರೀ ಜೆ.ಎಮ್.ಜೋಶಿರವರು ಮತ್ತು ಕಾರ್ಯಾಲಯ ಪ್ರಮುಖರಾದ ಶ್ರೀ ಜಿ.ಎಸ್. ಕೃಷ್ಣಮೂರ್ತಿಯವರು ಸಮಾವೇಶದಲ್ಲಿ ಉಪಸ್ಥಿತರಿದ್ದು ಸೂಕ್ತ ಮಾರ್ಗದರ್ಶನ ನೀಡಿದರು. ಕರ್ನಾಟಕರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಮಾವೇಶಕ್ಕೆ ರಾಜ್ಯದ 21 ಜಿಲ್ಲೆಗಳಿಂದ 120  ಕ್ಕೂ ಹೆಚ್ಹು ಪ್ರೌಢಶಾಲಾ ಸಂಸ್ಕೃತ ಶಿಕ್ಷಕರು ಆಗಮಿಸಿ, ಭಾಷಾ ಶಿಕ್ಷಣದ ಬಗ್ಗೆ ವಿಸ್ತೃತವಾದ ಚರ್ಚೆಯಲ್ಲಿ ಭಾಗವಹಿಸಿದರು.

ವರದಿ : ವಿದ್ವಾನ್ ನಾರಾಯಣ ಭಟ್ಟ, ರಾಜ್ಯಾಧ್ಯಕ್ಷರು, ಕ.ರಾ.ಪ್ರೌ.ಸಂ.ಅ.ಸಂಘ

Highslide for Wordpress Plugin