ಗುರುವಂದನಾ ಕಾರ್ಯಕ್ರಮ – ಹುಬ್ಬಳ್ಳಿ

ಗುರು ಪ್ರತಿಯೊಬ್ಬ ವ್ಯಕ್ತಿಯ ಜೀವನ ಯಾತ್ರೆಯಲ್ಲಿ ಮನುಕುಲದ ಒಳಿತಿಗಾಗಿ ತನ್ನ ಬದುಕನ್ನು ಸಮರ್ಪಣಾಭಾವ, ನಿಸ್ವಾರ್ಥ ಸೇವೆಯಿಂದ ತೊಡಗಿಸಿಕೊಂಡಿರುವ ಸಂತ. ಗುರುಗಳು ಇತಿಹಾಸದಲ್ಲಿ ತಮ್ಮ ಸಾಧನೆಯ ಹೆಜ್ಜೆಯ ಗುರುತುಗಳನ್ನು ಸ್ಥಾಪಿಸಿಕೊಂಡು ಮಾದರಿಯಾಗುತ್ತಾರೆ. ಶಿಕ್ಷಕನ ಜೀವನ ಯಾತ್ರೆಯು ಮನುಕುಲದ ಏಳ್ಗೆಗಾಗಿ ಆದರ್ಶಪ್ರಾಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣ ಹೇಳಿದರು. ಅವರು ನಗರದ ಪಿ. ಸಿ. ಜಾಬಿನ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಶಿಕ್ಷಕನಿಗೆ ಕಲಿಸುವುದು ಕೇವಲ ವೃತ್ತಿ ಮಾತ್ರವಲ್ಲ, ಜ್ವಾನ ಪಸರಿಸುವ ಜೀವನ ಯಾತ್ರೆ. ಶಿಕ್ಷಕ ವಿದ್ಯಾರ್ಥಿಗಳಿಗೆ ಉತ್ತಮ ಚಾರಿತ್ರ್ಯ ನಿರ್ಮಿಸುವುದಲ್ಲದೆ ನೈತಿಕ, ತರ್ಕಬದ್ಧ, ಸಹಾನುಭೂತಿ ಮತ್ತು ಕಾಳಜಿಯುಳ್ಳ ವ್ಯಕ್ತಿಗಳನ್ನಾಗಿ ಸಿದ್ಧಪಡಿಸುವುದು. ಗುರು ಮತ್ತು ಶಿಕ್ಷಕರ ನಡುವೆ ಅಂತರ ಬಹಳಷ್ಟಿದೆ. ಶಿಕ್ಷಕನಾದವನು ೬೦ ವರ್ಷಕ್ಕೆ ನಿವೃತ್ತನಾಗಿ ಪಿಂಚಣಿ ಸೌಲಭ್ಯ ಪಡೆದರೆ ಗುರುಗಳಿಗೆ ನಿವೃತ್ತಿ ಅನ್ನುವುದೇ ಇರುವುದಿಲ್ಲ. ಅಷ್ಟೇ ಅಲ್ಲದೆ ಪಗಾರವನ್ನೆ ತೆಗೆದುಕೊಳ್ಳುವುದಿಲ್ಲ. ಪ್ರಾಚೀನದ ಗುರುಗಳು ವ್ಯಕ್ತಿಗತವಾದ ಮಹತ್ವಾಕಾಂಕ್ಷೆಗೆ ಪ್ರಾಧಾನ್ಯತೆ ಕೊಡದೆ, ಶಿಷ್ಯರ ಜೀವನಕ್ಕೆ ಹಿರಿದಾದ ಗುರಿಯನ್ನು ಕೊಡುತ್ತಿದ್ದರು. ನೀನು ಒಂಟಿಯಲ್ಲ, ವಿಶಾಲವಾದ ಈ ಸಮಾಜ ಅವಿಭಾಜ್ಯ ಅಂಗ. ಈ ವಿಶ್ವದ ಅವಿಭಾಜ್ಯ ಅಂಗ. ಅಷ್ಟೇ ಅಲ್ಲ ಸೃಷ್ಠಿಯ ಅವಿಭಾಜ್ಯ ಅಂಗವು ಹೌದು. ಹೀಗಾಗಿ ನಿನ್ನನ್ನು ಬೆಳೆಸುವ ಕುಟುಂಬ, ಶಾಖೆ, ಸಮುದಾಯ, ನಿನ್ನ ಊರು, ದೇಶ, ಜಗತ್ತು ಇದರ ಕಲ್ಯಾಣಕ್ಕೋಸ್ಕರ ಬದುಕಬೇಕು ಎನ್ನುವ ಹಿರಿದಾದ ಗುರಿಯನ್ನು ಕೊಡುತ್ತಿದ್ದರು. ಹಕ್ಕುಗಳನ್ನು ಎಂದೂ ಕಲಿಸುತ್ತಿರಲಿಲ್ಲ. ಕರ್ತವ್ಯವನ್ನು ವಿದ್ಯಾರ್ಥಿಗಳಲ್ಲಿ ಅರಳಿಸುತ್ತಿದ್ದರು. ಹೀಗಾಗಿ ಗುರುವನ್ನು ಈ ದೇಶ ಆಚಾರ್‍ಯ ದೇವೋ ಭವ ಎಂದಿದೆ ಎಂದು ಹೇಳಿದರು.

ಡಾ. ಎಸ್. ಚಿ. ಮೀಸೆ ನಿವೃತ್ತರಾದ ನಿಮಿತ್ತ ಫಲಪುಷ್ಪ ಸ್ಮರಣಿಕೆಯನ್ನು ಸಲ್ಲಿಸುವುದರ ಮೂಲಕ ಸನ್ಮಾನಿಸಲಾಯಿತು. ಡಾ. ಶ್ರೀನಿವಾಸ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು. ಡಾ. ವಿಜಯಲಕ್ಷ್ಮೀ ಚಿಕಲವಾಡರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಸಿ. ವ್ಹಿ. ಮರಿದೇವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಲಿಂಗರಾಜ ಹೊರಕೇರಿ, ಕೆ.ಆರ್.ಎಮ್.ಎಸ್.ಎಸ್. ಅಧ್ಯಕ್ಷರಾದ ಡಾ. ರಘು ಅಕಮಂಚಿ ಹಾಗೂ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಪ್ರಧಾನ ಕಾರ್ಯದರ್ಶಿ ಡಾ. ಜಿ. ಕೆ. ಬಡಿಗೇರ, ಬಸವರಾಜ ದೇವರಮನಿ ಉಪಸ್ಥಿತರಿದ್ದರು. ಡಾ. ರಾಜಕುಮಾರ ಪಾಟೀಲ ವಂದಿಸಿದರು. ವರದಿ : ಸಂದೀಪ ಬೂದಿಹಾಳ

Highslide for Wordpress Plugin