ಶೈಕ್ಷಣಿಕ ಪರಿವಾರದ ಪರಿವರ್ತನೆಗೆ ನಾವು ಶ್ರಮಿಸಬೇಕು : ಮಹೇಂದ್ರ ಕಪೂರ್

ಬೆಂಗಳೂರು : ಧ್ಯೇಯವನ್ನು ತಲುಪಲು ಅವಿರತವಾಗಿ ಶ್ರಮಿಸಿ, ಶೈಕ್ಷಣಿಕ ಪರಿವಾರದ ಪರಿವರ್ತನೆಗೆ ನಾವು ಜೀವನದಲ್ಲಿ ಶ್ರಮಿಸುತ್ತೇವೆ ಎಂಬುದು ಪ್ರತಿಯೊಬ್ಬ ಶಿಕ್ಷಕರ ಧ್ಯೇಯವಾಗಬೇಕು ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ರಾಷ್ಟ್ರೀಯ ಸಂಘಟನಾ ಮಂತ್ರಿಗಳಾದ ಮಹೇಂದ್ರ ಕಪೂರಜೀ ಹೇಳಿದರು.

ನಗರದ ಶೇಷಾದ್ರಿಪುರಂನಲ್ಲಿರುವ ಯಾದವಸ್ಮೃತಿಯ ಕೆ.ಆರ್.ಎಂ.ಎಂ.ಎಸ್ ರಾಜ್ಯ ಕಾರ್ಯಾಲಯದ ಸಭಾಂಗಣದಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಸಂಘದ ಸಂಲಗ್ನತೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ದಿನಾಂಕ 26-09-2021 ರ ರವಿವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಕಾರ್ಯಕಾರಣಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ತೀರ್ಥಕ್ಷೇತ್ರದ ಪ್ರವಾಸ ಮಾಡುವಾಗ ಹೇಗೆ ನಾವು ಭಗವಂತನ ಬಗ್ಗೆ ಧ್ಯಾನಿಸುತ್ತೇವೆಯೋ, ಹಾಗೆಯೇ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಬಗ್ಗೆ ಮಾತ್ರವೇ ಚಿಂತಿಸಬೇಕಾಗಿದೆ ಎಂದು ಶಿಕ್ಷಕರಿಗೆ ತಿಳಿಸಿದರು.

ವಿದ್ಯಾರ್ಥಿಗಳ ಸಮಸ್ಯೆ ತನ್ನದೆಂದು ಶಿಕ್ಷಕ ಭಾವಿಸಿದಾಗ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಮಾಡಲು ಸಾಧ್ಯ. ಸಮಾಜದ ನೇತೃತ್ವವನ್ನು ವಹಿಸಲಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಭೋಧನಾ ಕಾರ್ಯವನ್ನು ಮಾಡಿ, ಪ್ರತಿಶಾಲೆಯನ್ನು ಗುರುಕುಲವನ್ನಾಗಿಸುವತ್ತ ಶಿಕ್ಷಕನ ಪಾತ್ರ ಹೆಚ್ಚಿದೆ ಎಂದು ತಿಳಿಸಿದರು.

ಶಿಕ್ಷಕರಾದವರು ಇಂದಿನ ತಂತ್ರಜ್ಞಾನದ ಜೊತೆಜೊತೆಗೆ ಸಾಗಿ ಶಿಕ್ಷಣದ ಗುಣಮಟ್ಟ ವೃದ್ಧಿಸುವಲ್ಲಿ ತಮ್ಮ ಪಾತ್ರ ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಪ್ರೊ. ಸಂದೀಪ ಬೂದಿಹಾಳ ಮಾತನಾಡಿ, ಪೂರ್ಣ ಯೋಜನೆ ಮತ್ತು ಸತತ ಪ್ರಯತ್ನಗಳಿಂದ ಸಂಘಟನೆಗಳು ಬೆಳೆಯುತ್ತವೆ ಎಂದು ಹೇಳಿದರು.

