ರಾಷ್ಟ್ರೀಯ ಕಾರ್‍ಯಕಾರಿಣಿ – ಒಂದು ವರದಿ

ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘವು ಸ್ವಾತಂತ್ರ್ಯದ ಅಮೃತೋತ್ಸವದ ಸಂದರ್ಭದಲ್ಲಿ ಆಗಸ್ಟ್ 1 ರಂದು ಒಂದೇ ದಿನ ಒಂದು ಲಕ್ಷ ವಿದ್ಯಾಲಯಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ದೇಶದ 75 ವಿಶ್ವವಿದ್ಯಾಲಯಗಳಲ್ಲಿ ಅಮೃತೋತ್ಸವದ ವಿಷಯದಲ್ಲಿ ಸೆಮಿನಾರ್‌ಗಳನ್ನು ಮತ್ತು 750 ಮಹಾವಿದ್ಯಾಲಯಗಳಲ್ಲಿ ವ್ಯಾಖ್ಯಾನವನ್ನು ಆಯೋಜಿಸುವ ಗುರಿಯನ್ನು ಹೊಂದಿದೆ ಎನ್ನುವ ನಿರ್ಣಯವನ್ನು ಗುಜರಾತ್ ರಾಜ್ಯದ ವಡೋದರದ ಓಂ ರೀಜೆನ್ಸಿಯಲ್ಲಿ ದಿನಾಂಕ 26 ಮತ್ತು 27 ರ ಫೆಬ್ರವರಿ 2022  ರಂದು ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಕಾರ್‍ಯಕಾರಿಣಿಯಲ್ಲಿ ತೆಗೆದುಕೊಳ್ಳಲಾಯಿತು.

ಬೈಠಕ್ ಅನ್ನು ಉದ್ದೇಶಿಸಿ ಮಾತನಾಡುವಾಗ ಸಂಘಟನೆಯ ಅಧ್ಯಕ್ಷರಾದ ಜೆ.ಪಿ. ಸಿಂಘಾಲ್‌ರವರು ಈ ಸಮಯ ಸಾಮಾಜಿಕ ಪರಿವರ್ತನೆಯ ಕಾಲ ಮತ್ತು ಸಾಮಾಜಿಕ ಪರಿವರ್ತನೆಯ ಕಾರ್ಯವನ್ನು ಶಿಕ್ಷಕರೇ ಮಾಡಬೇಕೆಂದರು. ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಅನುಷ್ಟಾನಗೊಳಿಸುವ ಜವಾಬ್ದಾರಿಯು ಶಿಕ್ಷಕರ ಮೇಲಿದೆ ಎಂದು ಹೇಳಿದರು. ಮಹಾಸಂಘದ ಕಾರ್ಯಕರ್ತ ಶಿಕ್ಷಕರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೇಗೆ ಕ್ರಿಯಾನ್ವಯನಗೊಳಿಸಬೇಕೆಂದು ಗಮನದಲ್ಲಿಟ್ಟುಕೊಳ್ಳಬೇಕೆಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಆಗುವ ಲಾಭಗಳೇನು ಎನ್ನುವ ವಿಷಯವನ್ನು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ತಲುಪಿಸುವ ಅವಶ್ಯಕತೆಯನ್ನು ಪೂರೈಸುವ ಜವಾಬ್ದಾರಿ ಮಹಾಸಂಘದ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.

ಕಾರ್‍ಯಕಾರಿಣಿಯಲ್ಲಿ ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಹೇಗೆ ಸಮಾಧಾನ ಪಡಿದುಕೊಳ್ಳುವುದು ಎನ್ನುವದರ ಬಗ್ಗೆಯೂ ಚರ್ಚಿಸಲಾಯಿತು. ಕೇಂದ್ರಕ್ಕೆ ಸಂಬಂಧಿಸಿದ ಶಿಕ್ಷಕರ ಸಮಸ್ಯೆಗಳಿಗೆ ಆದಷ್ಟು ಬೇಗ ಕೇಂದ್ರದ ಶಿಕ್ಷಣ ಮಂತ್ರಿಗಳನ್ನು ಹಾಗೂ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಜ್ಯ ಸಂಘಟನೆಗಳ ಮೂಲಕ ರಾಜ್ಯ ಸರಕಾರಗಳ ಗಮನವನ್ನು ಸೆಳೆಯುವುದಾಗಿ ತೀರ್ಮಾನಿಸಲಾಯಿತು.

ಇದೇ ಸಮಯದಲ್ಲಿ ಸಂಘಟನಾತ್ಮಕ ವಿಷಯಗಳು ಹಾಗೂ ಮುಂಬರುವ ಸಮಯದಲ್ಲಿ ಮಹಾಸಂಘವು ಕೈಗೊಳ್ಳುವ ಕಾರ್ಯಕ್ರಮಗಳ ರೂಪುರೇಷೆಯನ್ನು ತಯಾರು ಮಾಡಲಾಯಿತು. ಸಂಘಟನೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಶಿಕ್ಷಕರ ಹಾಗೂ ವಿಶ್ವವಿದ್ಯಾಲಯಗಳ ಸಂಘಟನೆಗಳ ಉಪಸ್ಥಿತಿ ಉಲ್ಲೇಖನೀಯವಾಗಿತ್ತು.

ಕಾರ್‍ಯಕಾರಿಣಿಯಲ್ಲಿ ಅಕ್ಟೋಬರ್‌ನಲ್ಲಿ ನಡೆದ ಕಾರ್ಯಕಾರಿಣಿಯ ನಂತರದಲ್ಲಿ ರಾಜ್ಯ ಸಂಘಟನೆಗಳು ಕೈಗೊಂಡಿರುವ ವರದಿಗಳನ್ನು ನೀಡಲಾಯಿತು. ಕರ್ನಾಟಕದಿಂದ ರಾಷ್ಟ್ರೀಯ ಸಹ ಸಂಘಟನಾ ಮಂತ್ರಿಯಾದ ಶ್ರೀ ಲಕ್ಷ್ಮಣಜೀ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಸಿಂಧನಕೇರಾರವರು, ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಮುಖರಾದ ಶ್ರೀ ಬಾಲಕೃಷ್ಣಭಟ್‌ಜೀ, ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಡಿ.ಕೆಯವರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸಂದೀಪ್ ಬೂದಿಹಾಳ್‌ರವರು, ಕಾರ್‍ಯಾಧ್ಯಕ್ಷರಾದ ಶ್ರೀ ಅರುಣ್ ಶಹಾಪೂರ್‌ರವರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿದಾನಂದ ಪಾಟೀಲ್‌ರವರು ಉಪಸ್ಥಿತರಿದ್ದರು.

Highslide for Wordpress Plugin