ಕಾಲೇಜು ಅತಿಥಿ ಉಪನ್ಯಾಸಕರ ಕುರಿತು ರಾಜ್ಯ ಸರ್ಕಾರದಿಂದ ಐತಿಹಾಸಿಕ ನಿರ್ಧಾರ – ಕೆ.ಆರ್.ಎಮ್.ಎಸ್.ಎಸ್. ಸ್ವಾಗತ

ಅತಿಥಿ ಉಪನ್ಯಾಸಕರ ಬಹು ವರ್ಷಗಳ ಸಮಸ್ಯೆಯ ಪರಿಹಾರಕ್ಕಾಗಿ ರಾಜ್ಯಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆ.ಆರ್.ಎಮ್.ಎಸ್.ಎಸ್.) ಸ್ವಾಗತಿಸುತ್ತದೆ. ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರ ಬೇಡಿಕೆಗಳ ಕುರಿತಂತೆ ಕೆ.ಆರ್.ಎಮ್.ಎಸ್.ಎಸ್. ಹಲವಾರು ಬಾರಿ ರಾಜ್ಯದ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿಕೊಂಡಿತ್ತು. ಕಳೆದ ಒಂದು ತಿಂಗಳಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದರು. ಈ ಹೋರಾಟಕ್ಕೆ ಕೆ.ಆರ್.ಎಮ್.ಎಸ್.ಎಸ್. ಬೆಂಬಲಕೊಟ್ಟು, ಉನ್ನತ ಶಿಕ್ಷಣ ಸಚಿವರಿಗೆ ನಿಯೋಗದಲ್ಲಿ ತೆರಳಿ ಮನವಿಯನ್ನು ಕೂಡಾ ಸಲ್ಲಿಸಿತ್ತು. ರಾಜ್ಯ ಸರ್ಕಾರ ಈ ಸಮಸ್ಯೆಯ ಪರಿಹಾರಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ಕೂಡಾ ರಚಿಸಿ, ಧನಾತ್ಮಾಕವಾಗಿ ಸ್ಪಂದಿಸಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣೀಸಿ, ಕಳೆದ 20 ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಮಾನ್ಯಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ, ಶಿಕ್ಷಕ ಹಾಗೂ ವಿದ್ಯಾರ್ಥಿಸ್ನೇಹಿಗಳಾದ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಮಾನ್ಯಶ್ರೀ ಡಾ: ಸಿ.ಎನ್. ಅಶ್ವತ್ಥ್‌ನಾರಾಯಣ ಅವರಿಗೆ ಕೆ.ಆರ್.ಎಮ್.ಎಸ್.ಎಸ್. ಧನ್ಯವಾದಗಳನ್ನು ಸಮರ್ಪಿಸುತ್ತದೆ.

ಈ ಸಮಸ್ಯೆಯನ್ನು ಪರಿಹರಿಸಲು ಅವಿರತ ಪ್ರಯತ್ನ ಮಾಡಿದ ಮಾನ್ಯ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಅರುಣ ಶಹಾಪೂರ, ಶ್ರೀ ಆಯನೂರು ಮಂಜುನಾಥ, ಶ್ರೀ ಎಸ್.ವಿ. ಸಂಕನೂರ, ಶ್ರೀ ಶಶಿಲ್ ನಮೋಶಿ, ಶ್ರೀ ಹಣಮಂತ ನಿರಾಣಿ, ಶ್ರೀ ಪುಟ್ಟಣ್ಣ, ಶ್ರೀ ವೈ.ಎ. ನಾರಾಯಣಸ್ವಾಮಿ ಹಾಗೂ ರಾಜ್ಯದ ಎಲ್ಲಾ ಪದವೀಧರ ಹಾಗೂ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳಿಗೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಕುಮಾರ ನಾಯಕ, ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ಪ್ರದೀಪ.ಪಿ ಅವರನ್ನು ಮಹಾವಿದ್ಯಾಲಯ ಶಿಕ್ಷಕ ಸಂಘ ಕೃತಜ್ಞತೆಗಳನ್ನು ಸಮರ್ಪಿಸುತ್ತದೆ.

ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಪತ್ರದಲ್ಲಿ ಈಗಿರುವ ಕಾರ್ಯಭಾರ 8-10 ನ್ನೂ 15 ಗಂಟೆಗಳಿಗೆ ಹೆಚ್ಚಿಸಿ, 26000/- ರೂ. ಗಳಿಂದ 32000/- ರೂ.ಗಳವರೆಗೆ 4 ಸ್ಥರಗಳಲ್ಲಿ ವೇತನವನ್ನು ಹೆಚ್ಚಿಸಿದ ವಿವರಗಳನ್ನು ತಿಳಿಸಿದೆ. ಅಧ್ಯಾಪಕರುಗಳಿಗೆ ಪೂರ್ಣ ಸಮಯದ ಕಾರ್‍ಯಭಾರ ಕೊಡುವುದರಿಂದಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅನುಕೂಲವಾಗಲಿದೆ. ಉಪನ್ಯಾಸಕರು ಪೂರ್ಣ ಸಮಯ ಕಾಲೇಜುಗಳಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೂ ಇದರ ಲಾಭವಾಗಲಿದೆ.

ಇದೆ ಸಮಯದಲ್ಲಿ ಈ ನಿರ್ಧಾರದಿಂದಾಗಿ ಹಲವಾರು ಅತಿಥಿ ಉಪನ್ಯಾಸಕರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭೀತಿಯು ಇದೆ. ಆ ಕಾರಣಕ್ಕಾಗಿ ಅವರ ಎಲ್ಲರ ಸಮಸ್ಯೆಯನ್ನು ಪರಿಗಣೀಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ನ್ಯಾಯ ಒದಗಿಸಿಬೇಕೆಂದು ಮಹಾವಿದ್ಯಾಲಯ ಶಿಕ್ಷಕ ಸಂಘ ಒತ್ತಾಯಿಸುತ್ತದೆ. ಅತಿಥಿ ಉಪನ್ಯಾಸಕರ ಸೇವೆಯನ್ನು 10  ತಿಂಗಳ ಬದಲಾಗಿ 12 ತಿಂಗಳೂ ಮುಂದುವರೆಸಿ, 1 ದಿನದ ಸೇವೆಗೆ ಮಾತ್ರ ವಿರಾಮ ಕೊಟ್ಟು ಮತ್ತೆ ನಿಯುಕ್ತಿಗೊಳಿಸಿದರೆ, ಅವರು ಪೂರ್ಣ ಒಂದು ವರ್ಷ ಕಾರ್‍ಯ ಮಾಡಿದ ಹಾಗೆ ಆಗುತ್ತದೆ. ಸೇವಾ ಭದ್ರತೆಗಾಗಿ ಹೋರಾಟ ಮಾಡಿದ ಅತಿಥಿ ಉಪನ್ಯಾಸಕರಿಗೆ ಭದ್ರತೆಯನ್ನು ಕೊಟ್ಟು, ಅನಿಶ್ಚಿತತೆಯಿಂದ ಮುಕ್ತ ಮಾಡಬೇಕೆಂದು ಕೆ.ಆರ್.ಎಮ್.ಎಸ್.ಎಸ್. ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳಲ್ಲಿ ಹಾಗೂ ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಸಲ್ಲಿಸುತ್ತದೆ.

Highslide for Wordpress Plugin