ರಾಜ್ಯದ ವಿವಿಧೆಡೆ ಸಂಘದ ಸದಸ್ಯತ್ವ ಅಭಿಯಾನ

ಪ್ರತಿ ವರ್ಷವು ಶಾಲಾ ಕಾಲೇಜುಗಳ ಪ್ರಾರಂಭದ ಅವಧಿ, ಜೂನ್ ಜುಲೈ ತಿಂಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯುತ್ತಿತ್ತು. ಈ ವರ್ಷ ಕೋವಿಡ್-19 ರ ಕಾರಣಕ್ಕಾಗಿ ಸದಸ್ಯತ್ವ ಅಭಿಯಾನ ಆ ತಿಂಗಳಲ್ಲಿ ನಡೆಯುವುದಿಲ್ಲ. ಅದಕ್ಕಾಗಿ ಮಾರ್ಚ್ 17, 2021 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದು ದಿನದ ಸದಸ್ಯತ್ವ ಅಭಿಯಾನವನ್ನು ಮಾಡುವುದು ಎಂದು ಸಂಘದ ಕೋರ್‌ ಕಮಿಟಿ ನಿರ್ಧರಿಸಿದಂತೆ ರಾಜ್ಯದಲ್ಲಿ ಪೂರ್ವ ಮತ್ತು ಯೋಜನಾ ಬದ್ಧವಾಗಿ ತಯಾರಿಯನ್ನು ಮಾಡಲಾಗಿತ್ತು. ಅಂದು ಬೆಳಿಗ್ಗೆ 8.30 ರಿಂದ ಪ್ರಾರಂಭವಾದ ಸದಸ್ಯತ್ವ ಅಭಿಯಾನ ಸಂಜೆಯವರೆಗೂ ನಡೆಯಿತು ಮತ್ತು ಈ ಮಹಾ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಕಾರ್ಯಕರ್ತರಿಗೂ ವಿಶೇಷ ಅನುಭವವಾಯಿತು. ಅನೇಕ ಶಾಲೆಗಳಲ್ಲಿ ತುಂಬಾ ಪ್ರೀತಿಯಿಂದ ಬರಮಾಡಿಕೊಂಡು ಸದಸ್ಯತ್ವ ಪಡೆದರು. ಅನೇಕ ಕಡೆಗಳಲ್ಲಿ ಶಿಕ್ಷಕರು ಶೈಕ್ಷಣಿಕ ಮತ್ತು ಶಿಕ್ಷಕ ಸಮಸ್ಯೆಗಳ ಚರ್ಚೆ ಮಾಡಿದರು. ಅನೇಕರು ಸದಸ್ಯತ್ವಕ್ಕಾಗಿ ಬಂದ ಕಾರ್ಯಕರ್ತರಿಗೆ ಸನ್ಮಾನ ಮಾಡಿ ಕಳಿಸಿದರೆ ಮತ್ತೆ ಕೆಲವು ಕಡೆಗೆ ಮಧ್ಯಾಹ್ನದ ಊಟ ಮಾಡಿಸಿ ಕಳಿಸಿದರು. ಕೋವಿಡ್-19 ಸಂಕಷ್ಟದ ಕಾಲದಲ್ಲಿ ಶಿಕ್ಷಕರ ಮನದಲ್ಲಿ ಸಂಘದ ಬಗ್ಗೆ ಇರುವ ಮನೋಭಾವ, ಅರಿವು ಅನೇಕ ಕಾರ್ಯಕರ್ತರಿಗಾಯಿತು.

ರಾಷ್ಟ್ರೀಯ ಮನೋಭಾವ ಸೇವಾ ಕಾರ್ಯವೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು ಶೈಕ್ಷಣಿಕ ಮತ್ತು ಶಿಕ್ಷಕರ ಒಳಿತು ಚಿಂತನೆಯನ್ನು ಒಳಗೊಂಡಿರುವ ಮಾಧ್ಯಮಿಕ ಶಿಕ್ಷಕ ಸಂಘದ ಅವಶ್ಯಕತೆ ಇದೆ ಎಂದು ಅನೇಕ ಯುವ ಶಿಕ್ಷಕರು ಹೇಳಿದ್ದು ಸಂಘದ ಕಾರ್ಯಕರ್ತರಿಗೆ ಪ್ರೇರಣಾದಾಯಕವಾಗಿತ್ತು. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸದಸ್ಯತ್ವದ ಅಭಿಯಾನದ ಯಶಸ್ವಿಗೆ ಕಾರಣರಾದರು.

ಈ ಅಭಿಯಾನದ ಸಂದರ್ಭದಲ್ಲಿ ಸಂಘದ ಹಿರಿಯರಾದ ಬಾಲಕೃಷ್ಣಭಟ್‌  ಚಾಮರಾಜನಗರದಲ್ಲಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಸಿಂಧನಕೇರಾ ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ಹಿರಿಯರಾದ ಸೀತಾಲಕ್ಷ್ಮಿ, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಚಿದಾನಂದ ಪಾಟೀಲ, ಖಜಾಂಚಿಗಳಾದ ಜೆ.ಎಂ ಜೋಷಿ, ಮಂಡ್ಯದಲ್ಲಿ ಸ.ಪ್ರ.ಕಾ ಗಂಗಾಧರ ಆಚಾರಿ, ಧಾರವಾಡದಲ್ಲಿ ರೋಹಿಣಿ ನಾಯ್ಕ, ಚಿತ್ರದುರ್ಗದಲ್ಲಿ ಕಾರ್ಯದರ್ಶಿಯರಾದ ವೃಷಬೇಂದ್ರ ಸ್ವಾಮಿ, ಬಳ್ಳಾರಿಯಲ್ಲಿ ಆರ್ ಕೊಟ್ರಪ್ಪ, ಗುಂಡಾಚಾರ್, ಕಲಬುರ್ಗಿಯಲ್ಲಿ ಮಹೇಶ ಬಸರಕೋಡ್, ಗದಗದಲ್ಲಿ ಸಂದೀಪ್ ಬೂದಿಹಾಳ್, ಹಾವೇರಿಯಲ್ಲಿ ಓಲೇಕಾರ ಹೀಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ರಾಜ್ಯ ಪದಾಧಿಕಾರಿಗಳಲ್ಲದೆ ಅಲ್ಲಿಯ ಜಿಲ್ಲಾ ಅಧ್ಯಕ್ಷರು ಮತ್ತು ಉಳಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ತಂಡ ಮಹಾ ಅಭಿಯಾನದಲ್ಲಿ ತೊಡಗಿರುವುದು ವಿಶೇಷವಾಗಿತ್ತು. ಈ ವರ್ಷ ಪ್ರತ್ಯಕ್ಷವಾಗಿ ಶಾಲೆಗಳಲ್ಲಿ ಹೋಗಿ ಸದಸ್ಯತ್ವ ಮಾಡುತ್ತಿರುವುದಲ್ಲದೆ ಆನ್‌ಲೈನ್ ಸದಸ್ಯತ್ವ ಅಭಿಯಾನವು ನಡೆಯುತ್ತಿದೆ. ಇದು ಮಾರ್ಚ್ 2021 ರ ಕೊನೆಯವರೆಗೆ ನಡೆಯುತ್ತಿದ್ದು ಈ ವರ್ಷ ಕೋವಿಡ್-19 ರ ಸಂಕಷ್ಟದ ಸ್ಥಿತಿಯಲ್ಲಿಯು ಸದಸ್ಯತ್ವದಲ್ಲಿ ಉತ್ಸಾಹ ತುಂಬಿದೆ.

 

Highslide for Wordpress Plugin