ಮುಂದಿನ 3 ವರ್ಷಗಳ ಯೋಜನೆಗಳು ತಯಾರಾದವು, ಯಾವ ಜಿಲ್ಲೆಗಳಲ್ಲಿ ಕೆ.ಆರ್.ಎಂ.ಎಸ್.ಎಸ್ ಕಾರ್ಯಭಾರವಿಲ್ಲವೋ ಅಂತಹ ಜಿಲ್ಲೆಗಳಲ್ಲಿ ಕಾರ್ಯವಿಸ್ತಾರವನ್ನು ಮಾಡಿ ತಾಲೂಕು ಹಂತದವರೆಗೆ ಕಾರ್ಯಚಟುವಟಿಕೆಯನ್ನು ವಿಸ್ತರಿಸುವುದು ಮತ್ತು ಮಹಿಳಾ ಕಾರ್ಯ ವಿಸ್ತಾರದ ದೃಷ್ಟಿಯಿಂದ ಅನೇಕ ಕಾರ್ಯ ತಂತ್ರಗಳನ್ನು ನಿರ್ಣಯಿಸಲಾಯಿತು. ಪ್ರವಾಸಿ ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಗೊಳಿಸುವುದರ ಜೊತೆಗೆ ಪೂರ್ಣಾವಧಿ ಕಾರ್ಯಕರ್ತರ ಯೋಜನೆಯನ್ನು ರಾಜ್ಯಾಧ್ಯಕ್ಷರು ಸಿದ್ಧಗೊಳಿಸಿದರು.

ಕಾರ್ಯಕ್ರಮದಲ್ಲಿ ಎಬಿಆರ್‌ಎಸ್‌ಎಂನ ಸಹ ಸಂಘಟನಾ ಕಾರ್ಯದರ್ಶಿಗಳಾದ ಲಕ್ಷ್ಮಣ್‌ಜೀ ಮಾತನಾಡಿ, 3 ವರ್ಷದ ಯೋಜನೆಯನ್ನು ಹಾಕಿಕೊಂಡಿರುವ ಕೆ.ಆರ್.ಎಂಎಸ್‌ಎಸ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಲ್ಲದೆ, ಅದನ್ನು ಕಾರ್ಯರೂಪಕ್ಕೆ ತರಬೇಕೆಂದು ಹೇಳಿದರು.

ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಸ್ವಾತಂತ್ರದ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ನವೀಕರಣ ಮಾಡಿ ಮಾದರಿ ಶಾಲೆಗಳನ್ನು ಮಾಡುವ ಉದ್ದೇಶವನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಒಳಗೊಂಡಿದೆ. ಕಾರ್ಯಕ್ರಮದಲ್ಲಿ ನನ್ನ ಶಾಲೆ ನನ್ನ ತೀರ್ಥಕ್ಷೇತ್ರ ಪೋಸ್ಟರ್‌ನ್ನು ಎ.ಬಿ.ಆರ್.ಎಸ್.ಎಂ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ ಜೀ ಮತ್ತು ಎ.ಬಿ.ಆರ್.ಎಸ್.ಎಂ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧಾನಕೇರಾ ಜೀ ಬಿಡುಗಡೆ ಮಾಡಿದರು.

2021 ರ ಆಗಸ್ಟ್‌ 15 ರಿಂದ 2022 ರ ಆಗಸ್ಟ್ 15 ರೊಳಗೆ 75 ಶಾಲೆಗಳನ್ನು ಗುರುತಿಸಿ ಶಾಲೆಗೆ ಸುಣ್ಣ-ಬಣ್ಣ, ಗೋಡೆಬರಹ, ಮೈದಾನ ಸಿದ್ಧತೆ, ಮಕ್ಕಳಿಗೆ ಕಲಿಕಾ ಪೂರಕ ವಾತಾವರಣ ಸೃಷ್ಟಿ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಶಾಲೆಗಳಲ್ಲಿ ಭಾರತಮಾತೆಯ ಪೂಜೆ, ಚಿಂತನ ಮಂಥನ, ಮಕ್ಕಳಲ್ಲಿ ಭಜನೆ, ಆಧ್ಯಾತ್ಮಿಕತೆ, ಸ್ವಚ್ಛತೆ ಮತ್ತು ಎಲ್ಲ ಶಾಲೆಗಳಿಗಿಂತ ವಿಭಿನ್ನ ಶಾಲೆಯಾಗಿದೆ ಮತ್ತು ಅದು ಸಮಾಜಕ್ಕೆ ಪೂರಕ ಮತ್ತು ಆದರ್ಶ ಶಾಲೆಯಾಗಲೂ ಆ ಶಾಲೆಯಲ್ಲಿರುವ ನಮ್ಮ ಕೆ.ಆರ್.ಎಂ.ಎಸ್.ಎಸ್ ನ ಸ್ವಯಂಸೇವಕರು ಆಗಬೇಕೆಂಬ ಹೆಮ್ಮೆ ನಮ್ಮದು ಎಂದು ಕೆ.ಆರ್.ಎಂ.ಎಸ್.ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಾಟೀಲ ಹೇಳಿದರು.

