ಸಂಕಲ್ಪ ದಿನಾಚರಣೆ, ಡೈರಿ ಬಿಡುಗಡೆ ಕಾರ್ಯಕ್ರಮ

ಬೀದರ: ಮಾಧ್ಯಮಿಕ ಶಿಕ್ಷಕರ ಸಂಘದ ಗೌರವ ಸಲಹೆಗಾರರಾದ ಶ್ರೀ ಎನ್.ಪೆಂಟಾರೆಡ್ಡಿಯವರು ಸಂಕಲ್ಪ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಸಂಕಲ್ಪ ಪ್ರತಿಜ್ಞಾ ಪ್ರಮಾಣ ವಚನ ಬೋಧಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆ ಬೀದರನ ಉಪನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಎಸ್. ರವರು ಪದವಿಪೂರ್ವ ಉಪನ್ಯಾಸಕರ ಸಂಘದ ಡೈರಿ ಬಿಡುಗಡೆ ಮಾಡಿ ಮಾತನಾಡಿ ಕರ್ನಾಟಕದಲ್ಲಿ ಬೀದರ ಜಿಲ್ಲೆಯು ಕಿರೀಟದಲ್ಲಿದೆ. ಆದರೆ ಪಿಯುಸಿ ಫಲಿತಾಂಶದಲ್ಲಿ ಕೆಳಮಟ್ಟದಲ್ಲಿದೆ. ಈ ಹಣೆಪಟ್ಟಿಯನ್ನು ನಿವಾರಣೆ ಮಾಡಲು ಶಿಕ್ಷಕರಿಗೆ ಪರೀಕ್ಷೆ ಫಲಿತಾಂಶ ಸುಧಾರಣೆ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಸರಳ ರೀತಿಯಿಂದ ವಿವಿಧ ವಿಷಯಗಳ ಕೈಪಿಡಿ ಸಿದ್ಧಪಡಿಸಿದ್ದು ಮಕ್ಕಳು ಅಧ್ಯಯನ ಮಾಡಿದರೆ ಕನಿಷ್ಟ 50 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಕೊಳ್ಳಬಹುದು ಎಂದು ತಿಳಿಸುತ್ತಾ ಉಪನ್ಯಾಸಕ ವರ್ಗದವರು ಫಲಿತಾಂಶ ಮೇಲ್ಮಟ್ಟಕ್ಕೆ ತರಲು ಪ್ರಯತ್ನಶೀಲರಾಗಬೇಕು ಎಂದು ತಿಳಿಸಿದರು.

ಮಾಧ್ಯಮಿಕ ಶಿಕ್ಷಕರ ಸಂಘದ ಡೈರಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಶ್ರೀ ಶಿವಕುಮಾರ ಸ್ವಾಮಿಯವರು ಬಿಡುಗಡೆ ಮಾಡಿ ಮಾತನಾಡಿ ಪ್ರೌಢ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಸುಧಾರಣೆ ಮಾಡುವಲ್ಲಿ ನಿರಂತರ ಪ್ರಯತ್ನಶೀಲತೆ ಅವಶ್ಯಕತೆ ಇದೆ. ಘಟಕ ಪರೀಕ್ಷೆ, ತ್ರೈಮಾಸಿಕ ಪರೀಕ್ಷೆ, ಗುಂಪು ಚಟುವಟಿಕೆ, ಪರಿಹಾರ ಬೋಧಕ ತರಗತಿಗಳ ಮುಖಾಂತರ ಪರೀಕ್ಷೆಯ ಫಲಿತಾಂಶ ಸುಧಾರಣೆ ಮಾಡಲು ಸಾಧ್ಯವಿದೆ. ಅದೇ ರೀತಿಯಾಗಿ ಪರೀಕ್ಷೆ ಭಯ ಭೀತಿಯನ್ನು ಹೋಗಲಾಡಿಸಲು ಶಿಕ್ಷಕರು ಮಕ್ಕಳ ಜೊತೆಗೆ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಚರ್ಚಿಸಿ ಪರೀಕ್ಷೆ ಸಿದ್ಧತೆ ಹೇಗೆ ಮಾಡಬೇಕೆಂಬುದನ್ನು ಯೋಜನೆ ಹಾಕಿ ಜಿಲ್ಲೆಯ ಪರೀಕ್ಷೆ ಫಲಿತಾಂಶ ಉತ್ತಮ ರೀತಿಯಲ್ಲಿ ಬರುವಂತೆ ಶ್ರಮ ವಹಿಸಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಂಶುಪಾಲರ ಸಂಘದ ಗೌರವಾಧ್ಯಕ್ಷರಾದ ಶ್ರೀ ಶಿವರಾಜ ಪಾಟೀಲರವರು, ಅಧ್ಯಕ್ಷರಾದ ಹಣಮಂತರಾವ ಮೈಲಾರೆ ಹಾಗೂ ಸಂಘದ ಕಾರ್ಯದರ್ಶಿಗಳಾದ ಶ್ರೀ ವಿಠಲದಾಸ ಪ್ಯಾಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ಶ್ರೀ ಬಸವರಾಜ ಸ್ವಾಮಿ ವಹಿಸಿ ಮಾತನಾಡಿದರು. ಉಪನ್ಯಾಸಕರ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಎಣಕೆಮುರೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಚಾರ್ಯರಾದ ಶ್ರೀಮತಿ ಪ್ರತಿಭಾ ಡಿ. ಪ್ರಾರ್ಥನಾ ಗೀತೆ ಹಾಡಿದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶಾಂತಕುಮಾರ ಬಿರಾದಾರ ಸ್ವಾಗತ ಕೋರಿದರು. ಶಿವಕುಮಾರ ಸಾಲಿ ನಿರೂಪಿಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷರಾದ ರಾಜಶೇಖರ ಮಂಗಲಗಿ ವಂದಿಸಿದರು.

Highslide for Wordpress Plugin