ಕೆ.ಆರ್.ಎಮ್.ಎಸ್.ಎಸ್.ನ ಕಾರ್‍ಯಾಧ್ಯಕ್ಷರಾದ ಅರುಣ ಶಹಾಪೂರರವರು ಮಾತನಾಡಿ, ಯಾವ ರಾಷ್ಟ್ರದಲ್ಲಿ ಸಾರ್ವಜನಿಕ ಶಿಕ್ಷಣ ಕುಸಿಯುತ್ತದೆಯೋ ಆ ರಾಷ್ಟ್ರವೇ ಮುಂದೆ ಕುಸಿಯುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. 50 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು ಕರ್ನಾಟಕದಲ್ಲಿ ಸಾವಿರಾರು ಇವೆ ಮತ್ತು ಅಂತಹ ಶಾಲೆಗಳು ಕ್ರಮೇಣವಾಗಿ ನಶಿಸಿಹೋಗುತ್ತಿವೆ. ಈ ಕಾರಣಕ್ಕಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕಾಗಿದ್ದು ಶಿಕ್ಷಕರ ಕರ್ತವ್ಯ. ಶಿಕ್ಷಕರು ಸರ್ಕಾರದ ಆದೇಶಕ್ಕಾಗಿ ಕಾಯದೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕೆಆರ್‌ಎಂಎಸ್‌ಎಸ್ ಶಿಕ್ಷಕರಿಗೆ ಯಾವಾಗಲು ಪ್ರೇರಣೆ ನೀಡುತ್ತದೆ ಮತ್ತು ವಿವಿಧ ಸಾಧಕರನ್ನು ಸೇರಿಸಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದು ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯದರ್ಶಿ ಬಾಲಕೃಷ್ಣ ಭಟ್ ಜೀ ಹೇಳಿದರು.

ಸ್ವಾಮಿ ವಿವೇಕಾನಂದರು, ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರ ಪರಂಪರೆಯಲ್ಲಿ ಹುಟ್ಟಿದವರು ನಾವು, ಅವರು ಹಾಕಿಕೊಟ್ಟ ಹಾದಿಯಲ್ಲಿ ಮತ್ತು ಅವರು ನೀಡಿದ ಮಾರ್ಗಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು. ರಾಷ್ಟ್ರಮಟ್ಟದಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು ಕೋವಿಡ್ ಸಮಯದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್ ನಲ್ಲಿ ವಿವಿಧ ವಿಷಯಗಳ ಮೇಲೆ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಪ್ರಕಾಶ ಮೇಟಿ, ಸುಮತಿ.ಎಂ.ಬಿ ಮತ್ತು ಶ್ರೀಮತಿ ಅಡಿಗರವರಿಗೆ ಕರ್ನಾಟಕ ರಾಜ್ಯ ಮಾದ್ಯಮಿಕ ಶಿಕ್ಷಕ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕ ವೃಂದದವರು ಸತ್ಕರಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೂರಾರು ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಯುತ ಚಿದಾನಂದ ಪಾಟೀಲ ನಿರೂಪಿಸಿದರು, ಶ್ರೀಯುತ ಗಂಗಾಧರಾಚಾರ್ಯರವರು ಸ್ವಾಗತಿಸಿದರು, ಶ್ರೀಮತಿ ಮನೋರಮರವರು ವಂದಿಸಿದರು.

Highslide for Wordpress Plugin